Uri Gowda – Nanje Gowda: ಟಿಪ್ಪುವನ್ನು ಕೊಂದವರು ಎನ್ನಲಾದ ಉರಿಗೌಡ-ನಂಜೇಗೌಡರ ಬಗ್ಗೆ ಸಿಕ್ತು ಪುಸ್ತಕದ ದಾಖಲೆ! ಅಷ್ಟಕ್ಕೂ ಆ ಪುಸ್ತಕದಲ್ಲೇನಿದೆ ಗೊತ್ತಾ?
Uri Gowda – Nanje Gowda : ಕರ್ನಾಟಕದಲ್ಲಿ ಚುನಾವಣೆಯ ಪ್ರಚಾರಗಳು ಆರಂಭಗೊಂಡಾಗಿನಿಂದ ಟಿಪ್ಪು(Tippu) ಹಾಗೂ ಸಾವರ್ಕರ್(Savarkar) ಹೆಸರು ವಿಪರೀತವಾಗಿ ಕೇಳಿಬರುತ್ತಿತ್ತು. ಆದರೀಗ ಈ ಎರಡು ಹೆಸರುಗಳೊಂದಿಗೆ ಮಂಡ್ಯದ ಉರಿಗೌಡ ಮತ್ತು ನಂಜೇಗೌಡರ (Uri Gowda – Nanje Gowda) ಹೆಸರುಗಳು ಸೇರಿಕೊಂಡು ಅನಗತ್ಯ ವಿಚಾರಗಳ ಚರ್ಚೆಗಳು ವಿಕೋಪಕ್ಕೇರಿವೆ. ಒಂದೆಡೆ ಬಿಜೆಪಿ ನಾಯಕರು ಇವರು ಟಿಪ್ಪುವನ್ನು ಕೊಂದ ವೀರ ಕನ್ನಡಿಗರೆಂದು ಬಿಂಬಿಸುತ್ತಿದ್ದರೆ, ಅತ್ತ ಇತಿಹಾಸ ತಜ್ಞರು, ಇತರ ರಾಜಕೀಯ ನಾಯಕರು ಇವರು ಕಾಲ್ಪನಿಕ ವ್ಯಕ್ತಿಗಳೆಂದು ಹೇಳುತ್ತಿದ್ದಾರೆ. ಈ ಜಂಜಾಟಗಳ ನಡುವೆಯೇ ಉರಿ ಗೌಡ ಹಾಗೂ ನಂಜೇಗೌಡರ ಉಲ್ಲೇಖವಿರುವ ಪುಸ್ತಕವೊಂದು ಮುನ್ನಲೆಗೆ ಬಂದಿದೆ.
ಹೌದು, ಪ್ರೊ ಜಯಪ್ರಕಾಶ್ ಗೌಡರ ಪರಿಶ್ಕೃತ ಆವೃತ್ತಿಯ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ-ನಂಜೇಗೌಡರ ಹೆಸರು ಪ್ರಸ್ಥಾಪ ಮಾಡಲಾಗಿದೆ. ಡಾ.ದೇ ಜವರೇಗೌಡರ ಸಂಪಾದಕತ್ವದಲ್ಲಿ 2006ರಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ. 500 ಪುಟಗಳ ಗ್ರಂಥವಾಗಿರುವ ಇದು ಮಂಡ್ಯದ ಇತಿಹಾಸವನ್ನ ಸಾರುವ ಪುಸ್ತಕವಾಗಿದೆ.
1989 ಕ್ಕೆ ಮಂಡ್ಯ ಜಿಲ್ಲೆ ರಚನೆಯಾಗಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ನಡೆದ ಮಹೋತ್ಸವ ಸಂದರ್ಭದಲ್ಲಿ ಈ ಪುಸ್ತಕ ಮಂಡನೆಯಾಗಿತ್ತು. ಬಳಿಕ 1994 ರಲ್ಲಿ ನಡೆದ 63 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಪುಸ್ತಕವನ್ನು ಸುವರ್ಣ ಮಂಡ್ಯ ಪುಸ್ತಕವನ್ನಾಗಿಸಿ ಬಿಡುಗಡೆ ಮಾಡಲಾಗಿತ್ತು. ಆದರೆ ಪುಸ್ತಕದಲ್ಲಿ ಟಿಪ್ಪುವನ್ನ ಕೊಂದಿದ್ದು ಉರಿಗೌಡ ನಂಜೇಗೌಡ ಎಂಬ ವಿಚಾರ ಪ್ರಸ್ತಾಪವಾಗಿಲ್ಲ. ಟಿಪ್ಪು ವಿರುದ್ದ ಉರಿಗೌಡ ಮತ್ತು ನಂಜೇಗೌಡ ಸೆಟೆದು ನಿಂತರು ಎಂದಷ್ಟೇ ಹೇಳಲಾಗಿದೆ.
ಅಂದಹಾಗೆ ಕಳೆದ ಭಾನುವಾರ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ ಮೋದಿ 1.8 ಕಿ.ಮೀ ರೋಡ್ ಶೋ ಆಯೋಜಿಸಲಾಗಿತ್ತು. ಇಲ್ಲಿ ಮಾರ್ಗದುದ್ದಕ್ಕೂ 4 ಮಹಾದ್ವಾರ ಅಳವಡಿಸಲಾಗಿತ್ತು. ರೋಡ್ ಶೋ ಆರಂಭವಾಗುವ ಪ್ರವಾಸಿ ಮಂದಿರದ ಬಳಿ ಸರ್. ಎಂ.ವಿಶ್ವೇಶ್ವರಯ್ಯ ಮಹಾದ್ವಾರ, ಜೆಸಿ ವೃತ್ತದಲ್ಲಿ ಕೆಂಪೇಗೌಡ, ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ ಹಾಕಲಾಗಿತ್ತು. ಈ ಮೂರು ಮಹಾದ್ವಾರಗಳ ಬಗ್ಗೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಸಮಸ್ಯೆಯಾಗಿದ್ದೇ 4ನೇ ಮಹಾದ್ವಾರ. ಫ್ಯಾಕ್ಟರಿ ಸರ್ಕಲ್ನಲ್ಲಿ ಹಾಕಿದ್ದ ‘ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರ’ಕ್ಕೆ ವ್ಯಕ್ತವಾದ ಪರ, ವಿರೋಧ ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಟಿಪ್ಪು ಕೊಂದಿದ್ದು ಒಕ್ಕಲಿಗರು ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಹೀಗಾಗಿ ಈ ಇಬ್ಬರು ಗೌಡರ ಕುರಿತು ರಾಜ್ಯಾದ್ಯಂತ ಗೊಂದಲ ಸೃಷ್ಟಿಯಾಗಿದೆ. ಇವರು ಐತಿಹಾಸಿಕ ವ್ಯಕ್ತಿಗಳೋ ಅಥವಾ ಕಾಲ್ಪನಿಕ ವ್ಯಕ್ತಿಗಳೋ ಎಂಬುದು ಜನಗಳಿಗೆ ತಿಳಿಯಬೇಕಿದೆ. ಇದರ ನಡುವೆಯೇ ಈ ಇಬ್ಬರು ಹೊಸ ಗೌಡರ ಕುರಿತು ಚಲನಚಿತ್ರಕೂಡ ನಿರ್ಮಣ ಆಗ್ತಿದೆಯಂತೆ. ಇದರ ಟೈಟಲ್ ಕೂಡ ಫಿಕ್ಸ್ ಆಗಿದೆಯಂತೆ.
ಅಲ್ಲದೆ ಸದ್ಯ ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಎನ್ನಲಾದ ಫೋಟೋ ಒಂದು ಭಾರೀ ವೈರಲ್ ಆಗಲಾರಂಭಿಸಿವೆ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ನೆಟ್ಟಿಗರು ಈ ಫೋಟೋಗಳ ಅಸಲಿ ಕಥೆ ಬಯಲಿಗೆಳೆದಿದ್ದಾರೆ. ಫೋಟೋದಲ್ಲಿರುವುದು ತಮಿಳು ನೆಲದ ವೀರರಾದ ಮರುದು ಪಾಂಡ್ಯರ ಚಿತ್ರಗಳು. ಮರುದು ಪಾಂಡ್ಯರು (ಪೆರಿಯ ಮರುದು ಮತ್ತು ಚಿನ್ನ ಮರುದು) 18ನೇ ಶತಮಾನದ ಅಂತ್ಯದಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯದಲ್ಲಿ ಪ್ರಸಿದ್ಧರಾಗಿದ್ದರು. ಈ ಇಬ್ಬರು ಸಹೋದರರು ಆಂಗ್ಲರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ಮರುತು ಪಾಂಡ್ಯರದ್ದು ದಕ್ಷಿಣ ಭಾರತದ ವಿಮೋಚನಾ ಯುದ್ಧದ ಮೊದಲ ಹೋರಾಟವಾಗಿದೆ. ಆದರೆ ಇವರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.