K. Annamalai: ಬಿಜೆಪಿ ಆ ಒಂದು ಕೆಲಸ ಮಾಡಿದರೆ ನಾನು ಖಂಡಿತಾ ಪಕ್ಷ ತೊರೆಯುತ್ತೇನೆ: ಅಣ್ಣಾಮಲೈ
K.Annamalai : IPS ಹುದ್ದೆಗೆ ರಾಜೀನಾಮೆ ನೀಡಿ, ತಮ್ಮ ತವರು ರಾಜ್ಯವಾದ ತಮಿಳುನಾಡಿನಲ್ಲಿ ಬಿಜೆಪಿ(BJP) ಸೇರ್ಪಡೆಯಾಗಿ, ಸದ್ಯ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ(K.Annamalai) ಅವರು ಪಕ್ಷ ತೊರೆಯುವ ಮಾತನಾಡಿದ್ದಾರೆ. ಆ ಒಂದು ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ನೀಡುವ ಸುಳಿವನ್ನು ನೀಡಿದ್ದಾರೆ.
ಹೌದು, ಒಂದೊಮ್ಮೆ ಭಾರತೀಯ ಜನತಾ ಪಕ್ಷವು ಎಐಎಡಿಎಂಕೆ(AIADMK) ಜತೆ ಮೈತ್ರಿ ಮಾಡಿಕೊಂಡರೆ ನಾನು ಪಕ್ಷ ತೊರೆಯುತ್ತೇನೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಈ ಕುರಿತು ಸ್ಪಷ್ಟೀಕರಣ ನೀಡಿದ ಅವರು ಮುಂಬರುವ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ನಾನು ಪಕ್ಷದಲ್ಲಿರುವುದಿಲ್ಲ ಎಂದು ಪಕ್ಷ ಕರೆದಿದ್ದ ಸಭೆಯಲ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿಯ ಐಟಿ ವಿಭಾಗದ ಹಲವು ಪದಾಧಿಕಾರಿಗಳು ಬಿಜೆಪಿಗೆ ರಾಜೀನಾಮೆ ನೀಡಿ ಎಐಎಡಿಎಂಕೆ ಸೇರಿದ್ದರು. ಈ ವಿಷಯದಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ವಾಕ್ಸಮರ ನಡೆದಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಲ್ಲದೆ ಅಣ್ಣಾಮಲೈ ಅವರ ಈ ಅಭಿಪ್ರಾಯಕ್ಕೆ ಸಭೆಯಲ್ಲಿ ಪರ-ವಿರೋಧ ಎರಡೂ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿದ ಅಣ್ಣಾಮಲೈ ಅವರು ‘ನಾವು ರಾಜ್ಯದಲ್ಲಿ ನೆಲೆ ಕಾಣಬೇಕಾದರೆ ಏಕಾಂಗಿಯಾಗಿ ಕಣಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ನಾನು ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿಯೇ ಹೊರತೂ, ಎಐಎಡಿಎಂಕೆಯ (AIADMK) ಕಿರಿಯ ಮಿತ್ರನಾಗಿ ಇರಲು ಅಲ್ಲ. ದ್ರಾವಿಡ ಪಕ್ಷಗಳ ನಡುವೆ ಜನರಿಗೆ ಪ್ರಮುಖ ಆಯ್ಕೆ ನಾವಾಗಬೇಕೆ ವಿನಃ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು. ನಾವು ಏಕಾಂಗಿಯಾಗಿ ಸ್ಪರ್ಧಿಸಿದರೆ ಮಾತ್ರವೇ ಉತ್ತಮ ಆಡಳಿತ, ಭ್ರಷ್ಟಾಚಾರ, ಕುಟುಂಬ ರಾಜಕೀಯದ ವಿರುದ್ಧ ಸ್ಪಷ್ಟನಿಲುವುಗಳನ್ನು ಜನರ ಮುಂದಿಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಅಣ್ಣಾಮಲೈ ಅವರ ಭಾಷಣಕ್ಕೆ ಇತರ ಪದಾಧಿಕಾರಿಗಳ ಬೆಂಬಲ ಸಿಕ್ಕಿದ್ದು, ಬಿಜೆಪಿ ಸ್ವಂತವಾಗಿ ಚುನಾವಣೆ ಎದುರಿಸಬೇಕು ಎಂದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇದರೊಂದಿಗೆ ಮೈತ್ರಿಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆಗೆ ಸಮಯ ಕೇಳಿರುವುದಾಗಿ ಅಣ್ಣಾಮಲೈ ಅವರು ಸಭೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Siddaramaiah: ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸಬೇಕೆಂದು ಹೈಕಮಾಂಡ್ ಹೇಳಿದ್ಯಾಕೆ ಗೊತ್ತಾ?