Puttur Politics : ಮಠಂದೂರರ ಮನೆ ಪ್ರವೇಶಿಸದಂತೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಘೆರಾವ್ : ಸಿಟ್ಟಿಂಗ್ MLA ಗೆ ಟಿಕೆಟ್ ನಿರಾಕರಿಸಲು ‘ ಹೇಳಿ ಹೋಗು ಕಾರಣ’ ಎಂದ ಕಾರ್ಯಕರ್ತರು !
Puttur Politics Matter : ಪುತ್ತೂರು ವಿಧಾನಸಭಾ ಕ್ಷೇತ್ರದ (Puttur Politics Matter) ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇಂದು ಬುಧವಾರ ಸಂಜೆ ಸಂಜೀವ ಮಠಂದೂರು ಅವರ ಮನೆಗಾಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ಕಾರ್ಯಕರ್ತರು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಅವರುಗಳು ಮನೆಗೆ ಆಗಮಿಸುತ್ತಿದ್ದಂತೆ ದಾರಿಮಧ್ಯವೇ ತಡೆದ ಕಾರ್ಯಕರ್ತರು, ತಮ್ಮ ಆಕ್ರೋಶ ಹೊರಗೆಡವಿದರು. ಸಂಜೀವ ಮಠಂದೂರು ಅವರನ್ನು ಕಡೆಗಣಿಸಲು ಕಾರಣವೇನು ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಮಾಡುವುದಾದರೆ ಮಂಡಲ, ಜಿಲ್ಲೆಯ ಪದಾಧಿಕಾರಿಗಳ ನಿರ್ಣಯಕ್ಕೆ ಬೆಲೆ ಇಲ್ಲವೇ? ನಿಮಗೆ ಬೆಲೆ ಇಲ್ಲ ಎಂದಾದರೆ ನೀವು ಆ ಹುದ್ದೆಯಲ್ಲಿ ಇರುವುದಾದರೂ ಯಾಕೆ ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟು ಶಕ್ತಿಕೇಂದ್ರ 112 ಜನರಲ್ಲಿ 102 ಜನರ ಬೆಂಬಲ ಮಠಂದೂರು ಅವರಿಗೆ ಸಿಕ್ಕಿತ್ತು. ಆದರೂ ಟಿಕೆಟ್ ಮಿಸ್ ಆದದ್ದು ಯಾಕೆ ಉತ್ತರಿಸಿ ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಶಾಸಕ ಸಂಜೀವ ಮಠಂದೂರು ಅವರು ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರಾಮಾಣಿಕವಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈಗ ಅವರನ್ನು ಕಡೆಗಣಿಸುವುದು ಎಂದಾದರೆ, ಇದರ ಅರ್ಥವೇನು? ಪ್ರಾಮಾಣಿಕರಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲ ಎಂದಾಯಿತು. ನಾವು ಬಿಜೆಪಿ ಪರವಾಗಿ ಕೆಲಸವೇ ಮಾಡುವುದಿಲ್ಲ. ನೀವೇ ಪ್ರಚಾರ ಕಾರ್ಯ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಿ ಎಂದು ತಮ್ಮ ಅಸಹನೆ ಹೊರಗೆಡವಿದ್ದಾರೆ.
ಈ ಸಂದರ್ಭದಲ್ಲಿ ಹೈಕಮಾಂಡ್ ಆಯ್ಕೆ ಮಾಡಿದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಹಾಜರಿದ್ದರು. ನೀವು ನಾಮಪತ್ರ ಸಲ್ಲಿಕೆ ಮಾಡಕೂಡದು ಎಂದು ಕಾರ್ಯಕರ್ತರು ಆ ಸಂದರ್ಭದಲ್ಲಿ ಆಶಾ ತಿಮ್ಮಪ್ಪ ಗೌಡರವರಲ್ಲಿ ಕಾರ್ಯಕರ್ತರು ಕೇಳಿಕೊಂಡರು.
ಆ ಸಂದರ್ಭದಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಜೀವೆಂದರ್ ಜೈನ್ , ರಾಜೇಶ್ ಕಾವೇರಿ, ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗಲಿಮನೆ ಮುಂತಾದ ಪ್ರಮುಖರು ಇದ್ದರು.