Karnataka BJP: 70ಕ್ಕೂ ಅಧಿಕ ಹೊಸಬರಿಗೆ ಮಣೆ ಹಾಕಿ ಗುಜರಾತ್ ದಾಖಲೆ ಬ್ರೇಕ್ ಮಾಡಿದ ಕರ್ನಾಟಕ ಬಿಜೆಪಿ! ಅಷ್ಟಕ್ಕೂ ಗುಜರಾತ್ ಪ್ಲ್ಯಾನ್ ಏನು?
ಕರ್ನಾಟಕ ವಿಧಾನಸಭೆಯ ಚುನಾವಣೆಯ(Karnataka Assembly Election) ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಅಳೆದು ತೂಗಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಹಂತಹಂತವಾಗಿ ಪಟ್ಟಿಗಳನ್ನು ಬಿಡುಗಡೆ ಮಾಡಿ ಜನರ ಕುತೂಹಲ ತಣಿಸಿವೆ. ಆದರೆ ಬಿಜೆಪಿ(BJP)ಯಲ್ಲಿ ಟಿಕೆಟ್ ವಿಚಾರವಾಗಿ ಮೊದಲೇ ಗುಸು ಗುಸು ಶುರುವಾಗಿತ್ತು. ಗುಜರಾತ್, ಯುಪಿ ಮಾದರಿಯಲ್ಲಿ ಟಿಕೆಟ್ ಹಂಚಲಾಗುತ್ತೆ ಅನ್ನೋ ಕೂಗು ಕೇಳಿ ಬರುತ್ತಿತ್ತು. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಕರ್ನಾಟಕ ಬಿಜೆಪಿ ಲೆಕ್ಕಾಚಾರವೇ ಬೇರೆಯಾಗಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಗುಜರಾತ್(Gujarath) ದಾಖಲೆಯನ್ನು ಕರ್ನಾಟಕ ಬಿಜೆಪಿ ಮುರಿದಂತಾಗಿದೆ.
ಹೌದು, ಗುಜರಾತ್ ದಾಖಲೆಯನ್ನು ಕರ್ನಾಟಕ ಬಿಜೆಪಿ (Karnataka BJP) ಮುರಿದಿದ್ದು ಈ ಬಾರಿ 70ಕ್ಕೂ ಹೆಚ್ಚು ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. ಅಂದಹಾಗೆ ಗುಜರಾತಿನಲ್ಲಿ (Gujarat Election) ಸತತ ಏಳನೇ ಅವಧಿಗೆ ಅಧಿಕಾರ ನಡೆಸಲು ಮುಂದಾಗಿದ್ದ ಬಿಜೆಪಿ ಸಮೀಕ್ಷೆಯಲ್ಲಿ ವಿರೋಧದ ಅಲೆ ಕಾಣಿಸಿಕೊಂಡ 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೂ ಟಿಕೆಟ್ ನೀಡಿರಲಿಲ್ಲ.
ಬಿಜೆಪಿಯ ಈ ಸಖತ್ ಪ್ಲಾನ್ ನಿಂದ ಡಿಸೆಂಬರ್‌ನಲ್ಲಿ ನಡೆದ ಗುಜರಾತಿನ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ 156, ಕಾಂಗ್ರೆಸ್ 17, ಆಪ್ 5 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿತ್ತು. 45 ಹೊಸ ಮುಖಗಳ ಪೈಕಿ 42 ಮಂದಿ ಚುನಾವಣೆಯಲ್ಲಿ ಗೆದ್ದಿದ್ದರು. ಗೆಲುವಿನ ಸ್ಟ್ರೈಕ್ ರೇಟ್ ಉತ್ತಮವಾಗಿ ಇರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಈ ಪ್ರಯೋಗಕ್ಕೆ ಹೈಕಮಾಂಡ್ ಮುಂದಾಗಿದೆ.
ಅಂದಹಾಗೆ ಸದ್ಯ ಕರ್ನಾಟಕ ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ 6 ಮಂದಿ ಹೊಸಬರು ಸೇರಿ ಒಟ್ಟು ಇಲ್ಲಿಯವರೆಗೆ 72 ಹೊಸಬರಿಗೆ ಟಿಕೆಟ್ ನೀಡಿದೆ. ಕರ್ನಾಟಕದಲ್ಲಿ ಇಷ್ಟೊಂದು ದಾಖಲೆ ಮಟ್ಟದಲ್ಲಿ ಹೊಸಬರಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದು ಇದೇ ಮೊದಲು. ಅಲ್ಲದೆ ಈ ಸಲ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು (Women Candidate) ಬಿಜೆಪಿ ಹಾಕಿದ್ದು, ಇಲ್ಲಿಯವರೆಗೆ 12 ಮಹಿಳೆರಿಗೆ ಟಿಕೆಟ್ ನೀಡಿದೆ.
ಇನ್ನು ಈ ವರೆಗೂ ಒಟ್ಟು 224 ಕ್ಷೇತ್ರಗಳ ಪೈಕಿ ಇಲ್ಲಿಯವರೆಗೆ 222 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದ್ದು ಮಾನ್ವಿ ಮತ್ತು ಈಶ್ವರಪ್ಪ ಪ್ರತಿನಿಧಿಸುತ್ತಿರುವ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಮಾತ್ರ ಕಗ್ಗಂಟಾಗಿಯೇ ಉಳಿದು ತೀವ್ರ ಕುತೂಹಲ ಕೆರಳಿಸಿದೆ. ಒಟ್ಟಿನಲ್ಲಿ ಮೊದಲು ಹೇಳಿದಂತೆ ಗುಜರಾತ್ ದಾಖಲೆಯನ್ನು ಕರ್ನಾಟಕ ಬಿಜೆಪಿ (Karnataka BJP) ಮುರಿದಿದ್ದು ಈ ಬಾರಿ 70ಕ್ಕೂ ಹೆಚ್ಚು ಹೊಸ ಮುಖಗಳಿಗೆ ಟಿಕೆಟ್ ನೀಡಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿಯ ಮಾಸ್ಟರ್ ಪ್ಲಾನ್ ವರ್ಕ್ ಆಗಿ ಗುಜರಾತಿನಲ್ಲಿ ಆದಂತೆ ಕರ್ನಾಟಕದಲ್ಲೂ ಬಿಜೆಪಿಯು ಅಧಿಕ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುತ್ತದೆಯಾ ಇಲ್ಲ ಪ್ಲಾನ್ ಉಲ್ಟಾ ಆಗುತ್ತದೆಯಾ ಎಂದು ನೋಡಬೇಕಿದೆ. ಇದೆಲ್ಲದಕ್ಕೂ ಮೇಲೆ 13ರಂದು ಉತ್ತರ ದೊರೆಯಲಿದೆ.
ಇದನ್ಮನೂ ಓದಿ : ಮಹಾರಾಷ್ಟ್ರಪ್ರಶಸ್ತಿ ಸಮಾರಂಭದ ಬಿಸಿಲಿನ ಝಳಕ್ಕೆ ಬಲಿಯಾದವರ ಸಂಖ್ಯೆ 13 ಕ್ಕೆ ಏರಿಕೆ