Rupert Murdoch: ಇದೇ ಲಾಸ್ಟು, ಇನ್ನು ಮದುವೆ ಆಗೋದಿಲ್ಲ ಎಂದು 92ನೇ ವಯಸ್ಸಿನಲ್ಲಿ 5ನೇ ಮದುವೆ ಆಗ್ತಿದ್ದಾರೆ ಮುರ್ಡೋಕ್
Rupert Murdoch: ಜಗತ್ತಿನ ಮಾಧ್ಯಮ ಲೋಕದ ದೊರೆ ರುಪರ್ಟ್ ಮುರ್ಡೋಕ್(Rupert Murdoch) ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ. ಮಾಡೆಲ್ ಹಾಗೂ ನಟಿ ಜೆರ್ರಿ ಹಾಲ್‌ರಿಂದ ವಿಚ್ಛೇದನ ಪಡಡೆದು ಒಂದು ವರ್ಷವಾಗುವ ಮುನ್ನವೇ ತಮ್ಮ ಐದನೇ ಮದುವೆಯ ನಿರ್ಧಾರವನ್ನು ಬಹಿರಂಗಗೊಳಿಸಿದ್ದಾರೆ. ಅಲ್ಲದೆ ಇದುವೇ ನನ್ನ ಕೊನೆಯ ಮದುವೆ ಇನ್ನು ಆಗುವುದಿಲ್ಲ ಎಂದೂ ಹೇಳಿದ್ದಾರೆ.
ಹೌದು, ಶತಕೋಟಿ ಉದ್ಯಮಿ, ಮಾಧ್ಯಮ ದೊರೆ 92 ವರ್ಷದ ರೂಪರ್ಟ್ ಮುರ್ಡೋಕ್ (Rupert Murdoch) ಐದನೇ ಮದುವೆಯಾಗಲು ತಯಾರಿ ನಡೆಸಿದ್ದಾರೆ. ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್ (Jerry Hall) ಅವರಿಗೆ ವಿಚ್ಛೇದನ ನೀಡಿದ 8 ತಿಂಗಳ ಬಳಿಕ 66 ವರ್ಷದ ಆನ್ ಲೆಸ್ಲಿ ಸ್ಮಿತ್ (Ann Lesley Smith)ಅವರೊಂದಿಗೆ ನಿಶ್ಚಿತಾರ್ಥ ಮಾಡಿದ್ದಾರೆ. ನ್ಯೂಯಾರ್ಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರೀತಿಯಲ್ಲಿ ಬೀಳಲು ತುಂಬಾ ಹೆದರುತ್ತಿದ್ದೆ. ಆದರೆ ಇದು ನನ್ನ ಕೊನೆಯದು ಎಂದು ನನಗೆ ತಿಳಿದಿತ್ತು. ಈಗ ನಾನು ಸಂತೋಷವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಆನ್ ಲೆಸ್ಲಿ ಸ್ಮಿತ್ ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸ್ ಚಾಪ್ಲೇನ್ (ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಭಾವನಾತ್ಮಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ಒದಗಿಸುವ ವ್ಯಕ್ತಿಗಳು) ಆಗಿ ಕೆಲಸ ಮಾಡುತ್ತಿದ್ದರು ಎಂದು ವೆರೈಟಿ ಮ್ಯಾಗಝೀನ್ ವರದಿ ಮಾಡಿದೆ. ಮುರ್ಡೋಕ್ ಅವರ ಮುಂದಿನ ಪತ್ನಿಯಾಗಲಿರುವ ಆನ್ ಲೆಸ್ಲಿ ಸ್ಮಿತ್, ಇದಕ್ಕೂ ಮುನ್ನ ರೇಡಿಯೋ ಹಾಗೂ ಟಿವಿಯ ಅಧಿಕಾರಿಯಾಗಿದ್ದ ಚೆಸ್ಟರ್ ಸ್ಮಿತ್‌ರನ್ನು ಮದುವೆಯಾಗಿದ್ದರು. ಚೆಸ್ಟರ್ ಸ್ಮಿತ್ 2008ರಲ್ಲಿ ನಿಧನರಾದ ಬಳಿಕ ಲೆಸ್ಲಿ ಸ್ಮಿತ್ ಏಕಾಂಗಿಯಾಗಿ ಬದುಕಿದ್ದರು. ಆಡಮ್ಸ್ ವರದಿಗಳ ಪ್ರಕಾರ, ಇಬ್ಬರೂ ಮಾಧ್ಯಮ ವ್ಯವಹಾರದ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಅದರೊಂದಿಗೆ ಲೆಸ್ಲಿ ಸ್ಮಿತ್ ಹಿಂದೊಮ್ಮೆ ಅತೀದೊಡ್ಡ ವೈನ್‌ಯಾರ್ಡ್‌ನ ಮಾಲೀಕರಾಗಿದ್ದರು. ವ್ಯವಹಾರದ ಜ್ಞಾನ ಇಬ್ಬರನ್ನು ಬೆಸೆಯಲು ಪ್ರಮುಖ ಕಾರಣವಾಗಿದೆಯಂತೆ.
ಈ ಜೋಡಿ ಬೇಸಿಗೆಯಲ್ಲಿ ಮದುವೆಯಾಗಲು ನಿರ್ಧಾರ ಮಾಡಿದೆ. ನಾವಿಬ್ಬರೂ ನಮ್ಮ ಜೀವನದ ದ್ವಿತೀಯಾರ್ಧವನ್ನು ಒಟ್ಟಿಗೆ ಕಳೆಯಲು ಎದುರು ನೋಡುತ್ತಿದ್ದೇವೆ ಎಂದು ಮುರ್ಡೋಕ್ ಹೇಳಿದ್ದಾರೆ. ಅಂದಹಾಗೆ ಫಾಕ್ಸ್ ನ್ಯೂಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಟ್ಯಾಬ್ಲಾಯ್ಡ್ ಪತ್ರಿಕೆ ದಿ ಸನ್ ಮಾಲೀಕರಾಗಿರುವ ಮುರ್ಡೋಕ್ ಮೊದಲ ಮೂರು ಪತ್ನಿಯರಿಂದ 6 ಮಕ್ಕಳನ್ನು ಪಡೆದಿದ್ದಾರೆ.
ರುಪೋರ್ಟ್ ಮುರ್ಡೋಕ್ ಫಾಕ್ಸ್ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಇದು ಫಾಕ್ಸ್ ಬ್ರಾಡ್‌ಕಾಸ್ಟಿಂಗ್, ಫಾಕ್ಸ್ ಸ್ಪೋರ್ಟ್ಸ್, ಫಾಕ್ಸ್ ಬ್ಯುಸಿನೆಸ್ ಹಾಗೂ ಫಾಕ್ಸ್ ನ್ಯೂಸ್‌ನ ಮಾಲೀಕತ್ವವನ್ನು ಹೊಂದಿದೆ. ನ್ಯೂಸ್ ಕಾರ್ಪೋರೇಷನ್‌ನ ಮಾಲೀಕರೂ ಆಗಿರುವ ಮುರ್ಡೋಕ್, ನ್ಯೂಯಾರ್ಕ್ ಪೋಸ್ಟ್, ವಾಲ್ ಸ್ಟ್ರೀಟ್ ಜರ್ಲ್, ದಿ ಸನ್ ಹಾಗೂ ಪ್ರಕಾಶಕರಾದ ಹಾರ್ಪರ್ ಕಾಲಿನ್ಸ್‌ನ ಮಾಲೀಕತ್ವವನ್ನೂ ಹೊಂದಿದ್ದಾರೆ.