BJP : ಎ.11ರಂದು ಬಿಜೆಪಿ ಪಟ್ಟಿ ಬಿಡುಗಡೆ ? 4 ಸಚಿವರ ಸಹಿತ 32 ಮಂದಿ ಶಾಸಕರಿಗಿಲ್ಲ ಟಿಕೆಟ್ ,ಕರಾವಳಿಯ 9 ಶಾಸಕರಿಗೆ ಟಿಕೆಟ್ ಡೌಟು
BJP candidates list : ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆಯುತ್ತಿದೆ.ಕಳೆದ ಬಾರಿಗಿಂತ ಈ ಬಾರಿ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ಮಾನದಂಡವೇ ಭಿನ್ನವಾಗಿದೆ.
ಎಲ್ಲಾ ಕಾರ್ಯಕರ್ತರು, ಮುಖಂಡರು ಹಾಗೂ ಸಂಘ ಪರಿವಾರದವರ ಸೂಚನೆ ಹಾಗೂ ಸಲಹೆಗಳನ್ನು ಪಡೆದುಕೊಂಡೇ ಅಭ್ಯರ್ಥಿ ಆಯ್ಕೆ( BJP candidates ) ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಕಾರ್ಯಕರ್ತರಿಂದ ವಿರೋಧ ಇರುವ ಶಾಸಕ,ಸಚಿವರಿಗಂತೂ ಈ ಬಾರಿ ಟಿಕೆಟ್ ಇಲ್ಲ.
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ಬೆಳವಣಿಗೆ ಒಂದು ಹಂತಕ್ಕೆ ಬಂದು ನಿಂತಿದ್ದು,ಬಿಜೆಪಿ ಪಾರ್ಲಿಮೆಂಟರಿ ಬೊರ್ಡ್ ಮೀಟಿಂಗ್ ಗೆ ಸಭೆ ನಿಗದಿಯಾಗಿದೆ.ಟಿಕೆಟ್ ಹಂಚಿಕೆ ಕುರಿತು ಸಣ್ಣ ಸುಳಿವೂ ಕೂಡ ಹೊರಬಾರದಂತೆ ವರಿಷ್ಠರು ಎಚ್ಚರಿಕೆ ವಹಿಸಿದ್ದಾರೆ.
ಬಲ್ಲಮೂಲಗಳ ಪ್ರಕಾರ ಮೂರರಿಂದ ನಾಲ್ಕು ಮಂದಿ ಮಂತ್ರಿಗಳು ಸೇರಿದಂತೆ 32 ಮಂದಿ ಶಾಸಕರು ಈ ಬಾರಿ ಟಿಕೆಟ್ ಕಳೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.
ಎಲ್ಲಾ ಕ್ಷೇತ್ರಗಳಿಗೂ ತಲಾ ಮೂವರು ಸಂಭಾವ್ಯರ ಹೆಸರು ಕೊಡಿ ಎಂದು ವರಿಷ್ಠರು ಸೂಚನೆ ನೀಡಿದ್ದಾರೆ.ಅಲ್ಲದೇ ಪಟ್ಟಿಯಲ್ಲಿರುವ ಸಂಭಾವ್ಯರ ಪಟ್ಟಿಯಲ್ಲಿರುವ ಕೆಲವರ ಹೆಸರು ಕೈ ಬಿಡುವುದು ಸೂಕ್ತ ಎಂಬ ಅಭಿಪ್ರಾಯದ ಹಿನ್ನಲೆಯಲ್ಲಿ ಅಚ್ಚರಿಯ ಆಯ್ಕೆ ಕೂಡ ಈ ಬಾರಿಯ ಚುನಾವಣೆಯ ಅಭ್ಯರ್ಥಿ ಘೋಷಣೆಯಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3, ಉಡುಪಿ ಜಿಲ್ಲೆಯ4, ಉತ್ತರ ಕನ್ನಡ ಜಿಲ್ಲೆಯ 2 ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಮಾಹಿತಿಯ ನಡುವೆಯೂ ಕೊನೆ ಕ್ಷಣದಲ್ಲಿ ಏನೆಲ್ಲಾ ಬೆಳವಣಿಗೆ ನಡೆಯಬಹುದೆಂಬುದು ಕೂಡ ಅಷ್ಟೇ ಮಹತ್ವದ್ದು.
ಎ. 8, 9ರಂದು ದಿಲ್ಲಿಯಲ್ಲಿ ಸಂಸದೀಯ ಮಂಡಳಿ ಹಾಗೂ ಚುನಾವಣ ಸಮಿತಿ ಸಭೆ ನಡೆಯಲಿದೆ.ಎ.7ರಂದು ರಾಜ್ಯದ ನಾಯಕರೊಂದಿಗೆ ವರಿಷ್ಠರು ಪೂರ್ವಭಾವಿ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್, ಸಹಪ್ರಭಾರಿ ಅಣ್ಣಾಮಲೈ ,ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎ.8 ಮತ್ತು ಎ.9 ರಂದು ಸಭೆ ನಡೆಸಿ ಅಂತಿಮವಾಗಿ ಎ.11ರಂದು ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.ಗೊಂದಲವಿಲ್ಲದ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಎ.11ರಂದು ಬಿಡುಗಡೆಯಾಗಲಿದೆ.2 ನೇ ಪಟ್ಟಿಯಲ್ಲಿ ಎಲ್ಲಾ ಕ್ಷೇತ್ರಗಳ ಹೆಸರು ಅಂತಿಮಗೊಳ್ಳಲಿದೆ.