Mangalore Murder Case: ಮಂಗಳೂರು ನೆಹರೂ ಮೈದಾನ್ ಕೊಲೆ: ಒಂದು ಹಳೆಯ ಮೊಬೈಲ್’ಗಾಗಿ ನಡೆದಿತ್ತು ಹತ್ಯೆ !
Mangalore Murder Case Update: ಮೊಬೈಲ್ ಗಾಗಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿತ್ತು. ಕೊಲೆಯಾದ ವ್ಯಕ್ತಿಯನ್ನು ಇಲ್ಲಿನ ಬಾರಿಂಜ ನಿವಾಸಿ ಜನಾರ್ಧನ ಪೂಜಾರಿ ಎಂದು ಗುರುತಿಸಲಾಗಿತ್ತು. ಈ ಕೊಲೆ ಘಟನೆ ನಡೆದ ನಂತರ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದರು. ಈಗ ಇವರಿಂದ ಈ ಕೃತ್ಯ ನಡೆಯಲು ಕಾರಣವೇನೆಂಬ ಮಾಹಿತಿ ಹೊರಬಿದ್ದಿದೆ.
ಜನಾರ್ಧನ ಪೂಜಾರಿ ಚಾಲಕನಾಗಿದ್ದು, ಏಪ್ರಿಲ್ 18 ರಂದು ಸಂಜೆ ಕೆಲಸ ಮುಗಿಸಿ, ವಿಶ್ರಾಂತಿಗಾಗಿ ಮಂಗಳೂರಿನ ನೆಹರು ಮೈದಾನದ ಪುಟ್ಬಾಲ್ ಗ್ರೌಂಡ್ನ ಪಬ್ಲಿಕ್ ಗ್ಯಾಲರಿ ಮೇಲೆ ಮಲಗಿದ್ದರು. ಈ ವೇಳೆ ಅಲ್ಲಿಗೆ ನಾಲ್ಕು ಜನರ ಗುಂಪು ಬಂದಿದ್ದು, ನಿದ್ರೆಗೆ ಜಾರಿದ್ದ ಜನಾರ್ಧನ ಪೂಜಾರಿಯವರ ಮೇಲೆ ಗ್ಯಾಂಗ್ ನ ಕಣ್ಣುಬಿದ್ದಿತ್ತು.
ಈ ನಾಲ್ಕು ಖದೀಮರು ದರೋಡೆ ಮಾಡಲು ಜನಾರ್ಧನ್ ಬಳಿ ಬಂದಿದ್ದು, ಈ ವೇಳೆ ಜನಾರ್ಧನ್ ಗೆ ಎಚ್ಚರವಾಗಿದ್ದು, ನಾಲ್ವರನ್ನು ಕಂಡು ಭಯಭೀತರಾಗಿದ್ದಾರೆ. ಅಲ್ಲದೆ, ಏನು? ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಆ ಗ್ಯಾಂಗ್ “ಮೊಬೈಲ್ ಮತ್ತು ಹಣ ಕೊಡು, ಇಲ್ಲ ಸಾಯಿಸಿಬಿಡುತ್ತೇವೆ” ಎಂದು ಹೆದರಿಸಿದ್ದಾರೆ. ಜನಾರ್ಧನ್ “ಕೊಡುವುದಿಲ್ಲ” ಎಂದು ಹೇಳಿದ್ದು, ಈ ಖದೀಮರು ಬಲವಂತವಾಗಿ ಆತನ ಬಳಿ ಇದ್ದ ಹಣ, ಮೊಬೈಲ್ ಕಿತ್ತುಕೊಂಡಿದ್ದೂ ಅಲ್ಲದೆ, ಜೋರಾಗಿ ಕಾಲಿನಿಂದ ಒದ್ದು ಅಲ್ಲಿಂದ ಪರಾರಿಯಾಗಿದ್ದರು. ಕೆಳಕ್ಕೆ ಬಿದ್ದ ಜನಾರ್ಧನ್ ತೀವ್ರ ಗಾಯಗೊಂಡಿದ್ದು, ಸ್ಥಳಿಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರಾದರೂ ಜನಾರ್ಧನ ಪೂಜಾರಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು (police) ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರನ್ನು ಕೇರಳದ ತಿರುವನಂತಪುರಂನ ಪ್ರಶಾಂತ್, ವಿಟ್ಲದ ಶರತ್.ವಿ, ಕೊಡಗಿನ ಕುಶಾಲನಗರದ ಜಿ.ಕೆ.ರವಿಕುಮಾರ್ ಅಲಿಯಾಸ್ ನಂದೀಶ್, ಕೊಣಾಜೆಯ ವಿಜಯ ಕುಟಿನ್ಹಾ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ.