Charukirthi Bhattarak Swamiji: ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ! ಬಹುಭಾಷಾ ವಿದ್ವಾಂಸ, ಕರ್ಮಯೋಗಿ ಇನ್ನಿಲ್ಲ!

Charukirthi Bhattarak Swamiji :ಶ್ರವಣಬೆಳಗೊಳ(Shravanabelagola) ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (Charukirthi Bhattarak Swamiji) (73) ಅವರು ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಜಿನೈಕ್ಯರಾಗಿದ್ದಾರೆ ಎಂದು ತಿಳಿದುಬಂದಿದೆ

ವಾಯುವಿಹಾರ ನಡೆಸುತ್ತಿದ್ದ ವೇಳೆ ಬೆಳಗ್ಗೆ 7.30ರ ಸಮಯದಲ್ಲಿ ಶ್ರೀಗಳ ಆರೋಗ್ಯದಲ್ಲಿ ದಿಢೀರ್‌ ಏರುಪೇರಾಗಿದೆ. ಈ ಹಿನ್ನೆಲೆ ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿದೆ.

ಅನಾರೋಗ್ಯದ ಹಿನ್ನೆಲೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಅಂಬ್ಯುಲೆನ್ಸ್ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ದೇಶಾದ್ಯಂತ ಅಪಾರಭಕ್ತವರ್ಗವನ್ನು ಹೊಂದಿದ್ದಾರೆ.

ಮೇ 3, 1949ರಲ್ಲಿ ಕಾರ್ಕಳದ ವಾರಂಗದಲ್ಲಿ ಜನಿಸಿದ್ದ ಶ್ರೀಗಳು, 1970ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು. ಕರ್ನಾಟಕದ ಜೈನ ಸಮುದಾಯದ ಹಿರಿಯ ಸ್ವಾಮೀಜಿಗಳಾಗಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 1970ರಿಂದಲೂ ಮಹಾಮಸ್ತಕಾಭಿಷೇಕಗಳನ್ನು ನೆರವೇರಿಸಿದ್ದರು. ಪ್ರಕೃತಿ, ಸಂಸ್ಕೃತಿ ಹಾಗೂ ಕನ್ನಡದಲ್ಲಿ ಜೈನ ಫಿಲಾಸಪಿ ಮಾಡಿರುವ ಇವರು, ಮೈಸೂರು ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಫಿಲಾಸಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದಿದ್ದಾರೆ.

ಭಟ್ಟಾರಕ ಸ್ವಾಮೀಜಿ ಅವರ ನಿಸ್ವಾರ್ಥ ಸೇವೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ‘ಕರ್ಮಯೋಗಿ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ಮಹಾವೀರರ ನಿರ್ವಾಣದ 2500ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ದಕ್ಷಿಣ ಭಾರತದಾದ್ಯಂತ ‘ಧರ್ಮಚಕ್ರ’ದ ಯಾತ್ರೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. 1000 ನೇ ವರ್ಷದ ಮಹಾಮಸ್ತಕಾಭಿಷೇಕವನ್ನು ಕೂಡ ಭಟ್ಟಾರಕ ಸ್ವಾಮೀಜಿ ನೆರವೇರಿಸಿದ್ದರು. ಈ ವೇಳೆ ಉಚಿತ ನೇತ್ರ ಶಿಬಿರ ಆಯೋಜಿಸಿ 1000 ಜನರಿಗೆ ಉಚಿತ ನೇತ್ರ ಚಿಕಿತ್ಸೆಯನ್ನು ಮಾಡಿಸಿದ್ದರು.

ಪ್ರಾಕೃತದ ಜ್ಞಾನ ಭಂಡಾರ ಶ್ರೀಸಾಮಾನ್ಯನ ಕೈಗೆ ಸಿಗುವಂತೆ ಮಾಡಲು ಭಟ್ಟಾರಕ ಸ್ವಾಮೀಜಿ ಬೆಂಗಳೂರಿನಲ್ಲಿ ‘ಪ್ರಾಕೃತ ಜ್ಞಾನಭಾರತಿ ಶಿಕ್ಷಣ ಟ್ರಸ್ಟ್’ ಸ್ಥಾಪಿಸಿದ್ದಾರೆ. ಈ ಟ್ರಸ್ಟ್‌ನ ಆಶ್ರಯದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ರಾಷ್ಟ್ರೀಯ ಪ್ರಾಕೃತ ಸಮ್ಮೇಳನಗಳು ನಡೆಯುತ್ತವೆ. ಪ್ರಾಕೃತ ಕ್ಷೇತ್ರದಲ್ಲಿ ತಮ್ಮ ಗಮನಾರ್ಹ ಕೊಡುಗೆಗಾಗಿ ಆಯ್ಕೆಯಾದ ಹತ್ತು ವಿದ್ವಾಂಸರಿಗೆ ‘ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ’ಗಳನ್ನು ಪ್ರತಿ ವರ್ಷವೂ ನೀಡುತ್ತಾ ಬರಲಾಗುತ್ತಿದೆ.

ಇಂದು ನಾಡಿನಾದ್ಯಂತ ಇರುವ ಅನೇಕ ಜೈನ ಮಠಗಳಲ್ಲಿನ ಭಟ್ಟಾರಕ ಸ್ವಾಮಿಗಳಲ್ಲಿ ಹೆಚ್ಚಿನವರು ಈ ಶ್ರವಣಬೆಳಗೊಳದ ಭಟ್ಟಾರಕ ಸ್ವಾಮಿಗಳ ಶಿಷ್ಯರೇ ಎಂಬುದು ಹೆಮ್ಮೆಯ ಸಂಗತಿ. ಅಲ್ಲದೆ ಅಘಾದ ಪಾಂಡಿತ್ಯವಿರುವ ಶ್ರೀಗಳು ಬಹುಭಾಷಾ ವಿದ್ವಾಂಸರೂ ಕೂಡ ಹೌದು. ಇಂದು ಅವರ ನಿಧನ ಕೇವಲ ಜೈನ ಸಮುದಾಯವಲ್ಲದೆ ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ.

Leave A Reply

Your email address will not be published.