Madal Virupakshappa: ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಂಧನ: ಬೆನ್ನತ್ತಿ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು
Madal Virupakshappa : ಅಕ್ರಮ ಹಣ ಸಂಪಾದನೆ ಹಾಗೂ ಲಂಚ ಪಡೆಯುವ ಆರೋಪದಡಿ ಎ1 ಆರೋಪಿಯಾಗಿದ್ದ ಬಿಜೆಪಿ(BJP) ಶಾಸಕ ಮಾಡಾಳ್ ವಿರುಪಾಕ್ಷಪ್ಪ(Madal Virupakshappa) ಅವರು ಹೈಕೋರ್ಟ್‌ನಿಂದ ಪಡೆದಿದ್ದ ಮಧ್ಯಂತರ ಜಾಮೀನು ರದ್ದಾದ ಬೆನ್ನಲ್ಲೇ ಅವರನ್ನು ಲೋಕಾಯುಕ್ತ ಪೊಲಿಸರು ಬಂಧಿಸಿದ್ದಾರೆ.
ಹೌದು, ಹೈಕೋರ್ಟ್‌ನಿಂದ ಪಡೆದಿದ್ದ ಮಧ್ಯಂತರ ಜಾಮೀನು ರದ್ದಾದ ಬೆನ್ನಲ್ಲೇ ಚುನಾವಣಾ ಕಾರ್ಯಕ್ರಮವನ್ನು ಮುಗಿಸಿಕೊಂಡು ಖಾಸಗಿ ಕಾರಿನಲ್ಲಿ ಹೊರಟ ಮಾಡಾಳ ವಿರುಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತಸಂದ್ರ ಟೋಲ್‌ಗೇಟ್ ಬಳಿ ಬಂಧಿಸಲಾಗಿದೆ. ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ರದ್ದಾಗುತ್ತಿದ್ದಂತೆಯೇ ಲೋಕಾಯುಕ್ತ ಪೊಲೀಸರು ಚನ್ನಗಿರಿಯ ಅವರ ನಿವಾಸಕ್ಕೆ ತೆರಳಿದ್ದರು. ಅವರು ಮನೆಯಲ್ಲಿ ಇಲ್ಲದ ಕಾರಣ ಬಂಧಿಸಲು ಅಲ್ಲೇ ಕಾದು ಕುಳಿತಿದ್ದರು. ಅಂತಿಮವಾಗಿ ಸಂಜೆ 7 ಗಂಟೆ ಸುಮಾರಿಗೆ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ತುಮಕೂರಿನ(Tumkuru) ಕ್ಯಾತ್ಸಂದ್ರ ಟೋಲ್ ಬಳಿ ಬಂಧಿಸಿದ್ದಾರೆ.
ಕಳೆದ ತಿಂಗಳು ಮಾಡಾಳು ವಿರುಪಾಕ್ಷಪ್ಪ ಅವರ ಪುತ್ರ ಬೆಂಗಳೂರಿನ ಖಾಸಗಿ ಕಚೇರಿಯಲ್ಲಿ 40 ಲಕ್ಷ ರೂ. ಲಂಚದ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದರು. ಒಟ್ಟಾರೆ ದಾಳಿ ಮುಮದುವರಿಕೆ ವೇಳೆ 6 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದಾರೆ. ಈ ಕೇಸ್ ಸಂಬಂಧಿಸಿ ಮಾಡಾಳ್ ವಿರೂಪಾಕ್ಷಪ್ಪ ಕರ್ನಾಟಕ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದ ಕಾರಣಕ್ಕೆ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.
ಅಕ್ರಮ ಹಣ ಸಂಪಾದನೆಯಲ್ಲಿ ಎ1 ಆರೋಪಿ ಆಗಿದ್ದ ಮಾಡಾಲ್ ವಿರುಪಾಕ್ಷಪ್ಪ ಅವರ ವಿರುದ್ಧ ಬಂಧನದ ವಾರೆಂಟ್ ಇದ್ದರೂ 6 ದಿನ ಕಣ್ತಪ್ಪಿಸಿಕೊಂಡು ಅಜ್ಞಾತ ಸ್ಥಳದಲ್ಲಿದ್ದರು. ಇನ್ನು ಹೈಕೋರ್ಟ್‌ನಲ್ಲಿ ವಿರುಪಾಕ್ಷಪ್ಪ ಅವರಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೊತೆಗೆ, ಶಾಸಕರಾಗಿ ಹಲವು ಜವಾಬ್ದಾರಿಗಳು ಇರುವ ಹಿನ್ನೆಲೆಯಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರಿಂದ ಅವರಿಗೆ ಹೈಕೋರ್ಟ್‌ನಿಂದ ಜಾಮೀನು ನೀಡಲಾಗಿತ್ತು.
ಮಾಡಾಳ್ ವಿರೂಪಾಕ್ಷಪ್ಪಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದನ್ನು ಲೋಕಾಯುಕ್ತ ಪೊಲೀಸರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ ಸೋಮವಾರ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಶಾಸಕರಿಗೆ ನೀಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿತ್ತು. ಈ ಆದೇಶ ಹೊರಬಿದ್ದ ಬಳಿಕ ಲೋಕಾಯುಕ್ತ ಪೊಲೀಸರು ಶಾಸಕರನ್ನು ಬಂಧಿಸಿದ್ದಾರೆ.
ಇನ್ನು ತುಮಕೂರು ಹೆದ್ದಾರಿಯ ಕ್ಯಾತಸಂದ್ರ ಟೋಲ್ ಬಳಿ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆದು ತರುತ್ತಿದ್ದಾರೆ. ಇನ್ನು ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕಾಗಿದೆ. ಸಾಧ್ಯವಾದಲ್ಲಿ ರಾತ್ರಿ ವೇಳೆಯೇ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಇಲ್ಲವಾದಲ್ಲಿ ಅವರ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿ ಲೋಕಾಯುಕ್ತ ಪೊಲೀಸರ ವಶದಲ್ಲಿ ಇಟ್ಟುಕೊಳ್ಳಲಾಗುತ್ತದೆ. ನಾಳೆ, ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.