Nirmala Sitharaman: ಮರೆಯಾಗುತ್ತಾ ಗುಲಾಬಿ ಬಣ್ಣದ ನೋಟು? ATMಗಳಲ್ಲಿ ಏಕೆ ಸಿಗುತ್ತಿಲ್ಲ ಈ 2000ರೂಗಳ ನೋಟುಗಳು? ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ

Nirmala Sitharaman :ಭಾರತದಲ್ಲಿನ್ನು 2,000 ರೂ. ಮುಖಬೆಲೆಯ ನೋಟಿನ ಚಲಾವಣೆ ನಿಲ್ಲಲಿದೆಯೇ? ಎಂಬ ಪ್ರಶ್ನೆ ಮತ್ತು ಚರ್ಚೆ ಬಹಳ ದಿನಗಳಿಂದ ಜನರಲ್ಲಿ ಕಾಡುತ್ತಿದೆ. ಯಾಕೆಂದರೆ ದೇಶದ ಬಹುತೇಕ ಎಟಿಎಂ(ATM)ಗಳಲ್ಲಿ ಈಗ ಮೊದಲಿನಂತೆ 2,000 ರೂ. ಮುಖಬೆಲೆಯ ನೋಟುಗಳು ಬರುತ್ತಿಲ್ಲ. 500 ರೂ. ನೋಟುಗಳನ್ನೇ ಬ್ಯಾಂಕ್‌ಗಳು ಎಟಿಎಂಗಳಿಗೆ ಸರಬರಾಜು ಮಾಡುತ್ತಿವೆ. ಹೀಗಾಗಿ ನಿಧಾನವಾಗಿ 2,000 ರೂ. ನೋಟಿನ ಬಳಕೆಯನ್ನು ತಗ್ಗಿಸುವ ಪ್ರಯತ್ನ ಇದಾಗಿದೆಯಾ? ಭಾರತೀಯ ರಿಸರ್ವ್ ಬ್ಯಾಂಕ್ (RBI) ಇದರ ಮೇಲೆ ನಿರ್ಬಂಧ ವಿಧಿಸಿದೆಯಾ? ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಉತ್ತರಿಸಿದ್ದಾರೆ.

 

ಹೌದು, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ಮುಖಬೆಲೆಯ ಗುಲಾಬಿ ಬಣ್ಣದ ನೋಟುಗಳು ಸಿಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ(Central Government) 2000ರೂ. ನೋಟ್ ಅನ್ನು ಬ್ಯಾನ್ ಮಾಡುತ್ತಾ ಎಂಬ ಅನುಮಾನ ಅನೇಕರಲ್ಲಿ ಹುಟ್ಟಿತ್ತು. ಈ ಹಿನ್ನೆಲೆಯಲ್ಲಿ ಎಟಿಎಂ ಮುಖಾಂತರ 2000ರೂ. ಮುಖಬೆಲೆಯ ನೋಟುಗಳನ್ನು ವಿತರಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳ ಮೇಲೆ ನಿರ್ಬಂಧ ವಿಧಿಸಿದೆಯಾ? ಎಂಬ ಪ್ರಶ್ನೆಯನ್ನು ಲೋಕಸಭೆಯಲ್ಲಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕ್ ಎಟಿಎಂಗಳಲ್ಲಿ 2000 ರೂ. ನೋಟುಗಳನ್ನು ತುಂಬದಂತೆ ಬ್ಯಾಂಕುಗಳಿಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆಯಲ್ಲಿ ಮಾ.20ರಂದು ಸಂಸದ ಸಂತೋಷ್ ಕುಮಾರ್(Santosh Kumar) ಅವರು ನೋಟು ಅಮಾನ್ಯೀಕರಣದ ಬಳಿಕ 500ರೂ. ಹಾಗೂ 2000ರೂ. ಮುಖಬೆಲೆಯ ಸುಮಾರು 9.21 ಲಕ್ಷ ಕೋಟಿ ರೂ. ಕರೆನ್ಸಿ ನೋಟುಗಳನ್ನು ವಿತರಿಸಲಾಗಿತ್ತು, ಈ ನೋಟುಗಳು ಸದ್ಯ ಚಲಾವಣೆಯಲ್ಲಿ ಇಲ್ಲವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಅಂಥ ಯಾವುದೇ ಮಾಹಿತಿ ಅಥವಾ ಅಂಕಿಅಂಶಗಳು ಲಭ್ಯವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವಾರ್ಷಿಕ ವರದಿಗಳ ಅನ್ವಯ 2017ರ ಮಾರ್ಚ್ ಕೊನೆಯಲ್ಲಿ ಹಾಗೂ 2022ರ ಮಾರ್ಚ್ ಕೊನೆಯಲ್ಲಿ ಚಲಾವಣೆಯಲ್ಲಿರುವ 500ರೂ. ಹಾಗೂ 2000ರೂ. ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ ಕ್ರಮವಾಗಿ 9.512ಲಕ್ಷ ಕೋಟಿ ರೂ. ಹಾಗೂ 27.057ಲಕ್ಷ ಕೋಟಿ ರೂ.’ ಎಂದು ತಿಳಿಸಿದ್ದಾರೆ.

ಇದೇ ತಿಂಗಳ ಅಂದರೆ ಮಾ.14ರಂದು ಕೂಡ 2000ರೂ. ನೋಟಿನ ಬಗ್ಗೆ ಸರ್ಕಾರ ಪ್ರಶ್ನೆಯನ್ನು ಎದುರಿಸಿತ್ತು. ಸರ್ಕಾರ 2000ರೂ. ನೋಟುಗಳನ್ನು ಸ್ಥಗಿತಗೊಳಿಸಲು ಯೋಚಿಸಿದೆಯಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪಂಕಜ್ ಚೌಧರಿ(Pankaj Chowdhary), 2019-20ನೇ ಸಾಲಿನ ಬಳಿಕ 2000ರೂ. ನೋಟುಗಳನ್ನು ಮುದ್ರಿಸಿಲ್ಲ. ಚಲಾವಣೆಯಲ್ಲಿರುವ ವಿವಿಧ ಮುಖಬೆಲೆಯ ನೋಟುಗಳು ಅಗತ್ಯ ಪ್ರಮಾಣದಲ್ಲಿವೆ ಎಂಬುದು ಪರಿಶೀಲನೆಯಲ್ಲಿ ತಿಳಿದುಬಂದಿದೆ. ಹೀಗಾಗಿ 2000ರೂ. ನೋಟುಗಳನ್ನು ಸ್ಥಗಿತಗೊಳಿಸುವ ಯಾವುದೇ ಪ್ಲ್ಯಾನ್ ಇಲ್ಲ ಎಂದು ತಿಳಿಸಿದ್ದರು.

ಅಂದಹಾಗೆ ಮುಂದಿನ ದಿನಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಕೇಳಿ ಬಂದಿತ್ತು. ”2,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ,” ಎಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಹೇಳಿದ್ದರು. ನೋಟು ರದ್ದಾಗುವ ಆತಂಕ ಯಾರಿಗೂ ಬೇಡ ಎಂದು ಭರವಸೆ ನೀಡಿದ್ದರು.

ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ವಾರ್ಷಿಕ ವರದಿಗಳ ಪ್ರಕಾರ, ಮಾರ್ಚ್ 2017ರ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ 500 ಮತ್ತು 2,000 ರೂ. ಮುಖಬೆಲೆಯ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯ 9.512 ಲಕ್ಷ ಕೋಟಿ ರೂ.ಆಗಿತ್ತು. ಅದೇ ರೀತಿ 2022ರ ಮಾರ್ಚ್ ಅಂತ್ಯದ ವೇಳೆಗೆ ಇದರ ಒಟ್ಟು ಮೌಲ್ಯ 27.057 ಲಕ್ಷ ರೂ. ಆಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ: Finance Bill 2023: ಪ್ರತಿಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ 2023ರ ಹಣಕಾಸು ಮಸೂದೆ ಅಂಗೀಕಾರ! ಪ್ರಮುಖ ತಿದ್ದುಪಡಿಗಳೇನು?

Leave A Reply

Your email address will not be published.