BY Vijayendra : ಹುಲಿ ಜೊತೆ ಹುಲಿಯೇ ಫೈಟ್ ಮಾಡಬೇಕು, ಆಡು ಕಟ್ಟಿದರೆ ಹಾಗೇ ಸದ್ದಿಲ್ಲದಂತೆ ಮೇಯ್ಕೊಂಡು ಬಾಯೊರಸಿಕೊಂಡು ಹೋಗತ್ತೆ- ವರುಣಾದಲ್ಲಿ ಸಿದ್ದು ವಿರುದ್ಧ ಸ್ಪರ್ಧಿಸುವಂತೆ ವಿಜಯೇಂದ್ರಗೆ ಒತ್ತಾಯ.
BY Vijayendra :ಸಿದ್ದರಾಮಯ್ಯನವರ ಕ್ಷೇತ್ರ ವರುಣಾ ಅಂತ ಫಿಕ್ಸ್ ಆಗುತ್ತಿದ್ದಂತೆ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ತ ಶುರುವಾಗಿದೆ. ಹುಲಿಯ ಎದುರು ಹುಲಿಯನ್ನೇ ಬಿಡಲು ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಹುಲಿಯ ಮುಂದೆ ಆಡನ್ನು ಕಟ್ಟಿದರೆ ಸುಲಭವಾಗಿ ಹುಲಿ ಮೇಯ್ಕೊಂಡು ಹೋಗುತ್ತದೆ ಎನ್ನುವುದು ಬಿಜೆಪಿ ಕಾರ್ಯಕರ್ತರ ಅಳಲು.
ವಿಷ್ಯ ಏನು ಅಂದ್ರೆ, ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ (BY Vijayendra ) ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಇಂದು ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದರು. ಅದಕ್ಕೆ ವರುಣಾ ಕ್ಷೇತ್ರದ ಕಾರ್ಯಕರ್ತರಿಂದ ತೀವ್ರ ವಿರೋಧ ಎದುರಾಗಿದೆ.
ಇಂದು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಮೈಸೂರಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ವಿಜಯೇಂದ್ರ ಎದುರೇ ಕಾರ್ಯಕರ್ತರು ವರುಣಾದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯ ಹಾಕಿದ್ದಾರೆ. ‘ ನೀವಲ್ಲದೆ ಬೇರೆ ಯಾರೇ ಬಂದರೂ ಕ್ಷೇತ್ರದಲ್ಲಿ ಗೆಲ್ಲಲ್ಲ. ಹುಲಿ ಜೊತೆಯಲ್ಲಿ ಹುಲಿಯೇ ಫೈಟ್ ಮಾಡಬೇಕು. ಆಡು ಕಟ್ಟಿದರೆ ತಿಂದುಕೊಂಡು ಹಾಗೇ ಸದ್ದಿಲ್ಲದಂತೆ ಮೇಯ್ಕೊಂಡು ಬಾಯೊರಸಿಕೊಂಡು ಹೋಗತ್ತೆ. ನೀವೇ ಬರ್ಬೇಕು ಬಾಸ್, ನಾವೇ ವಿನ್ ಆಗ್ಬೇಕು ‘ ಎಂದು ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.
” ನೀವು ಕಾರ್ಯಕರ್ತರನ್ನು ಕೈ ಬಿಡಬಾರದು. ಇಲ್ಲಿ ವಿಜಯೇಂದ್ರ ಬಂದು ನಿಂತರೆ ಬರೋಬ್ಬರಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ತಂದೆ- ಮಕ್ಕಳ ಪ್ರಶ್ನೆ ನಡುವೆ ಕಾರ್ಯಕರ್ತರನ್ನು ಕೈ ಬಿಡಬಾರದು. ನೀವಿಲ್ಲಿ ಬಂದು ನಿಂತರೆ ಹಳೇ ಮೈಸೂರು ಭಾಗದ ಇತರೆ ಕ್ಷೇತ್ರಗಳಿಗೂ ಶಕ್ತಿ ಬರುತ್ತೆ. ನೀವು ಬಂದು ಸ್ಪರ್ಧೆ ಮಾಡಲೇಬೇಕು. ನೀವು ಬನ್ನಿ, ಇಲ್ಲವಾದರೆ ಊಟಕ್ಕೆ ವಿಷ ಹಾಕಿ ಕೊಡಿ ” ಎಂದು ಬಿಜೆಪಿ ಕಾರ್ಯಕರ್ತರು ವಿಜಯೇಂದ್ರ ಸಮ್ಮುಖದಲ್ಲಿ ಆಗ್ರಹ ಮಾಡಿದ ಪ್ರಸಂಗ ನಡೆಯಿತು.
‘ ಇಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಹೊಡೆತ ತಡೆಯಲು ನಮಗೆ ಆಗುತ್ತಿಲ್ಲ. 15 ವರ್ಷದಿಂದ ಕಾರ್ಯಕರ್ತರು ತಬ್ಬಲಿ ಆಗಿದ್ದೇವೆ. ನೀವು ರಾಜ್ಯ ನಾಯಕರು. ಬೇಕಾದ್ರೆ ನೀವು ಶಿಕಾರಿಪುರ, ವರುಣಾ ಎರಡೂ ಕಡೆ ನಿಲ್ಲಿ. ಆದರೆ ವರುಣಾ ಮಾತ್ರ ಕೈಬಿಡಬೇಡಿ. ನೀವು ಮನಸ್ಸು ಮಾಡಿದರೆ ವರುಣಾದಿಂದ ನಿಮ್ಮನ್ನು ಎಂಎಲ್‌ಎ ಮಾಡಬಹುದು ‘ ಎಂದು ವಿಜಯೇಂದ್ರ ಮೇಲೆ ಒತ್ತಡ ಹೇರಿದ್ದಾರೆ.
ವಿಜಯೇಂದ್ರ ಅವರು ಆಗ ತನ್ನ ಕಾರ್ಯಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ. ನಾನು.ಈಗ ಪ್ರತಿನಿಧಿಸುತ್ತಾ ಬರುತ್ತಿರುವ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ಶಿಕಾರಿಪುರ. ಅಲ್ಲಿಂದಲೇ ನಾನು ಸ್ಪರ್ಧಿಸುವುದು. ಈ ಬಗ್ಗೆ ಹೈಕಮಾಂಡ್ ಮನವೊಲಿಸುತ್ತೇನೆ. ವರುಣಾ ಕ್ಷೇತ್ರಕ್ಕೆ ಬೇರೆ ಸಮರ್ಥ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಯಡಿಯೂರಪ್ಪನವರು ಇಂದು ಸ್ಪಷ್ಟಪಡಿಸಿದ್ದಾರೆ. ತಂದೆಯವರ ಇಚ್ಛೆಯಂತೆ ಮತ್ತುಹೈಕಮಾಂಡ್ ನಿರ್ಣಯದಂತೆ ಸ್ಪರ್ಧಿಸುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ. ವರುಣಾದಲ್ಲಿ ಹುಲಿಯ ಮುಂದೆ ಹುಲಿಯನ್ನು ಇಳಿಸುತ್ತಾ ಅಥವಾ ಹುಲಿಗೆ ಆಹಾರವಾಗಿ ಬಡಪಾಯಿ ಮೇಕೆಯನ್ನು ಕಟ್ಟಿ ಬಲಿಪಶು ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: B Y Vijayendra: ಬಿ ವೈ ವಿಜಯೇಂದ್ರ ಕಣಕ್ಕಿಳಿಯೋದು ಎಲ್ಲಿಂದ? ಕೊನೆಗೂ ಉತ್ತರ ಕೊಟ್ಟ ಯಡಿಯೂರಪ್ಪ!