Indonesia: ದೇವಸ್ಥಾನದ ಮರದ ಕೆಳಗೆ ಬೆತ್ತಲೆ ಫೋಟೋಶೂಟ್ ಮಾಡಿಸಿದ ಚೆಲುವೆ! ದೇಶದಿಂದಲೇ ಗಡಿಪಾರು ಮಾಡಿದ ಇಂಡೋನೇಷ್ಯಾ!
Indonesia : ಪ್ರತಿಯೊಂದು ಧರ್ಮೀಯರಿಗೂ, ಸಮುದಾಯದವರಿಗೂ ಅವರದ್ದೇ ಆದ ಆಚಾರ- ವಿಚಾರಗಳು, ನಂಬಿಕೆಗಳು ಇದ್ದೇ ಇರುತ್ತವೆ. ಇವುಗಳಿಗೆ ಧಕ್ಕೆಯಾಗುವಂತಹ, ಅವಮಾನವಾಗುವಂತಹ ಏನಾದರೂ ಕೆಲಸಗಳಾದರೆ ಯಾರೂ ಸಹಿಸಲ್ಲ. ಮಾಡಿದವರಿಗೂ ತಕ್ಕ ಶಾಸ್ತಿ ಮಾಡುತ್ತಾರೆ. ಅಂತೆಯೇ ಇಲ್ಲೊಬ್ಬಳು ನಾರಿ ದೇವಸ್ಥಾನದ ಮರದ ಕೆಳಗೆ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಆಕೆಯನ್ನು ಗಡಿಪಾರು ಮಾಡಿದ್ದಾರೆ.
ಹೌದು, ಪ್ರವಾಸಕ್ಕೆಂದು ಬಂದಿದ್ದ ರಷ್ಯಾದ (Russia) ಇನ್ಸ್ಟಾಗ್ರಾಮ್ (Instagram) ತಾರೆ, 40ರ ಹರೆಯದ ಲೂಯ್ಜಾ ಕೊಶ್ಯಾಕ್ ಎಂಬಾಕೆ ಅಲ್ಲಿನ ತಬನನ್ ದೇವಸ್ಥಾನದ ಮರದ ಕೆಳಗೆ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಗಡಿಪಾರಾಗಿದ್ದಾಳೆ. ಮಹಿಳೆ ಹೀಗೆ ಬೆತ್ತಲೆಯಾಗಿ, ಅದೂ ಕೂಡ ಅಲ್ಲಿನ ಜನರು ಪೂಜಿಸೋ, ಆರಾಧಿಸೋ ದೇವಾಲಯದಲ್ಲಿ ಫೋಟೋಶೂಟ್ ಮಾಡಿಸಿರುವುದು, ಬಾಲಿಯ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅವರೆಲ್ಲಾ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಎಚ್ಚೆತ್ತ ಇಂಡೋನೇಷ್ಯಾ ಸರ್ಕಾರ ಮಹಿಳೆಯನ್ನು ಗಡಿಪಾರು ಮಾಡಿದೆ.
ಅಂದಹಾಗೆ ಲೂಯ್ಜಾ ಕೊಶ್ಯಾಕ್ ಬಾಲಿ ಪ್ರವಾಸ ಕೈಗೊಂಡಿದ್ದು, ಬಾಲಿಯ (Bali) ಸುಂದರ ತಾಣಗಳಲ್ಲಿ ಕೆಲ ದಿನಗಳ ಕಾಲ ಕಳೆದು ಬಾಲಿಯ ತಬನನ್ ದೇವಸ್ಥಾನ ವೀಕ್ಷಣೆಗೆ ಆಗಮಿಸಿದ್ದಳು. ಈ ವೇಳೆ ಭಾರೀ ಗಾತ್ರದ ಮರ ಈಕೆಯ ಕಣ್ಣಿಗೆ ಬಿದ್ದಿದೆ. ಇದೇ ಮರದ ಬಳಿ ನಗ್ನವಾಗಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಇಷ್ಟು ಮಾತ್ರಕ್ಕೆ ಸುಮ್ಮನಿರದ ಆಕೆ ತಾನು ತೆಗೆಸಿದ ಹಲವು ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದನ್ನು ಕಂಡ ಅಲ್ಲಿನ ಹಿಂದೂ ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ.
ಬಾಲಿ ಉದ್ಯಮಿ ನಿಲುಡಿಜೆಲಾಂಟಿಕ್ ತಮ್ಮ ಖಾತೆಯಲ್ಲಿ ಮಹಿಳೆಯ ನಗ್ನ ಫೋಟೋವನ್ನ ಹಂಚಿಕೊಂಡಿದ್ದು, ‘ಬಾಲಿಯನ್ನು ಅಗೌರವಿಸುವ ಎಲ್ಲಾ ವಿದೇಶಿಗರೇ ಗಮನಿಸಿ, ಬಾಲಿ ನಮ್ಮ ನೆಲ, ನಿಮ್ಮದಲ್ಲ. ದೇವಸ್ಥಾನದ ಪವಿತ್ರ ಮರದ ಬುಡದಲ್ಲಿ ನಗ್ನ ಚಿತ್ರ ಪ್ರದರ್ಶಿಸಿ ನೀವು ಆರಾಮಾಗಿ ಇಲ್ಲಿ ಕಾಲ ಕಳೆಯಬಹುದು ಎಂದು ಭಾವಿಸಿದ್ದೀರಾ? ನಮ್ಮ ಸಂಸ್ಕೃತಿ, ಪದ್ಧತಿ, ದೇಶವನ್ನು ಗೌರವಿಸಲು ಸಾಧ್ಯವಿಲ್ಲ ಎಂದಾದರೆ ಹೊರನಡೆಯಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಕಾರ್ಯಪ್ರವೃತ್ತರಾದ ಇಂಡೋನೇಷ್ಯಾ ಅಧಿಕಾರಿಗಳು, ಲೂಯ್ಜಾ ಕೋಶ್ಯಾಕ್ ಬಂಧಿಸಿದ್ದಾರೆ. ಇಷ್ಟೇ ಅಲ್ಲ ಮತ್ತೆ ಇಂಡೋನೇಷ್ಯಾ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.
ಇನ್ನು ಬಾಲಿಯ ತಬನನ್ ದೇವಸ್ಥಾನದ ಆವರಣದಲ್ಲಿರುವ ಈ ಪವಿತ್ರ ಮರ ಸುಮಾರು 700 ವರ್ಷಗಳಷ್ಟು ಹಳೆಯ ಮರವಾಗಿದೆ. ಕಳೆದ ವರ್ಷ ರಷ್ಯಾದ ಯೋಗಪಟು ಇದೇ ಮರದ ಬುಡದಲ್ಲಿ ಫೋಟೋ ತೆಗೆದು ವಿವಾದ ಸೃಷ್ಟಿಸಿದ್ದರು. ಇದೀಗ ಮತ್ತದೆ ರಷ್ಯಾದಾಕೆ ವಿವಾದದ ಸುಳಿಯಲ್ಲಿ ಸಿಲುಕಿದ್ದು ವಿಪರ್ಯಾಸವೇ ಸರಿ!