Tumkuru :ಯುಗಾದಿ ದಿನವೇ ಬರೋಬ್ಬರಿ 200 ನಾಟಿ ಕೋಳಿಗಳನ್ನು ತಿಂದು ತೇಗಿದ ಚಿರತೆ!
Tumkuru :ಇತ್ತೀಚೆಗೆ ರಾಜ್ಯಾದ್ಯಂತ ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಅದರಲ್ಲೂ ಈ ಚಿರತೆ, ಹುಲಿ ಹಾಗೂ ಕಾಡಾನೆಗಳ ಕಾಟವೇ ಹೆಚ್ಚು. ಆನೆಗಳು ತೋಟಗಳನ್ನು ನಾಶ ಮಾಡಿ ಮನುಷ್ಯರ ಮೇಲೆ ಧಾಳಿ ನಡೆಸಿದ್ರೆ, ಈ ಹುಲಿ ಚಿರತೆಗಳು ನರಭಕ್ಷಕಗಳಾಗಿ ಜನರನ್ನು ಕೊಲ್ಲುತ್ತಿವೆ. ಅರಣ್ಯ ಇಲಾಖೆ(Forest Department) ಯವರು ಇವುಗಳನ್ನು ಸೆರೆಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಕೊಂಚ ಮಟ್ಟಿಗೆ ಇವುಗಳ ಕಾಟ ಶಮನವಾಗಿದೆ ಅನ್ನಬಹುದು. ಆದರೆ ನಿನ್ನೆ ರಾತ್ರಿ ಇಲ್ಲೊಂದೆಡೆ ಚಿರತೆಯೊಂದರ ಅವಾಂತರ ಕೇಳಿದ್ರೆ ಇದೇನು ಚಿರತೆಯೋ ಇಲ್ಲ ರಾಕ್ಷಸವೋ ಅಂತ ಬೆಚ್ಚಿಬೀಳುತ್ತೀರಿ.
ಯಾಕೆಂದರೆ ಜನವಸತಿ ಗ್ರಾಮದೊಳಗೆ ನುಗ್ಗಿ ಕುರಿ, ಮೇಕೆ, ಹಸು ಹಾಗೂ ನಾಯಿಗಳನ್ನು ಹಿಡಿದು ಬೇಟೆಯಾಡುತ್ತಿದ್ದ ಚಿರತೆ ಈಗ ನಾಟಿ ಕೋಳಿಗಳನ್ನು ಬೇಟೆಯಾಡಿದೆ. ಜೀವನಾಧಾರಕ್ಕಾಗಿ ತುಮಕೂರು(Tumkuru) ಜಿಲ್ಲೆ ಚಿಕ್ಕನಾಯಕನಹಳ್ಳಿ(Chikkanayakanahalli) ತಾಲ್ಲೂಕಿನ ಯಗಚಿಹಳ್ಳಿ(Yagachi) ಗ್ರಾಮದ ಕುಟುಂಬವೊಂದು ಊರಿನ ಹೊರಭಾಗದಲ್ಲಿದ್ದ ತೋಟದಲ್ಲಿ ಮಾಡಿಕೊಂಡಿದ್ದ ನಾಟಿ ಕೌಳಿ ಫಾರಂಗೆ ರಾತ್ರಿ ವೇಳೆ ನುಗ್ಗಿದ ಚಿರತೆಯೊಂದು ಬರೋಬ್ಬರಿ 200 ನಾಟಿ ಕೋಳಿಗಳನ್ನು ತಿಂದು ತೇಗುವ ಮೂಲಕ ಭರ್ಜರಿಯಾಗಿಯೇ ಹೊಸ್ತೊಡಕು (ವರ್ಷದ ತೊಡಕು) ಮಾಡಿಕೊಂಡಿದೆ.
ಹೌದು, ಕೋಳಿ ಫಾರಂ ಒಳಗೆ ನುಗ್ಗಿರುವ ಚಿರತೆ ಬರೋಬ್ಬರು 200 ಕೋಳಿಗಳ ರಕ್ತವನ್ನು ಹೀರಿದೆ. ಕೆಲವು ಕೋಳಿಗಳನ್ನು ಸಂಪೂರ್ಣವಾಗಿ ತಿಂದಿದ್ದು, ಇನ್ನು ಕೆಲವು ಕೋಳಿಗಳ ರಕ್ತವನ್ನು ಮಾತ್ರ ಹೀರಿಕೊಂಡು ಕೆಲವು ಭಾಗವನ್ನು ತಿಂದು, ಅರ್ಧ ದೇಹವನ್ನು ಬಿಟ್ಟು ಹೋಗಿದೆ. ಯಗಚಿಹಳ್ಳಿ ಗ್ರಾಮದ ಮಹಾಲಕ್ಷ್ಮೀ ಗಿರೀಶ್ ದಂಪತಿಗೆ ಸೇರಿದ ನಾಲಿ ಕೋಳಿ ಫಾರಂನಲ್ಲಿ ನಿನ್ನೆ ರಾತ್ರಿ ವೇಳೆ ಈ ಘಟನೆ ನಡೆದಿದೆ.
ಇಷ್ಟು ದಿನ ತುಮಕೂರು ಸೇರಿದಂತೆ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿತ್ತು. ಕಳೆದ ಒಂದು ತಿಂಗಳಿಂದ ಚಿರತೆಗಳ ಕಾಟ ತಗ್ಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ಜನತೆಗೆ ಈಗ ಚಿರತೆ ಹಾವಳಿಯ ಆತಂಕ ಹೆಚ್ಚಾಗಿದೆ. ಯಗಚಿಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ದನ, ಕುರಿ, ಮೇಕೆ, ಹಸುಗಳು ಹಾಗೂ ಮನೆಯ ಮುಂದೆ ಇರುತ್ತಿದ್ದ ನಾಯಿಗಳ್ನು ಹೊತ್ತೊಯ್ದು ತಿನ್ನುತ್ತಿದ್ದ ಚಿರತೆ ಈಗ ಹೊಲದಲ್ಲಿರುವ ಕೋಳಿ ಫಾರಂಗೆ ನುಗ್ಗುತ್ತಿರುವುದು ಭಾರಿ ಆತಂಕ ಮೂಡಿಸಿದೆ.
ಯುಗಾದಿ ಪ್ರಯುಕ್ತ ಹಲವು ಪ್ರದೇಶಗಳಲ್ಲಿ ಹೊಸ್ತೊಡಕು ಎಂಬ ಸಂಪ್ರದಾಯ ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೋಳಿಗಳಿಗೆ ಭಾರಿ ಬೇಡಿಕೆ ಇರುತ್ತದೆ. ಅಂತೆಯೇ ಯುಗಾದಿ ಹಬ್ಬಕ್ಕೆ ಈ ನಾಟಿ ಕೋಳಿಗಳಿಗೆ ಭಾರಿ ಬೇಡಿಕೆ ಬಂದಿತ್ತು. ಗ್ರಾಮಸ್ಥರೇ ಕೋಳಿಗಳನ್ನು ಖರೀದಿ ಮಾಡುವುದಾಗಿ ಹೇಳಿದ್ದರು. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಚಿರತೆ ದಾಳಿಯಿಂದ ಕೋಳಿಗಳು ಸತ್ತು ಹೋಗಿವೆ. ಅಂದಹಾಗೆ ಚಿರತೆ ದಾಳಿ ಮಾಡಿ ತಿಂದು ಹಾಕಿರುವ ಎಲ್ಲ ಕೋಳಿಗಳು ಮೊಟ್ಟೆ ಇಡುವ ಕೋಳಿಗಳು ಆಗಿದ್ದು, ಅವುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡಿದ್ದರೂ ಕನಿಷ್ಠ 1 ಸಾವಿರ ರೂ. ಬೆಲೆ ಬಾಳುತ್ತಿದ್ದವು. ಒಟ್ಟು 200 ಕೋಳಿಗಳ ನಷ್ಟದಿಂದ ಅಂದಾಜು 2 ಲಕ್ಷ ರೂ.ಗಿಂತ ಅಧಿಕ ಪ್ರಮಾಣದ ಹಾನಿ ಉಂಟಾಗಿದೆ. ಚಿರತೆ ಸುತ್ತಮುತ್ತ ಸಂಚಾರ ಮಾಡುತ್ತಿದ್ದು, ಕೂಡಲೇ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಇನ್ನು ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೋಳಿ ಫಾರಂ ಮಾಡಿದ್ದ ಹೈನುಗಾರಿಕೆ ದಂಪತಿ 200 ನಾಟಿ ಕೋಳಿಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದೆ. ಆಡು, ಕುರಿ ಅಥವಾ ಹಸುಗಳು ಕಾಡು ಪ್ರಾಣಿಗಳ ದಾಳಿಯಿಂದ ಸತ್ತರೆ ಅರಣ್ಯ ಇಲಾಖೆಯಿಂದ ಪರಿಹಾರವನ್ನು ನೀಡಲಾಗುತ್ತದೆ. ಆದರೆ, ಕೋಳಿಗಳ ಮೇಲೆ ದಾಳಿ ಮಾಡಿ ಕೊಂದರೆ ಪರಿಹಾರ ಕೊಡಲು ಕಾನೂನಿನಡಿ ಯಾವುದೇ ಅವಕಾಶ ಇಲ್ಲ ಎಂದು ಪಶು ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ, ಸರ್ಕಾರದಿಂದ ಹೇಗಾದರೂ ಮಾಡಿ ಪರಿಹಾರ ಕೊಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.