Uttar Pradesh: ಆಫೀಸ್ನಲ್ಲಿ ಒಸಾಮಾ ಬಿನ್ ಲಾಡೆನ್ ಫೋಟೋ ಇಟ್ಟು ಪೂಜೆ! ಸೇವೆಯಿಂದ ಸರ್ಕಾರಿ ನೌಕರ ವಜಾ!
Osama Bin Laden : ಹಲವರು ತಮಗೆ ವಿದ್ಯೆ ಹೇಳಿಕೊಟ್ಟ ಗುರುವಿನ ಫೋಟೋವನ್ನೋ, ತಂದೆ ತಾಯಿಯ ಫೋಟವನ್ನೋ ಅಥವಾ ಇನ್ನಾರೋ ತಮಗೆ ಇಷ್ಟವಾದ, ಮಾದರಿಯಾದ ಮಹಾನ್ ವ್ಯಕ್ತಿಗಳ ಫೋಟೋಗಳನ್ನು ಇಟ್ಟು ಪೂಜಿಸೋದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಸರ್ಕಾರಿ ನೌಕರ ತನ್ನ ಆಫೀಸ್ ನಲ್ಲಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಫೋಟೋ ಹಾಗೂ ಪ್ರತಿಮೆಯನ್ನು ಇಟ್ಟುಕೊಂಡು ದೇವರೆಂದು ಪೂಜಿಸುತ್ತಿದ್ದು, ಸೇವೆಯಿಂದ ವಜಾಗೊಳಿಸಲಾಗಿದೆ.
ಹೌದು, ಉತ್ತರ ಪ್ರದೇಶ(Uttar Pradesh) ವಿದ್ಯುತ್ ನಿಗಮ ನಿಯಮಿತದ (ಯುಪಿಸಿಎಲ್) ಉಪವಿಭಾಗಾಧಿಕಾರಿ ರವೀಂದ್ರ ಪ್ರಕಾಶ್ ಗೌತಮ್(Ravindra Prakash) ಎಂಬ ಭೂಪ ಹತ್ಯೆಗೀಡಾಗಿರುವ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್(Osama bin Laden) ತನ್ನ ಆರಾಧ್ಯ ದೈವನಂತೆ ಆತನ ಪ್ರತಿಮೆ ಮತ್ತು ಫೋಟೋವನ್ನು ಗೌತಮ್ ಕಚೇರಿಯಲ್ಲಿ ಹಾಕಿದ್ದು ತನಿಖೆ ವೇಳೆಯಲ್ಲಿ ಕಂಡುಬಂದಿದೆ. ಸದ್ಯ ಆತನನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಯುಪಿಸಿಎಲ್ ಅಧ್ಯಕ್ಷ ಎಂ. ದೇವರಾಜ್ ಆದೇಶಿಸಿದ್ದಾರೆ.
ಜೂನ್ 2022ರಲ್ಲಿ ಫರೂಕಾಬಾದ್(Prukabad) ಜಿಲ್ಲೆಯ ಕಾಯಮ್‌ಗಂಜ್(Kayamganj) ಉಪವಿಭಾಗ-II ರಲ್ಲಿ ಸೇವೆಗೆ ನಿಯೋಜಿಸಿದ್ದಾಗ ಗೌತಮ್ ಫೋಟೋ ಹಾಕಿದ್ದು, ಕೊಠಡಿಯ ವಿಡಿಯೋ ವೈರಲ್ ಆದ ನಂತರ ಪ್ರಾಥಮಿಕ ತನಿಖೆ ನಡೆಸಿ ಆತನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೊರೆತ ಮಾಹಿತಿ ಪ್ರಕಾರ ಗೌತಮ್ ಅವರು ಇಂಜಿನಿಯರಿಂಗ್ ಪದವಿ ಹೊಂದಿದ್ದರಿಂದ ಬಿನ್ ಲಾಡೆನ್ ಅವರನ್ನು ಆರಾಧಿಸುತ್ತಿದ್ದರು. ಇದೀಗ ಯುಪಿಸಿಎಲ್ ಅಧ್ಯಕ್ಷ ಎಂ ದೇವರಾಜ್, ರವೀಂದ್ರ ಪ್ರಕಾಶ್ ಗೌತಮ್ ಅವರನ್ನು ವಿಚಾರಣೆ ಮಾಡಿದ ನಂತರ “ಅವನು ಒಸಾಮಾ ಬಿನ್ ಲಾಡೆನ್ ಅನ್ನು ಅತ್ಯುತ್ತಮ ಇಂಜಿನಿಯರ್ ಎಂದು ಪರಿಗಣಿಸುತ್ತಾನೆ ಮತ್ತು ಅವನ ಫೋಟೋವನ್ನು ಕಛೇರಿಯಲ್ಲಿ ಅಂಟಿಸುವುದು ತೀವ್ರ ಅಶಿಸ್ತಿನ ವರ್ತನೆಗಳಾಗಿವೆ. ಜನಸೇವಕನಾಗಿದ್ದರೂ ದೇಶವಿರೋಧಿ ಕೃತ್ಯ ಹಾಗೂ ಪಾಲಿಕೆ ವಿರುದ್ಧದ ಕೃತ್ಯ ನಡೆಸಿ ಇಲಾಖೆಗೆ ಕಳಂಕ ತಂದಿದ್ದಾರೆ” ಎಂದು ಆದೇಶದಲ್ಲಿ ತಿಳಿಸಿದ್ದಾರೆ.