Measles: ರಾಜ್ಯದಲ್ಲಿ ದಡಾರ ರೋಗದ ಸಂಖ್ಯೆ ಹೆಚ್ಚಳ : ಆರೋಗ್ಯ ಇಲಾಖೆ ವರದಿ ಹೇಳಿದ್ದೇನು?

Measles: ದೇಶದ ಹೆಚ್ಚಿನ ಕಡೆಗಳಲ್ಲಿ ಒಂದೆಡೆ ದೀರ್ಘಕಾಲಿಕ ಕೆಮ್ಮು ಮತ್ತು ಜ್ವರದ H3N2 ವೈರಸ್ ಲಕ್ಷಣಗಳು ಗೋಚರಿಸುತ್ತಿದ್ದರೆ ಮತ್ತೆ ಕೆಲವೆಡೆ ಕೊರೋನಾ (Covid)ಲಕ್ಷಣಗಳು ಕಂಡುಬರುತ್ತಿರುವ ನಡುವೆ ಇದೀಗ ಜನರಲ್ಲಿ ದಡಾರ (Measles) ಲಕ್ಷಣಗಳು ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಗಿದೆ.

 

ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ಅಂಶವೊಂದು ಹೊರಬಿದ್ದಿದೆ. ಇತ್ತೀಚಿಗೆ ವಿಜಯಪುರ (Vijaypura) ಜಿಲ್ಲೆಯ ಆಲಮೇಲ ತಾಲೂಕು ಕೇಂದ್ರದಲ್ಲಿ ನೂರಾರು ಮಕ್ಕಳಲ್ಲಿ ಏಕಕಾಲಕ್ಕೆ ದಡಾರ ರೋಗ ಕಂಡುಬಂದಿದ್ದು, ಜನರಲ್ಲಿ ಭಯ ಆತಂಕ ಹೆಚ್ಚಾಗಲು ಕಾರಣವಾಗಿತ್ತು. ರಾಜ್ಯ ಆರೋಗ್ಯ ಇಲಾಖೆ (Karnataka Health Department) ಅಂಕಿ ಅಂಶಗಳ ಪ್ರಕಾರ 2021ರಲ್ಲಿ 10 ಲಕ್ಷ ಜನರಲ್ಲಿ ಶೇ 4.8 ರಷ್ಟು ಜನರಲ್ಲಿ ದಡಾರ ರೋಗ ಕಂಡುಬಂದಿತ್ತು. 2022ರಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿ 10 ಲಕ್ಷ ಜನರಲ್ಲಿ ಶೇ 8.52ರಷ್ಟು ಜನರಿಗೆ ದಡಾರ ರೋಗ ಕಂಡುಬಂದಿದ್ದು, ಈ ಹಿನ್ನೆಲೆ ಕರ್ನಾಟಕದಲ್ಲಿ ರೋಗ ಏರಿಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ 2023ರ ಅಂತ್ಯದ ವೇಳೆಗೆ ದಡಾರ ಮುಕ್ತ ರಾಜ್ಯವನ್ನಾಗಿ ಮಾಡಲು ಕರ್ನಾಟಕ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ದಡಾರ ಚಿಕ್ಕ ಮಕ್ಕಳಿಗೆ ತಗುಲುವ ತುಂಬಾ ಅಪಾಯಕಾರಿ ರೋಗವಾಗಿದ್ದು, ಈ ರೋಗ ತಗುಲಿದ ಬಳಿಕ, 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅವುಗಳಲ್ಲಿ 104 ಡಿಗ್ರಿಯವರೆಗೆ ಅಧಿಕ ಜ್ವರ, ಕೆಮ್ಮು, ಶೀತ, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳು ಪ್ರಮುಖವಾಗಿ ಕಂಡುಬರುತ್ತವೆ. ದಡಾರದ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ರೋಗಕ್ಕೆ ತುತ್ತಾದ ಮಗುವಿನಲ್ಲಿ 2ರಿಂದ 3 ದಿನಗಳ ನಂತರ ಬಾಯಿಯೊಳಗೆ ಸಣ್ಣ ಬಿಳಿ ಚುಕ್ಕೆಗಳು ಕಂಡುಬರುತ್ತದೆ. ಕೆಂಪು-ಫ್ಲಾಟ್ ರಾಶ್ 3ರಿಂದ 5 ದಿನಗಳಲ್ಲಿ ದೇಹದಲ್ಲಿ ಕಾಣಿಸಿಕೊಂಡು, ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗದ ಮೇಲೆ ದಡಾರದ ಗುಳ್ಳೆಗಳು ಉಂಟಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿ ಅಂಶಗಳ ಪ್ರಕಾರ 2022 ನವೆಂಬರ್ ವೇಳೆಗೆ ಭಾರದಲ್ಲಿ 12,773 ದಡಾರ ಪ್ರಕರಣಗಳು ಪತ್ತೆಯಾಗಿದ್ದವು ಎಂದು ಹೇಳಲಾಗಿತ್ತು. ಆ ಬಳಿಕ 2022ರಲ್ಲಿ ಪ್ರಕರಣಗಳು ಏರಿಕೆಯಾಗಿ 40 ಮಿಲಿಯನ್ ದಡಾರ ರೋಗಕ್ಕೆ ಈಡಾಗುವ ಸಾಧ್ಯತೆ ಬಗ್ಗೆ ಹೇಳಲಾಗಿತ್ತು. 2021ರಲ್ಲಿ ದೇಶದ 10 ಲಕ್ಷ ಜನರಲ್ಲಿ ಶೇ 4.6 ರಷ್ಟು ಜನರಲ್ಲಿ ದಡಾರ ರೋಗ ಬಾಧಿಸಿದ್ದು, ಇದು 2022ರಲ್ಲಿ ಏರಿಕೆಯಾಗಿ, ಶೇ 22.36 ರಷ್ಟು ಜನರಿಗೆ ರೋಗ ಕಂಡುಬಂದಿದೆ.

ಈ ತಿಂಗಳ ಆರಂಭದಲ್ಲಿ ಸಭೆ ನಡೆಸಿದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರಾಜ್ಯದಲ್ಲಿ ದಡಾರ ಮತ್ತು ರುಬೆಲ್ಲಾ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಎಲ್ಲಾ ಇಲಾಖೆಗಳು, ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಲು ಸೂಚಿಸಿದ್ದಾರೆ. ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಯ ಕುರಿತಂತೆ ಈ ರೋಗವನ್ನು ಏಕಾಏಕಿ ತಡೆಗಟ್ಟಲು 15 ವರ್ಷದೊಳಗಿನ ಮಕ್ಕಳಿಗೆ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ನೀಡುವ ಕುರಿತು ಸಮಾಲೋಚನೆ ನಡೆಸಲಾಗಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿದ್ದು, 3,075 ದಡಾರ ಪ್ರಕರಣಗಳು ಪತ್ತೆಯಾಗಿದ್ದು, 13 ಜನ ರೋಗಕ್ಕೆ ಬಲಿಯಾಗಿದ್ದಾರೆ. ಜಾರಖಂಡ ಎರಡನೇ ಸ್ಥಾನದಲ್ಲಿದ್ದು 2,683 ಜನರಲ್ಲಿ ರೋಗ ಕಂಡುಬಂದಿದ್ದು, 8 ಜನ ಮೃತಪಟ್ಟಿದ್ದಾರೆ. ಈ ಎರಡು ರಾಜ್ಯಗಳು ಸೇರಿದಂತೆ ದೇಶದ (ಮಹಾರಾಷ್ಟ್ರ, ಜಾರಖಂಡ, ಬಿಹಾರ, ಗುಜಾರಾತ, ಹರಿಯಾಣ ಮತ್ತು ಕೇರಳ) 6 ರಾಜ್ಯಗಳಲ್ಲಿ ದಡಾರ ರೋಗಕ್ಕೆ ಬಲಿಯಾಗಿದ್ದಾರೆ.

ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ ಅಂಡ್​ ಪ್ರಿವೆನ್ಷನ್​ (Centers for Disease Control and Prevention CDC) ವರದಿ ಅನುಸಾರ, ಜಗತ್ತಿನ 10 ದೇಶಗಳಲ್ಲಿ ದಡಾರ ರೋಗ ಕಾಣಿಸಿಕೊಂಡಿದ್ದು, ಭಾರತ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಕಳೆದ ವರ್ಷ ಡಿಸೆಂಬರ್​ 17 ರಂದು ನಡೆದ ಸಂಸತ್​ ಅಧಿವೇಶನಕ್ಕೆ ನೀಡಿದ ಮಾಹಿತಿ ಅನುಸಾರ, ದೇಶದಲ್ಲಿ 10,416 ದಡಾರ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 40 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ :Covid-19 Guidelines: ಹೆಚ್ಚುತ್ತಿರುವ ಕೊರೊನಾ ಪ್ರಕರಣ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Leave A Reply

Your email address will not be published.