Bengaluru voters: ಮತ ಚಲಾಯಿಸಿ ಬೆರಳು ತೋರಿಸಿ, ನಿಮ್ಮಿಷ್ಟದ ತಿಂಡಿ ಸವಿಯಿರಿ, ಹಾಗೇ ಫ್ರೀ ಸಿನಿಮಾ ನೋಡ್ಕೊಂಡು ಬನ್ನಿ: ತುರ್ತು ವಿಚಾರಣೆ ನಡೆಸಿ ಕೋರ್ಟು ಅಸ್ತು !
Free food, movie tickets, amusement park discounts await Bengaluru voters
Bengaluru voters: ಬೆಂಗಳೂರು (ಮೇ.9): ಇಂದು ನಡೆಯಲಿರುವ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಬೇಕೆಂಬ ಸದುದ್ದೇಶದಿಂದ ಕೆಲವೊಂದು ಹೊಟೇಲುಗಳಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಆಹಾರ ನೀಡಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ BBMP ಯವರು ಈ ಉತ್ತಮ ಕಾರ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿತ್ತು. ರಾಜ್ಯ ಹೋಟೆಲ್ ಮಾಲೀಕರ ಸಂಘಟನೆ ಬಿಬಿಎಂಪಿ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಹೋಟೆಲ್ ಮಾಲೀಕರು ಸಂಘದ ನಡೆಯನ್ನು ಬೆಂಬಲಿಸಿದೆ. ಹಾಗಾಗಿ ಇವತ್ತು ಮತದಾನ ಮಾಡಿ ಬೆರಳಿಗೆ ಹಾಕಿದ ಶಾಯಿ ತೋರಿಸಿದರೆ ಸಾಕು, ಭರ್ಜರಿ ಊಟ ಮತದಾರರಿಗೆ (Bengaluru voters) ದೊರೆಯಲಿದೆ.
ನಿನ್ನೆ ಬಿಬಿಎಂಪಿ ನಡೆ ಪ್ರಶ್ನಿಸಿ ಹೋಟೆಲ್ ಮಾಲೀಕರ ಸಂಘಟನೆ ತುರ್ತು ಅರ್ಜಿಸಿ ಸಲ್ಲಿಸಿ ಕೋರ್ಟ್ ಕದ ತಟ್ಟಿತ್ತು. ಮತದಾನದ ನಂತರ ಉಚಿತ ಊಟ ನೀಡದಂತೆ ಬಿಬಿಎಂಪಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಆ ತುರ್ತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮತದಾನದ ನಂತರ ಊಟ ನೀಡಲು ಅನುಮತಿ ನೀಡಿದೆ. ಇದು ಮತದಾನದ ಉತ್ತೇಜನಕ್ಕೆ ನೀಡಲಾಗುವ ಕೊಡುಗೆ ಎಂದು ಊಟ ನೀಡಲು ಅವಕಾಶ ಕಲ್ಪಿಸಿದೆ.
ಹೈಕೋರ್ಟು ನ್ಯಾಯಮೂರ್ತಿ ಶಿವಶಂಕರೇ ಗೌಡ ಅವರಿಂದ ಈ ಆದೇಶ ಹೊರಬಿದ್ದಿದ್ದು, ತನ್ಮೂಲಕ ಬಿಬಿಎಂಪಿ ನೀಡಿದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
ಇಂದು ಮತದಾನ ಮಾಡಿದವರಿಗೆ ಉಚಿತ ಊಟ ಹಾಗೂ ಸಿನಿಮಾ ಟಿಕೇಟ್ ಕೊಡುವುದಾಗಿ ಆಫರ್ ನೀಡಿದ ಹೋಟೆಲ್ ಮಾಲೀಕರಿಗೆ ಚುನಾವಣಾ ಆಯೋಗ ನೋಟಿಸ್ ಕೊಟ್ಟಿತ್ತು. ರಾಜ್ಯ ಚುನಾವಣಾ ಸಮಯದಲ್ಲಿ ಹೋಟೆಲ್ ನಲ್ಲಿ ಆಫರ್ ಕೊಡುವುದು ಕಾನೂನು ಅಪರಾಧ ಎಂದು ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದರು. ಹೋಟೆಲ್ ಮಾಲೀಕರು ನೀಡುವ ಉಚಿತ ಊಟ ಮತ್ತು ತಿಂಡಿಗಳ ವ್ಯವಸ್ಥೆಯಲ್ಲಿ ಸ್ವಾರ್ಥ ಅಡಗಿದೆ ಎಂದು ಆಯೋಗವು ತನ್ನ ಅನುಮಾನವನ್ನು ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ, ಹೊಟೇಲ್ ಚುನಾವಣೆಯನ್ನು ತನ್ನ ಬಂಡವಾಳ ಮಾಡಿಕೊಂಡಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಹೋಟೆಲ್ ನೀಡಿರುವ ಆಫರ್ ಗೆ ಬ್ರೇಕ್ ಹಾಕಿತ್ತು. ಆದರೆ ಈಗ ಹೋಟೆಲ್ಗಳ ಈ ಆಫರ್ ಗೆ ಹೈಕೋರ್ಟ್ ಅಸ್ತು ಎಂದಿದ್ದು, ಬಿಬಿಎಂಪಿ ಆದೇಶವನ್ನು ಕೋರ್ಟು ರದ್ದುಪಡಿಸಿದೆ. ಹೀಗಾಗಿ ಮತದಾರರು ಇಂದು ತಾವು ಮತ ಚಲಾಯಿಸಿ ಬಳಿಕ ಆಫರ್ ನೀಡಿರುವ ಹೋಟೆಲ್ ಗೆ ಹೋಗಿ ಕೇವಲ ಬೆರಳು ತೋರಿಸಿದರೆ ಸಾಕು, ಗಡದ್ದಾಗಿ ತಮ್ಮಿಷ್ಟದ ತಿಂಡಿ ತಿನಿಸು ಸವಿಯಬಹುದು.