Weekend With Ramesh 5: ಕನ್ನಡಿಗರ ಮನಗೆದ್ದ ‘ ಇಂಡಿಯನ್ ಮೈಕಲ್ ಜಾಕ್ಸನ್’, ರಮ್ಯಾ ಥರ ಇಂಗ್ಲೀಷ್ ಮಾತಾಡಿಲ್ಲ, ತಮಿಳು ಬಳಸಿಲ್ಲ !
Weekend With Ramesh-5 Prabhudev: ‘ವೀಕೆಂಡ್ ವಿಥ್ ರಮೇಶ್ ಸೀಸನ್ 5’ ಶೋನಲ್ಲಿ ಈ ವಾರ ಪ್ರಭುದೇವ (Weekend With Ramesh-5 Prabhudev) ಅವರು ಅತಿಥಿ. ಭಾರತದ ದಿಗ್ಗಜ ಡಾನ್ಸರ್ ಜತೆಗೆ ಸ್ಟಾರ್ ನಟರ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡುವುದರ ಜೊತೆಗೆ ಸಿನಿಮಾ ನಿರ್ದೇಶನ ಕೂಡಾ ಮಾಡಿರುವ ಪ್ರಭುದೇವ (Prabhudeva) ಅವರು ಮೂಲತಃ ಮೈಸೂರಿನವರು. ಮೈಸೂರಿನ ಸಮೀಪದ ‘ದೂರ’ ಎನ್ನುವ ಊರಿನ ಪ್ರಭುದೇವ ಇಂದು ‘ಇಂಡಿಯನ್ ಮೈಕಲ್ ಜಾಕ್ಸನ್’ ಅಂತಲೇ ಫೇಮಸ್ಸು. (Indian Michael Jackson) ಈ ಹಿಂದಿನ ವೀಕೆಂಡ್ ರಮೇಶ್ ಎಪಿಸೋಡ್‌ನಲ್ಲಿ ರಮ್ಯಾ ಅವರು ಸಂಪೂರ್ಣ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು, ಪ್ರಭುದೇವ ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
‘ವೀಕೆಂಡ್ ವಿಥ್ ರಮೇಶ್ ಸೀಸನ್ 5’ ಶೋನಲ್ಲಿ ಮೊದಲ ಎಪಿಸೋಡ್‌ನಲ್ಲಿ ‘ಮೋಹಕತಾರೆ’ ರಮ್ಯಾ((Ramya) ಅವರ ಬಗ್ಗೆ ಜನ ತಿಳಿದುಕೊಂಡು ಮಾತನಾಡಿದ್ದಕ್ಕಿಂತ ಹೆಚ್ಚಾಗಿ ಅವರು ಪ್ರಚಾರ ಆದದ್ದು ಆಕೆಯ ಕನ್ನಡದ ಬಗ್ಗೆ. ಆಕೆಯ ವಿಪರೀತ ಇಂಗ್ಲಿಷ್ ಭಾಷೆಯ ಬಳಕೆಯ ಬಗ್ಗೆ ಅಪಸ್ವರ ಕೇಳಿಬಂತು. ನಮ್ಮ ಮನೆಯ ಅಜ್ಜಿಗೆ ರಮ್ಯಾ ಇಂಗ್ಲಿಷ್ ಅರ್ಥ ಆಗಲಿಲ್ಲ, ಅಜ್ಜಿ ರಿಮೋಟ್ ಕುಕ್ಕಿ ಟಿವಿ ಆಫ್ ಮಾಡಿದಳು ಅಂತ ಟ್ರೊಲ್ ಆದ್ರು ರಮ್ಯಾ.
ಇದು ಮೊದಲ ಸೀಸನ್ ಕಥೆ, ಎರಡನೇ ಸೀಸನ್‌ನಲ್ಲಿ ಬಾಲಿವುಡ್‌ನಲ್ಲಿ ಭಾರೀ ಬೇಡಿಕೆಯಲ್ಲಿರುವ, ಮೂಲತಃ ಕನ್ನಡದವರೇ ಆದರೂ ತಮಿಳು ನಟ, ನಿರ್ದೇಶಕ, ಬಹುಭಾಷಾ ಕೊರಿಯೋಗ್ರಾಫರ್ ಪ್ರಭುದೇವ ಬರ್ತಾರೆ, ಅಂದ್ರೆ ಅವರ ಜತೆಗೆ ಒಂದೋ ಹಿಂದಿ ಬರತ್ತೆ, ಇಲ್ಲವೇ ಇಂಗ್ಲಿಷ್ ಇರತ್ತೆ ಅಂತ ಜನ ಅಂದುಕೊಂಡರೆ ನಿಜಕ್ಕೂ ಆದದ್ದೇ ಬೇರೆ !
ಪ್ರಭುದೇವ ಅಂದರೆ ಯಾರು? ಎನ್ನುವ ಬಗ್ಗೆ ಯಾರಿಗೂ ಹೇಳಿ ಕೊಡಬೇಕಾದ ಅಗತ್ಯ ಇಲ್ಲ ಭಾರತದ ಮೈಕಲ್ ಜಾಕ್ಸನ್ ಎಂದು ಖ್ಯಾತಿ ಪಡೆದಿರುವ ಪ್ರಭುದೇವ ಅವರು ತಮ್ಮ ‘ ಮುಕ್ಕಾಲ ಮುಕ್ಕಾಬುಲ ಲೈಲಾ ‘ ಹಾಡಿಗೆ ಹೆಜ್ಜೆ ಹಾಕಿ ಮೈಯನ್ನು ಬಳ್ಳಿಯಾಗಿ ಸಿ ಕುಡಿದ ನಂತರ ದೇಶ ವಿದೇಶದಾದ್ಯಂತ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡರು. ಇಂತಹ ಪದ್ಮಶ್ರೀ ಪ್ರಭುದೇವ ಅವರು ವೀಕೆಂಡ್ ವಿತ್ ರಮೇಶ್ 5 ಸೀಸನ್ ನಲ್ಲಿ ನಿನ್ನೆ ಹಾಜರಿದ್ದರು.
ಪ್ರಭುದೇವ ಅತಿ ಅಲ್ಲಿ ಹೆಚ್ಚು ಕನ್ನಡದಲ್ಲಿಯೇ ಮಾತನಾಡಿದ್ರು. ಅವರು ಅಪರೂಪಕ್ಕೆ ಇಂಗ್ಲೀಷ್ ಪದ ಬಳಸಿದರೂ ಪ್ರಭುದೇವ ಇಷ್ಟೊಂದು ನಿರರ್ಗಳ ಕನ್ನಡ ಮಾತನಾಡುತ್ತಾರೆ ಅಂತ ಯಾರೂ ಊಹಿಸಿರಲು ಸಾಧ್ಯವಿಲ್ಲ.
“ನಾವು ಈಗಾಗಲೇ ಪ್ರಭುದೇವ ಅವರ ಎಪಿಸೋಡ್ ಶೂಟಿಂಗ್ ಮಾಡಿದ್ದೇವೆ. ಆದರೆ ಮೊದಲ ಎಪಿಸೋಡ್‌ನಲ್ಲಿ ಇವರು ಇರೋದಿಲ್ಲ. ಪ್ರಭುದೇವ ನಮ್ಮ ಶೋನಲ್ಲಿ ಮಾತನಾಡಿದಷ್ಟು ಎಲ್ಲಿಯೂ ಮಾತನಾಡಲಿಕ್ಕಿಲ್ಲ. ನಿಜಕ್ಕೂ ನಮಗೆ ಅವರ ಎಪಿಸೋಡ್ ತುಂಬ ಖುಷಿ ಕೊಟ್ಟಿತು, ನಿಮಗೆ ಸರ್ಪ್ರೈಸ್ ಆಗಲಿದೆ” ಎಂದು ಹೇಳಿದ್ದರು ಚಾನೆಲ್ ಹೆಡ್ ರಾಘವೇಂದ್ರ ಹುಣಸೂರು.
ರಾಘವೇಂದ್ರ ಹುಣಸೂರು ಅವರು ಹೇಳಿದಂತೆ ಪ್ರಭುದೇವ ಜಾಸ್ತಿ ಮಾತಾಡಿದ್ದು ಅಲ್ಲದೆ, ಆಶ್ಚರ್ಯವೆಂಬಂತೆ ಅವರು ಅಚ್ಚ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಅವರ ತಂದೆ ಡ್ಯಾನ್ಸ್ ಮಾಸ್ಟರ್ ಮೂಗೂರು ಸುಂದರಂ, ತಾಯಿ, ಸಹೋದರ ನಾಗೇಂದ್ರ ಪ್ರಸಾದ್ ಸೇರಿ ಅವರ ಬಳಗ ಎಲ್ಲವೂ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಅದು ಚಾಮರಾಜನಗರ ಜಿಲ್ಲೆಯಲ್ಲಿ ಬಳಸುವ ಕನ್ನಡ, ಕಾಡು ಭಾಷೆ ಅಂತಲೂ ಹೇಳುತ್ತಾರೆ. ಡಾ ರಾಜ್‌ಕುಮಾರ್ ಅವರು ಕೂಡಾ ಇಂತಹಾ ಭಾಷೆ ಬಳಸುತ್ತಾ ಇದ್ರು.
ಮೈಸೂರಿಗೆ ಹತ್ತಿರ ಇರುವ ‘ದೂರ’ ಗ್ರಾಮದವರು ಈ ಪ್ರಭುದೇವ. ಅದು ಟಿ ನರಸೀಪುರ ತಾಲೂಕಿನಲ್ಲಿ ಬರುತ್ತದೆ. ‘ವೀಕೆಂಡ್ ವಿಥ್ ರಮೇಶ್ ಸೀಸನ್ 5’ ಶೋನಲ್ಲಿ ಪ್ರಭುದೇವ ಹಾಗೂ ಅವರ ತಂದೆಯವರು ಡಾ ರಾಜ್‌ಕುಮಾರ್ ಅವರ ಖ್ಯಾತ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎನ್ನುವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರ ಸ್ನೇಹಿತರು ಮತ್ತು ನಿರೂಪಕ ರಮೇಶ್ ಅವರ ಜೊತೆಯಲ್ಲಿ ಪ್ರಭುದೇವ ಅವರು ‘ಗೋಲಿ ಆಟ’, ‘ಗಾಲಿ ಆಡಿಸೋ ಆಟ’ವನ್ನು ಕೂಡ ಆಡಿ ಮಕ್ಕಳಂತೆ ಖುಷಿ ಪಟ್ಟಿದ್ದಾರೆ. ಪ್ರಭುದೇವ ಅವರು ಬಾಲ್ಯದ ಬಗ್ಗೆ ನೆನಪಿನ ಬುತ್ತಿ ಬಿಚ್ಚುತ್ತಲೆ ತಮ್ಮ ಇಷ್ಟದ ಹಪ್ಪಳವನ್ನು ಸವಿದಿದ್ದಾರೆ.
‘ಪದ್ಮಶ್ರೀ’ ಜೊತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಕನ್ನಡದ ಪ್ರತಿಭೆ. ಡ್ಯಾನ್ಸ್ ಮಾಸ್ಟರ್ ಆಗಿದ್ದ ಮೂಗೂರು ಸುಂದರ ಅವರು ತಮಿಳುನಾಡಿಗೆ ವಲಸೆ ಹೋಗಿ ಚೆನ್ನೈನಲ್ಲಿ ನೆಲೆಸಿದರು. ಅಲ್ಲಿಯೇ ಮಕ್ಕಳನ್ನು ಬೆಳೆಸಿ ಎಲ್ಲರನ್ನೂ ನೃತ್ಯಪಟುವನ್ನಾಗಿ ಮಾಡಿದರು. ಕಳೆದ 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜೊತೆ ಪ್ರಭುದೇವ ಕೆಲಸ ಮಾಡಿದ್ದಾರೆ.