Sudeep threat letter case: ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣಕ್ಕೆ ಮತ್ತೊಂದು ತಿರುವು! ಲೆಟರ್ ಪೋಸ್ಟ್ ಮಾಡಲು ಬಳಸಿದ ಆ ಕಾರ್ ಯಾರದ್ದು?
Sudeep threat letter case : ನಟ ಕಿಚ್ಚ ಸುದೀಪ್‌ಗೆ (Kichcha Sudeep) ಎರಡೆರಡು ಬೆದರಿಕೆ ಪತ್ರಗಳು ಮನೆಗೆ ಬಂದಿದ್ದವು, ಆ ಕೇಸ್ ಸದ್ಯ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಾರು ಚಾಲಕ (Car Driver), ಪೋಸ್ಟ್ ಬಗ್ಗೆ ಖಾಕಿ ಜಾಲಾಡುತ್ತಿದೆ. ಮೊದಲ ಬೆದರಿಕೆಗೆ ನಿರ್ಲಕ್ಷ್ಯ ವಹಿಸಿದ್ದ ಸುದೀಪ್, ಎರಡನೇ ಪತ್ರ (Letter) ಕೈ ಸೇರಿದಾಗ ಅದರ ಗಂಭೀರತೆಯನ್ನು ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಜಾಕ್ ಮಂಜು ಮೂಲಕ ದೂರು ನೀಡಿದ್ದರು. ಈಗಾಗಲೇ ಸಿಸಿಬಿ ತನ್ನ ತನಿಖೆ ಮುಂದುವರಿಸಿದ್ದು, ಕೇಸ್‌ನಲ್ಲಿ ಒಂದೊಂದೇ ಸುಳಿವುಗಳು ದೊರೆಯುತ್ತಿವೆ.
ಹೌದು, ಬೆದರಿಕೆ ಪತ್ರದ ಪ್ರಕರಣದ (Sudeep threat letter case) ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮೊನ್ನೆಯಷ್ಟೇ ಸುದೀಪ್ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ.
ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ (Central Crime Branc) ತನಿಖೆ ಶುರುವಾಗಿದ್ದು, ಶಂಕಿತ ಜಾಡು ಹಿಡಿದು ಹೊರಟಿದ್ದಾರೆ. ಬೆಂಗಳೂರಿನ ದೊಮ್ಮಲೂರು ಪೋಸ್ಟ್ ಆಫೀಸ್‌ಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್‌ಗೆ ಪತ್ರ ಹಾಕಲಾಗಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂದಹಾಗೆ ಸುದೀಪ್‌ಗೆ ಬೆದರಿಕೆ ಪತ್ರ ಹಾಕಲು ಸ್ವಿಫ್ಟ್ ಕಾರು ಬಳಸಲಾಗಿದೆ. ಈ ವೇಳೆ ನಂಬರ್ ಪ್ಲೇಟ್ ಅನ್ನೇ ಬದಲಿಸಿ ದುಷ್ಕರ್ಮಿಗಳು ಕಾರು ಬಳಸಿದ್ದಾರೆ. ಈ ಮೂಲಕ ದೊಮ್ಮಲೂರು ಪೋಸ್ಟ್ ಆಫೀಸ್‌ಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಬಂದು ಲೆಟರ್ ಹಾಕಿದ್ದಾರೆ. ಈ ಕಾರು ಕೆಂಗೇರಿ ಬಳಿಯ ವ್ಯಕ್ತಿಗೆ ಸೇರಿರೋದು ಪತ್ತೆಯಾಗಿದೆ. ವ್ಯಕ್ತಿಯ ವಿಚಾರಣೆಯ ನಂತರ ಆತನಿಗೂ ಈ ಪತ್ರಕ್ಕೂ ಸಂಬಂಧವಿಲ್ಲ ಅನ್ನೋದು ತಿಳಿದು ಬಂದಿದೆ. ನಕಲಿ ನಂಬರ್ ಪ್ಲೇಟ್ ಬಳಸಿ ಸುದೀಪ್ ಮನೆಗೆ ಬೆದರಿಕೆ ಪತ್ರ ಕಳುಹಿಸಿರೋದು ಇದೀಗ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.
ಮಾರ್ಚ್ 10ರಂದು ಸುದೀಪ್ ಮನೆಗೆ ಮೊದಲ ಬೆದರಿಕೆ ಪತ್ರ ತಲುಪಿತ್ತು. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ. ಆದರೂ ಇಂಟರ್ನಲ್ ಮಾಹಿತಿ ಕಲೆ ಹಾಕೋದಕ್ಕೆ ಯತ್ನಿಸಿದ್ದರು. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಗಂಭೀರವಾಗಿ ಪರಿಗಣಿಸಿ ದೂರು ನೀಡಲಾಗಿತ್ತು. ಇನ್ನು ಈ ಹಿಂದೆ ಸುದೀಪ್ ಜೊತೆ ಇದ್ದ ಕಾರು ಚಾಲಕನ ಮೇಲೆ ಪೊಲೀಸರಿಗೆ ಬಲವಾದ ಶಂಕೆ ಇದೆ. ಈಗಾಗಲೇ ದೂರು ದಾಖಲಿಸಿ ತನಿಖೆ ನಡೆಸಿದ್ದ ಪುಟ್ಟೇನಹಳ್ಳಿ ಪೊಲೀಸರು, ಸುದೀಪ್ ಮನೆಯಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ನಡೆಸಿದ್ದರು. ಕೆಲವೊಂದು ಸಾಂಧರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಸುದೀಪ್ ಕಾರು ಚಾಲಕನ ಮೇಲೆ ಅನುಮಾನ ಬಂದಿತ್ತು. ಈ ಕಾರು ಚಾಲಕನನ್ನ ಬಳಸಿಕೊಂಡು ಚಿತ್ರರಂಗದ ಆ ವ್ಯಕ್ತಿ ಕೃತ್ಯವನ್ನ ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ.