BJP Candidates : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ : ಸಾಮಾನ್ಯ ಕಾರ್ಯಕರ್ತನನ್ನೂ ಸಂಪರ್ಕಿಸುತ್ತಿದೆ ಸರ್ವೇ ಟೀಂ
ಬೆಂಗಳೂರು: ರಾಜ್ಯ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್,ಆಪ್ ಸೇರಿದಂತೆ ಇತರ ಪಕ್ಷಗಳು ಒಂದು,ಎರಡು ಪಟ್ಟಿ ಬಿಡುಗಡೆ ಮಾಡಿದೆ.
ಆದರೆ ಆಡಳಿತಾರೂಢ ಬಿಜೆಪಿ ಪಕ್ಷವು ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.ಇನ್ನೂ ಒಂದೆರಡು ದಿನ ಮುಂದೂಡಲ್ಪಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಈಗಾಗಲೇ ಸಿದ್ದಪಡಿಸಿರುವ ಅಭ್ಯರ್ಥಿಗಳ ಪಟ್ಟಿಗೆ ಒಮ್ಮತ ಮೂಡಿಬರದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಸರ್ವೆ ನಡೆಸಲು ಸೂಚನೆ ನೀಡಿದ್ದು,ಸರ್ವೇ ತಂಡವೂ ಸಾಮಾನ್ಯ ಕಾರ್ಯಕರ್ತನಿಗೂ ಕರೆ ಮಾಡಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.
ಮೂಲಗಳ ಪ್ರಕಾರ, ಕೆಲವು ಕ್ಷೇತ್ರಗಳನ್ನು ಮತ್ತೆ ಸರ್ವೆ ಮಾಡಲು ಹೈಕಮಾಂಡ್ ಸೂಚಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಮೂರು ಸಂಸ್ಥೆಗಳಿಂದ ಪ್ರತ್ಯೇಕ ಸರ್ವೆ ನಡೆಸಿ, ಅದರ ಆಧಾರದ ಮೇಲೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು,ಈ ಹಿನ್ನೆಲೆಯಲ್ಲಿ ಒಂದೆರಡು ದಿನ ಮುಂದೂಡುವ ಸಾಧ್ಯತೆ ಇದ್ದು,ಒಂದೇ ಪಟ್ಟಿಯಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎನ್ನಲಾಗಿದೆ.
ಸರ್ವೇ ವರದಿಯನ್ನು ಇಟ್ಟುಕೊಂಡು ಹಿರಿಯ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.ಬಳಿಕ ಟಿಕೆಟ್ ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.
ಕೇಂದ್ರದ ವರಿಷ್ಠರು ಪಟ್ಟಿ ತಯಾರಿಸಿದ್ದರೂ ರಾಜ್ಯದ ನಾಯಕರ ಅಭಿಪ್ರಾಯ ಪಡೆಯದೇ ಮುಂದುವರಿಯುವುದೂ ಕಷ್ಟ ಸಾಧ್ಯ.
ಒಟ್ಟಿನಲ್ಲಿ ಗೆಲುವೊಂದೇ ಮುಖ್ಯ ಎಂಬ ನಿಟ್ಟಿನಲ್ಲಿ ಪ್ಲಾನ್ ಮಾಡುತ್ತಿರುವ ಬಿಜೆಪಿ ಪಕ್ಷವೂ ಕೊನೆಗಳಿಗೆಯಲ್ಲಿ ಎಡವುದೇ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.