Food Oil Price: ಖಾದ್ಯ ತೈಲ ಬೆಲೆಯಲ್ಲಿ ಇಳಿಕೆ! ಆಮದು ಪ್ರಮಾಣ ಗಣನೀಯ ಏರಿಕೆ!

Lower price of food oil increase in import

Food Oil Price: ಖಾದ್ಯ ತೈಲವು (Food Oil Price) ಮೊದಲಿಗಿಂತ ಅಗ್ಗವಾಗಿದೆ. ಹೌದು, ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣಗೈದ ನಂತರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಈಗ ಕುಸಿದಿರುವುದು ಸಂತೋಷda ವಿಚಾರವಾಗಿದೆ.

ಮುಖ್ಯವಾಗಿ ಸೂರ್ಯಕಾಂತಿ ಎಣ್ಣೆ ಅತಿ ಹೆಚ್ಚು ಏರಿಳಿತ ಕಂಡಿದೆ. ಅಲ್ಲದೆ, ಭಾರತದ ತೈಲ ಆಮದು ದಾಖಲೆಯು ಎತ್ತರಕ್ಕೆ ತಲುಪಿದೆ. ಕಳೆದ 2-3 ವರ್ಷಗಳಲ್ಲಿ ಗಮನಿಸಿದಾಗ, 2020ರ ಮೇ ತಿಂಗಳಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಜಾಗತಿಕ ತರಕಾರಿ ತೈಲಗಳ ಬೆಲೆ ಸೂಚ್ಯಂಕವು (2014-16 ಮೂಲ ಅವಧಿಯ ಮೌಲ್ಯ = 100) 77.8 ಪಾಯಿಂಟ್​ಗಳಿಗೆ ಇಳಿದಿತ್ತು. ಆದರೆ, 2022ರ ಮಾರ್ಚ್​ನಲ್ಲಿ ರಷ್ಯಾ-ಯೂಕ್ರೇನ್ ಯುದ್ಧ ಆರಂಭದ ನಂತರ ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 251.8 ಕ್ಕೆ ಏರಿತು. ಈಗ ಮತ್ತೆ 2023ರ ಏಪ್ರಿಲ್ ಹೊತ್ತಿಗೆ 130 ಅಂಕಗಳಿಗೆ ಇಳಿದಿದೆ.

ಮುಖ್ಯವಾಗಿ ಅತಿ ಹೆಚ್ಚು ಬೆಲೆ ಏರಿಕೆ ಮತ್ತು ಇಳಿಕೆಗೆ ಸಾಕ್ಷಿಯಾದ ತೈಲವೆಂದರೆ ಸೂರ್ಯಕಾಂತಿ. ಏಕೆಂದರೆ, 2021-22ರಲ್ಲಿ ಯೂಕ್ರೇನ್ ಮತ್ತು ರಷ್ಯಾ ಒಟ್ಟಾಗಿ ಈ ಎಣ್ಣೆಬೀಜದ ಜಾಗತಿಕ ಉತ್ಪಾದನೆಯ ಶೇಕಡಾ 58ರಷ್ಟನ್ನು ಉತ್ಪಾದಿಸಿದ್ದವು. ಯುದ್ಧ ಆರಂಭವಾದ ನಂತರ ಕಪ್ಪು ಸಮುದ್ರದ ಬಂದರುಗಳ ಮೂಲಕ ಸೂರ್ಯಕಾಂತಿ ಸರಬರಾಜು ಸ್ಥಗಿತಗೊಳ್ಳುತ್ತಿದ್ದಂತೆಯೇ ಬೆಲೆಗಳು ಗಗನಕ್ಕೇರಿದವು.

2022ರ ಜನವರಿಯಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾದ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಬೆಲೆ ಪ್ರತಿ ಟನ್​ಗೆ ಸರಾಸರಿ 1,475 ಡಾಲರ್. ಕಚ್ಚಾ ಸೋಯಾಬಿನ್ ತೈಲಕ್ಕೆ (1,506 ಡಾಲರ್) ಮತ್ತು ತಾಳೆ ಎಣ್ಣೆಗೆ (1,490 ಡಾಲರ್) ಈ ರೀತಿ ಹೋಲಿಸಿದರೆ ಈ ಬೆಲೆ ಕಡಿಮೆಯಾಗಿತ್ತು. ಆದರೆ, 2022ರ ಏಪ್ರಿಲ್ ಹೊತ್ತಿಗೆ ಸೂರ್ಯಕಾಂತಿ ಎಣ್ಣೆಯ ಸರಾಸರಿ ಆಮದು ಬೆಲೆ ಪ್ರತಿ ಟನ್​ಗೆ 2,155 ಡಾಲರ್ ಆಗಿತ್ತು. ಪ್ರತಿ ಟನ್ ಸೋಯಾಬೀನ್​ಗೆ 1,909 ಡಾಲರ್ ಮತ್ತು ತಾಳೆಗೆ 1,748 ಡಾಲರ್ ಬೆಲೆ ಇತ್ತು.

ಪ್ರಮುಖವಾಗಿ 2022ರ ಜುಲೈನಲ್ಲಿ ರಷ್ಯಾ ಮತ್ತು ಯೂಕ್ರೇನ್ ನಡುವಿನ ಕಪ್ಪು ಸಮುದ್ರದ ಧಾನ್ಯ ಯೋಜನೆ ಒಪ್ಪಂದದೊಂದಿಗೆ ಯೂಕ್ರೇನ್​ನ ಮೂರು ಬಂದರುಗಳಿಂದ ಧಾನ್ಯ ಮತ್ತು ಆಹಾರ ಪದಾರ್ಥಗಳನ್ನು ಹಡಗುಗಳ ಮೂಲಕ ರವಾನೆ ಮಾಡುವುದನ್ನು ಸುಗಮಗೊಳಿಸಿತು. ಇದರಿಂದಾಗಿ ಯೂಕ್ರೇನ್​ನಲ್ಲಿ ಸಂಗ್ರಹವಾದ ಸೂರ್ಯಕಾಂತಿ ಎಣ್ಣೆ ಮತ್ತು ಬೀಜವನ್ನು ಹೊರಕ್ಕೆ ಸಾಗಿಸಲು ಅನುಕೂಲವಾಯಿತು. ಇದು ಸೂರ್ಯಕಾಂತಿ ಎಣ್ಣೆಯ ಬೆಲೆ ಯುದ್ಧಪೂರ್ವದ ಮಟ್ಟಕ್ಕಿಂತ ಕೆಳಗಿಳಿಯಲು ಕಾರಣವಾಯಿತು.

ಸದ್ಯ ಸೂರ್ಯಕಾಂತಿ ಎಣ್ಣೆಯನ್ನು ಪ್ರಸ್ತುತ ಪ್ರತಿ ಟನ್​ಗೆ 950 ಡಾಲರ್ ಬೆಲೆಯಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ಪ್ರತಿಸ್ಪರ್ಧಿ ತೈಲವಾದ ಸೋಯಾಬೀನ್​ಗಿಂತಲೂ (ಪ್ರತಿ ಟನ್​ಗೆ 990 ಡಾಲರ್) ಬೆಲೆ ಕಡಿಮೆ ಇದೆ.

ಮೂಲತಃ ಭಾರತದ ಸೂರ್ಯಕಾಂತಿ ಎಣ್ಣೆ ಆಮದು 2021-22 ರಲ್ಲಿ 23,864 ಕೋಟಿ ರೂ. ಮತ್ತು 2022-23ರಲ್ಲಿ 25,852 ಕೋಟಿ ರೂ. ಮೌಲ್ಯದ್ದಾಗಿದೆ. ಈ ಎರಡೂ ವರ್ಷಗಳಲ್ಲಿ ಆಮದು ಪ್ರಮಾಣ ಸರಿಸಮನಾಗಿಯೇ (20 ಲಕ್ಷ ಟನ್) ಇತ್ತು. ಬೆಲೆಯಲ್ಲಿ ಮಾತ್ರ ವ್ಯತ್ಯಾಸವಾಗಿತ್ತು.

ಆದರೆ, ಆಮದಿನಲ್ಲಿ ಯೂಕ್ರೇನ್​ನ ಪಾಲು 2021-22ರಲ್ಲಿ 14.8 ಲಕ್ಷ ಟನ್​ನಿಂದ 2022-23 ರಲ್ಲಿ 4.3 ಲಕ್ಷ ಟನ್​ಗೆ ಕುಸಿಯಿತು. ರಷ್ಯಾದ ಪಾಲು 3.4 ಲಕ್ಷ ಟನ್​ನಿಂದ 5.7 ಲಕ್ಷ ಟನ್​ಗೆ, ಅರ್ಜೆಂಟೀನಾದ ಪಾಲು 1.9 ಲಕ್ಷ ಟನ್​ನಿಂದ 4.3 ಲಕ್ಷ ಟನ್​ಗೆ, ರೊಮೇನಿಯಾದ ಪಾಲು 20 ಸಾವಿರದಿಂದ 2 ಲಕ್ಷ ಟನ್​ಗೆ, ಬಲ್ಗೇರಿಯಾದ ಪಾಲು 20 ಸಾವಿರದಿಂದ 1.6 ಲಕ್ಷ ಟನ್​ಗೆ ಏರಿತು.

ಇದೀಗ ಪ್ರತಿ ಟನ್​ಗೆ 950 ಡಾಲರ್ ದರದಲ್ಲಿ ಭಾರತಕ್ಕೆ ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡರೆ ಅದರ ಬೆಲೆ ಒಂದು ಕೆಜಿಗೆ ಅದಾಜು 78.7 ರೂಪಾಯಿ ಆಗುತ್ತದೆ. ಶೇಕಡಾ 5.5 ಆಮದು ಸುಂಕ ಮತ್ತು 6 ರೂ.ಗಳ ಸಂಸ್ಕರಣಾ ವೆಚ್ಚ ಸೇರಿಸಿದರೆ ಈ ದರವು ಕೆಜಿಗೆ 89 ರೂಪಾಯಿಗೆ ತಲುಪುತ್ತದೆ. ಪ್ಯಾಕ್ ಮಾಡಿದ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಈಗ ಬೆಂಗಳೂರು ಮತ್ತು ಚೆನ್ನೈನಲ್ಲಿ ಕೆಜಿಗೆ 119-120 ರೂ.ಗೆ ಮಾರಾಟವಾಗುತ್ತಿದೆ. ಆಮದು ಬೆಲೆ ಪ್ರತಿ ಟನ್​ಗೆ 2,100-2,200 ಡಾಲರ್​ಗೆ ಏರಿದಾಗ (2022ರ ಏಪ್ರಿಲ್ ಅವಧಿಯಲ್ಲಿ) 190-200 ರೂಪಾಯಿಗೆ ಮಾರಾಟವಾಗುತ್ತಿತ್ತು.

ಮುಖ್ಯವಾಗಿ ದೇಶವು ಸೂರ್ಯಕಾಂತಿ ಎಣ್ಣೆಯ ಬಳಕೆಯಲ್ಲಿ ಶೇಕಡಾ 70ರಷ್ಟು ಪಾಲು ದಕ್ಷಿಣ ರಾಜ್ಯಗಳದ್ದಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಸೂರ್ಯಕಾಂತಿಯನ್ನು ಸಾಂಪ್ರದಾಯಿಕವಾಗಿ ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಬೆಳೆಯಲಾಗುತ್ತದೆ.

ಇದನ್ನೂ ಓದಿ:Girl Death: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ಬಾಲಕಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು!

Leave A Reply

Your email address will not be published.