PPF Account : ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವ ರೀತಿ ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ!
Public Provident Fund : ತೆರಿಗೆ ಉಳಿತಾಯಕ್ಕೆ ಉತ್ತಮ ಆಯ್ಕೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ( Public Provident Fund- PPF ) ಕೂಡ ಒಂದು. ಭಾರತದಲ್ಲಿ PPF ಯೋಜನೆಯನ್ನು 1968ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ರಾಷ್ಟ್ರೀಯ ಉಳಿತಾಯ ಸಂಸ್ಥೆ (National Savings Organization) ಈ ಯೋಜನೆ ಘೋಷಿಸಿತು. ಇದರ ಮುಖ್ಯ ಉದ್ದೇಶ ಸಣ್ಣ ಉಳಿತಾಯವನ್ನು (Small Saving) ಲಾಭದಾಯಕವಾಗಿ ಪರಿವರ್ತಿಸುವುದಾಗಿದೆ. ಸದ್ಯ ಸಾರ್ವಜನಿಕ ಭವಿಷ್ಯ ನಿಧಿಯು (Public Provident Fund) ಸರ್ಕಾರ ನಡೆಸುತ್ತಿರುವ ಅತ್ಯಂತ ಜನಪ್ರಿಯ ಯೋಜನೆ ಆಗಿದೆ.
ದೀರ್ಘಾವಧಿಗೆ ಹಣವನ್ನು ಠೇವಣಿ ಇಡುವ ಮೂಲಕ ನಿವೃತ್ತಿಯ ನಂತರದ ಜೀವನಕ್ಕಾಗಿ ಆರ್ಥಿಕ ದೃಢತೆಯನ್ನು ಹೊಂದುವುದಕ್ಕಿರುವ ಹಣಕಾಸು ಯೋಜನೆಯೇ ಸಾರ್ವಜನಿಕ ಭವಿಷ್ಯ ನಿಧಿ (PPF).
ನೀವು ಪಿಪಿಎಫ್ ನಲ್ಲಿ (PPF) ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 1 ಕೋಟಿ ರೂ. ರಿಟರ್ನ್ (Return) ಗಳಿಸಲು ಕೂಡ ಸಾಧ್ಯವಿದೆ. ಹೇಗೆಂದು ನೋಡೋಣ ಬನ್ನಿ.
ಮೊದಲು ನೀವು ಯಾವುದೇ ಬ್ಯಾಂಕ್ ಅಥವಾ ಹತ್ತಿರದ ಅಂಚೆ ಕಚೇರಿಯಲ್ಲಿ 100 ರೂ. ಠೇವಣಿ ಇಡುವ ಮೂಲಕ ಪಿಪಿಎಫ್ ಖಾತೆ ತೆರೆಯಬಹುದು. ಈ ಯೋಜನೆಯಡಿ ವಾರ್ಷಿಕ ಕನಿಷ್ಠ 500 ರೂ. ಹೂಡಿಕೆ ಮಾಡಲೇಬೇಕು. ಪಿಪಿಎಫ್ ಯೋಜನೆಯಡಿ ತೆರೆದ ಖಾತೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ವಾರ್ಷಿಕ 1.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಲೂ ಅವಕಾಶವಿದೆ. 15 ವರ್ಷಗಳ ಲಾಕ್ ಇನ್ ಅವಧಿ ಇರುವ ಈ ಖಾತೆಗೆ ವಾರ್ಷಿಕ ಒಂದೇ ಬಾರಿ 1.5 ಲಕ್ಷ ರೂ. ಅಥವಾ 12 ಕಂತುಗಳಲ್ಲಿ ಪಾವತಿ ಮಾಡಲು ಅವಕಾಶವಿದೆ.
ಸದ್ಯ ಪಿಪಿಎಫ್ ಖಾತೆಯಡಿ ಠೇವಣಿ ಇಟ್ಟ ಮೊತ್ತಕ್ಕೆ ಪ್ರಸ್ತುತ ವಾರ್ಷಿಕ ಶೇ 7.1ರ ಬಡ್ಡಿ ದರವಿದೆ. ಪ್ರತಿ ವರ್ಷ ಶಿಸ್ತಿನಿಂದ ಹಣ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಅವಧಿಗಾಗುವಾಗ 1 ಕೋಟಿ ರೂ. ವರೆಗೆ ಗಳಿಸಲೂ ಈ ಖಾತೆಯಲ್ಲಿ ಅವಕಾಶವಿದೆ.
ಇನ್ನು 15 ವರ್ಷಗಳ ಲಾಕ್ ಇನ್ ಅವಧಿ ಇದ್ದರೂ ಅದರ ನಂತರ ಖಾತೆಯನ್ನು ಮುಂದುವರಿಸಲು ಅವಕಾಶವಿದೆ. ಅಂದರೆ ಪಿಪಿಎಫ್ ಖಾತೆದಾರರು 15 ವರ್ಷ ಕಳೆದ ಮೇಲೂ ಹೂಡಿಕೆ ಮುಂದುವರಿಸುತ್ತಾ ಹೋಗಬಹುದಾಗಿದೆ. ಮೆಚ್ಯೂರಿಟಿ ವೇಳೆ ದೊರೆತ ಮೊತ್ತ ಹಾಗೂ ಅದಕ್ಕೆ ನಂತರದ ಹೂಡಿಕೆಯನ್ನು ಸೇರಿಸಿ ಠೇವಣಿ ಇಡುತ್ತಾ ಹೋಗಬೇಕು. ಆಗ ಹೆಚ್ಚು ಬಡ್ಡಿ ಸಿಗುತ್ತದೆ.
ಲೆಕ್ಕಾಚಾರ ಪ್ರಕಾರ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ.ವರೆಗೆ ರಿಟರ್ನ್ಸ್ ಪಡೆಯಲು ಅವಕಾಶವಿದೆ. ಉದಾಹರಣೆಗೆ; 30ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ಪಿಪಿಎಫ್ ಖಾತೆ ತೆರೆಯುತ್ತಾರೆ ಎಂದಿಟ್ಟುಕೊಳ್ಳೋಣ. 15 ವರ್ಷಗಳ ಲಾಕ್ ಇನ್ ಅವಧಿಯ ನಂತರ ಮತ್ತೆ ಅದನ್ನು 15 ವರ್ಷಗಳ ವರೆಗೆ ವಿಸ್ತರಣೆ ಮಾಡಬೇಕು. ಆಗ ಒಟ್ಟು 30 ವರ್ಷ ಹೂಡಿಕೆ ಮಾಡಿದಂತಾಗುತ್ತದೆ. ವರ್ಷಕ್ಕೆ 1.5 ಲಕ್ಷ ರೂ.ನಂತೆ ಹೂಡಿಕೆ ಮಾಡಿದರೆ 30 ವರ್ಷಗಳ ನಂತರ ಮೆಚ್ಯೂರಿಟಿ ಮೊತ್ತ (ವಾರ್ಷಿಕ ಬಡ್ಡಿ ಶೇ 7.10ರಷ್ಟಿದ್ದರೆ) 1.54 ಕೋಟಿ ರೂ. ಆಗುತ್ತದೆ.
ಅದಲ್ಲದೆ ನಿಮ್ಮ ಹೂಡಿಕೆ (Investment) ಮೇಲೆ ಉತ್ತಮ ರಿಟರ್ನ್ಸ್ ಗಳಿಸಲು ಪ್ರತಿ ತಿಂಗಳು 1ರಿಂದ 5 ದಿನಾಂಕದ ನಡುವೆ ಹಣವನ್ನು ಠೇವಣಿಯಿಡಬೇಕು. ಯಾಕೆಂದರೆ ಬಡ್ಡಿಯನ್ನು ಮಾಸಿಕವಾಗಿ ಲೆಕ್ಕ ಹಾಕುವ ಕಾರಣ ಉತ್ತಮ ರಿಟರ್ನ್ಸ್ (Returns) ಸಿಗುವ ಸಾಧ್ಯತೆಯಿರುತ್ತದೆ.