Hassan Assembly: ಹಾಸನದಲ್ಲಿ MP, MLA, MLC ಎಲ್ರೂ ಇದ್ದಾರೆ, ನಾನೂ ಬದ್ಕಿದೀನಿ. ನನಗೂ ಎಲ್ಲಾ ಗೊತ್ತಿದೆ: ತಮ್ಮನಿಗೆ ಅಣ್ಣನ ಟಾಂಗ್‌

HD Revanna : ಇಷ್ಟು ದಿನ ತಣ್ಣಗಿದ್ದ ಹಾಸನ ವಿಧಾನಸಭಾ(Hasana Assembly) ಕ್ಷೇತ್ರದ ಚುನಾವಣಾ ಕಾವು ಎಲೆಕ್ಷನ್ ಡೇಟ್ ಅನೌನ್ಸ್ ಆದ ಕೂಡಲೆ ಮತ್ತೆ ರಂಗೇರಿದೆ. ಈ ಬಾರಿ ಬಿಜೆಪಿ(BJP) ಶಾಸಕ ಪ್ರೀತಂ(Preetam Gowda) ಗೌಡರನ್ನ ಸೋಲಿಸಲು ಪಣತೊಟ್ಟಿರುವ ದಳಪತಿಗಳು ಸದ್ದಿಲ್ಲದೇ ಆಪರೇಷನ್‌ ಜೆಡಿಎಸ್‌(JDS) ಶುರು ಮಾಡಿದ್ದಾರೆ. ಇಷ್ಟಾದರೂ ಪ್ರಭಲ ಆಕಾಂಕ್ಷಿಗಳಿರುವುದರಿಂದ ಜೆಡಿಎಸ್ ಟಿಕೆಟ್ ಯಾರಿಗೆ ಎಂಬ ಪ್ರಶ್ನೆ ಕಗ್ಗಂಟಾಗಿದೆ. ಆದರೆ ಈ ನಡುವೆ ಜೆಡಿಎಸ್ ಆಧಾರ ಸ್ಥಂಭಗಳಾದ, ಎಚ್ ಡಿ ಕುಮಾರಸ್ವಾಮಿ(HD Kumaraswamy) ಮತ್ತು ರೇವಣ್ಣನವರ( HD Revanna) ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿದ್ದು, ಫ್ಯಾಮಿಲಿ ವಾರ್ ಶುರುವಾಗುವಂತಿದೆ.

ಹೌದು, ಹಾಸನದ ಟಿಕೆಟ್ ಯಾರಿಗೆ ಎಂಬ ವಿಚಾರ ಮತ್ತೆ ಗರಿಗೆದರಿದೆ. ಜೆಡಿಎಸ್ ಭದ್ರಕೋಟೆ, ಮೂಲ ಕೋಟೆ ಎಂದೆಲ್ಲಾ ಕರೆಯಬಹುದಾದ ಹಾಸನದಲ್ಲಿ ಒಂದು ಕಾಲದಲಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರ ನಂತರ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಕದನಕ್ಕೆ ಸಾಕ್ಷಿಯಾಗಿತ್ತು. ಆದರೆ ಸದ್ಯ ಜೆಡಿಎಸ್ ಒಳಗೇ ಜಿದ್ದಿಗಳು ನಡೆಯುತ್ತಿವೆ. ಹಾಸನ ಕ್ಷೇತ್ರಕ್ಕೆ ಜೆಡಿಎಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿರುವ ಎಚ್‌.ಪಿ. ಸ್ವರೂಪ್‌(H P Swaroop) ಜೊತೆ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರವಷ್ಟೇ ಮಾತನಾಡಿ, ಹಾಸನ ವಿಚಾರದಲ್ಲಿ ತಮ್ಮ ನಿಲುವಿಗೆ ಈಗಲೂ ಬದ್ಧ ಎಂದು ಹೇಳಿದ್ದರು. ಇದರ ಬೆನ್ನಲೇ ರೇವಣ್ಣನವರು ಸ್ವರೂಪ್‌ ಯಾರೆಂದೇ ಗೊತ್ತಿಲ್ಲ ಎಂದು ಬಾಂಬ್‌ ಸಿಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ಕುಮಾರಣ್ಣ ಹೇಳಿರುವ ‘ಸಾಮಾನ್ಯ ಕಾರ್ಯಕರ್ತ’ ಯಾರೆಂದು ಮುಂದೆ ನೋಡೋಣ. ನಾನಿನ್ನೂ ಸತ್ತಿಲ್ಲ. ಬದುಕಿದ್ದೇನೆ ಹಾಸನ ಜಿಲ್ಲೆಯಲ್ಲಿ 25 ವರ್ಷದಿಂದ ಕೆಲಸ ಮಾಡಿದ್ದೇನೆ. ಜಿಲ್ಲೆಯ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ’ ಎಂದು ಗುಡುಗಿದ್ದಾರೆ. ಹಾಸನ ವಿಚಾರದಲ್ಲಿ ಪಟ್ಟು ಹಿಡಿದಿರುವ ಕುಮಾರಸ್ವಾಮಿ ವಿರುದ್ಧ ರೇವಣ್ಣ ಈ ರೀತಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಲ್ಲಿನ ರಾಜಕೀಯ ವಿಚಾರದಲ್ಲಿ ಇನ್ನೊಬ್ಬರಿಂದ ಪಾಠ ಬೇಡ ಎಂದು ಪರೋಕ್ಷವಾಗಿ ಸಹೋದರನಿಗೆ ಸಂದೇಶ ರವಾನಿಸಿದಂತಿದೆ.

ಈ ವಿಚಾರದಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ. ನಾನು ಹೆದರಿಕೊಂಡು ಓಡಿ ಹೋಗುವವನೂ ಅಲ್ಲ ಎಂದು ಸ್ಪಷ್ಟಪಡಿಸಿದರು. ವರಿಷ್ಠರು, ನಾವು ಎಲ್ಲ ಕೂತು ಚರ್ಚೆ ಮಾಡುತ್ತೇವೆ. ಜಿಲ್ಲೆಯಲ್ಲಿ ಪಕ್ಷದ ಸಂಸದ ಇಲ್ವಾ? ಎಂಎಲ್ಸಿ ಇಲ್ವಾ? ದೇವೇಗೌಡರದೇ ಒಂದು ಅಡಿಪಾಯ ಇದೆ. ರಾಜೇಗೌಡರಂಥ ನಾಯಕರು ಇದ್ದಾರೆ ಎಂದ ರೇವಣ್ಣ, ನಾವು ಎಲ್ಲಾ ಕೂತು ಬಗೆಹರಿಸಿಕೊಳ್ಳುತ್ತೇವೆ. ಇನ್ನೆರಡು ದಿನದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯನ್ನು ಬಹಿರಂಗಪಡಿಸುತ್ತೇವೆ. ಇಲ್ಲಿ ಜೆಡಿಎಸ್‌ ಶಕ್ತಿಯುತವಾಗಿದ್ದು, ಪಕ್ಷದ ಮುಖಂಡರಾದ ಎಸ್‌.ದ್ಯಾವೇಗೌಡ, ಕೆ.ಎಂ.ರಾಜೇಗೌಡ ಹಾಗೂ ಬಿ.ವಿ.ಕರೀಗೌಡ ಸೇರಿದಂತೆ ಇತರೆ ಮುಖಂಡರ ಜತೆಗೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು.

ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ತಮ್ಮ ಪಾಲಿಗೆ ಅಗ್ನಿ ಪರೀಕ್ಷೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕುರಿತು ಬೆದರಿಕೆ ಹಾಕುವವರಿಗೆ ತಲೆಬಾಗಲ್ಲ ಎಂದು ಪರೋಕ್ಷವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಟಾಂಗ್‌ ನೀಡಿದ್ದರು.

ಇದನ್ನೂ ಓದಿ: ದ.ಕ : ವಿಧಾನಸಭಾ ಚುನಾವಣೆ ದಾಖಲೆ ಬರೆದ ಶಕುಂತಳಾ ಶೆಟ್ಟಿ

Leave A Reply

Your email address will not be published.