ಅಕ್ರಮ ಮರಳು ಗಣಿಗಾರಿಕೆ: 5 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆ
Illegal sand mining in Udupi 5 tipper and lorries seized
Udupi : ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ 5 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು ಕೊಂಡ ಬಗ್ಗೆ ವರದಿಯಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಹಟ್ಟಿಯಂಗಡಿ ಹಾಗೂ ಹೆಮ್ಮಾಡಿ ಪರಿಸರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಕುಮಾರಿ ಬಿ.ಎನ್ ಅವರು ಸಿಬಂದಿಗಳೊಂದಿಗೆ ದಾಳಿ ನಡೆಸಿ 5 ಟಿಪ್ಪರ್ ಲಾರಿಗಳನ್ನು ವಶ ಪಡಿಸಿಕೊಂಡಿದ್ದಾರೆ.
ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಹಟ್ಟಿಕುದ್ರು, ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಎಂಬಲ್ಲಿ ಪಂಚಗಂಗವಲ್ಲಿ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದರು.
ಸಾರ್ವಜನಿಕ ದೂರಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ.ಯು ಅವರ ಮಾರ್ಗದರ್ಶನದಲ್ಲಿ ಸಂಧ್ಯಾ ಕುಮಾರಿ ಹಾಗೂ ಸಿಬಂದಿಗಳು ಮೇ. 19 ರ ರಾತ್ರಿ 10 ಗಂಟೆಗೆ ಹಟ್ಟಿಕುದ್ರು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಮರಳು ದಕ್ಕೆಯಲ್ಲಿದ್ದ 4 ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ 1 ಗಂಟೆಗೆ ಕನ್ನಡಕುದ್ರು ಎಂಬಲ್ಲಿ ದಾಳಿ ನಡೆಸಿ ಮರಳು ಸಹಿತ 1 ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಭೂವಿಜ್ಞಾನ ಇಲಾಖೆಯಿಂದ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರಗಿಸುವ ತನಕ ವಶ ಪಡಿಸಿಕೊಂಡಿರುವ 4 ಲಾರಿಗಳು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ 1 ಲಾರಿಯನ್ನು ಕುಂದಾಪುರ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ.