Ram Gopal Varma: ವೈರಸ್ ಬಂದು ಗಂಡಸರೆಲ್ಲ ಸತ್ತರೆ ಹೆಂಗಸರಿಗೆಲ್ಲಾ ನಾನೊಬ್ಬನೇ ದಿಕ್ಕು: ವಿವಿ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕನ ಬೇಕಾಬಿಟ್ಟಿ ಮಾತು!

Director Ram Gopal Verma : ಸಿನಿರಂಗದಲ್ಲಿ ಖ್ಯಾತಿ ಗಳಿಸಿದ ಹೆಚ್ಚಿನ ನಟ, ನಟಿಯರಿಗೆ, ನಿರ್ದೇಶಕ, ನಿರ್ಮಾಪಕರಿಗೆ ಹಾಗೂ ಈ ವಿವಾದಗಳಿಗೆ ಏನೋ ಒಂದು ಅವಿನಾಭಾವ ನಂಟಿದ್ದಂತೆ ತೋರುತ್ತದೆ. ಯಾವಾಗ ಎಲ್ಲಿ, ಏನು ಮಾತನಾಡುತ್ತಿದ್ದೇವೆ ಎಂಬುದಾಗಿ ಸ್ವಲ್ಪವೂ ಪರಿಜ್ಞಾನವಿಲ್ಲದೆ ಬೇಕಾಬಿಟ್ಟಿ ಮಾತಾಡಿಬಿಡುತ್ತಾರೆ. ಇದು ರಾಜಕೀಯ ನಾಯಕರಿಗೆ(Political Leaders) ಮಾತ್ರ ಸೀಮಿತವಾಗಿತ್ತು. ಆದರೆ ಈ ಚಾಳಿ ಇತ್ತೀಚೆಗೆ ಸಿನಿರಂಗವನ್ನು ಪ್ರವೇಶಿಸಿದ್ದು ದುರಂತ! ಇಂತವರ ಸಾಲಲ್ಲಿ ಸಿನಿ, ರಾಜಕೀಯ, ಸಾಮಾಜಿಕ ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿ ಟೀಕೆಗಳನ್ನು ಮಾಡುತ್ತಾ, ವಿವಾದಗಗಳನ್ನು ಸೃಷ್ಟಿಸಿ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮಗೋಪಾಲ್ ವರ್ಮಾ (Director Ram Gopal Verma) ಒಬ್ಬರು. ಇದೀಗ ಈ ಪುಣ್ಯಾತ್ಮರೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಹೌದು, ಈ ರಾಮ್ ಗೋಪಾಲ್  ಅವರ ಕಮೆಂಟ್‌ಗಳು ಮತ್ತು ಟ್ವೀಟ್‌ಗಳು ಪೋಸ್ಟ್ ಆದ ಕೂಡಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅವರ ಇತ್ತೀಚಿನ ಕಮೆಂಟ್‌ಗಳು ಇನ್ನಷ್ಟು ವಿವಾದಾತ್ಮಕವಾಗಿವೆ. ರಾಮಗೋಪಾಲ್ ವರ್ಮಾ ಅವರು ಸಿವಿಲ್ ಇಂಜಿನಿಯರಿಂಗ್ ಪದವೀದರರು. ಅವರು ಇಂಜಿನಿಯರಿಂಗ್ ಓದಿ ಮುಗಿಸಿದ್ದು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ(Acharya Nagarjuna University). ಇತ್ತೀಚೆಗೆ ಈ ವಿವಿಯು ತಾನು ಆಯೋಜಿಸಿದ್ದ ಶೈಕ್ಷಣಿಕ ವಸ್ತುಪ್ರದರ್ಶನದ ಮುಖ್ಯ ಅತಿಥಿಯಾಗಿ ತನ್ನ ಹಳೇ ವಿದ್ಯಾರ್ಥಿ ವರ್ಮರನ್ನೇ ಆಹ್ವಾನಿಸಿತ್ತು . ಇಂತಹ ಮಹತ್ವ ಪೂರ್ಣ ಕಾರ್ಯಕ್ರಮದಲ್ಲವರು ಮಹಿಳೆಯರ ಬಗ್ಗೆ ಮಾತನಾಡಿದ್ದಲ್ಲದೆ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಹೇಳಿಕೆ ಕೊಟ್ಟಿದ್ದಾರೆ.

ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭಕ್ಕೆ ತೆರಳಿದ್ದ ವರ್ಮಾ ಅವರು ಬದುಕಿರುವಾಗಲೇ ಜೀವನವನ್ನು ಆನಂದಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಶಿಕ್ಷಕರಿಗೆ, ಪ್ರಾಧ್ಯಾಪಕರಿಗೆ ಗೌರವ ಕೊಡದೆ ಅವರಿಷ್ಟದಂತೆ ಬದುಕಬೇಕು ಎಂದು ರಾಮಗೋಪಾಲವರ್ಮ ವಿದ್ಯಾರ್ಥಿಗಳಿಗೆ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಇದರೊಂದಿಗೆ ಕಷ್ಟಪಟ್ಟು ಓದಿದರೆ ಯಾವತ್ತೂ ಎತ್ತರಕ್ಕೆ ಬರುವುದಿಲ್ಲ. ಹೀಗಾಗಿ ಇಲ್ಲಿರುವಾಗಲೇ ಕುಡಿದು ತಿಂದು ಆನಂದಿಸಿ ಎಂದು ವಿದ್ಯಾರ್ಥಿಗಳಿಗೆ ದಿಕ್ಕು ತಪ್ಪಿಸುವ ಸಲಹೆ ನೀಡಿದ್ದಾರೆ. ವ್ಯಾಸಂಗ ಮುಗಿಸಿ ಜೀವನ ಮತ್ತು ಜೀವನದ ಮಹತ್ವಾಕಾಂಕ್ಷೆಗಳನ್ನು ಕಟ್ಟಿಕೊಳ್ಳಲು ರೆಡಿಯಾಗಿರೋ ವಿದ್ಯಾರ್ಥಿಗಳಿಗೆ ಮುಂದಿನ ಗುರಿ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಬೇಕಿದ್ದ ನಿರ್ದೇಶಕರು ಇದಕ್ಕೆ ತದ್ವಿರುದ್ಧವಾಗಿ ಮಾಡಿದ್ದಾರೆ.

ಇನ್ನು ವಿಶ್ವವಿದ್ಯಾಲಯ ಎಂದರೆ ಅದೊಂದು ಜ್ಞಾನದ ಆಗರವಿದ್ದಂತೆ. ಅಲ್ಲಿ ಸಾಕ್ಷಾತ್ ಸರಸ್ವತಿಯೇ ಮೇಳೈಸಿದ್ದಾಳೆ ಎಂದು ಹಲವರು ಹೇಳುತ್ತಾರೆ. ಇಂತಹ ಸ್ಥಳದಲ್ಲಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಮಹಿಳಾ ಅಧ್ಯಾಪಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರಾಮ್ ಗೋಪಾಲ ವರ್ಮ ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಯಾವುದಾದರೂ ವೈರಸ್ ಬಂದು ತನ್ನನ್ನು ಬಿಟ್ಟು ಎಲ್ಲ ಗಂಡಸರು ದೂರ ಹೋದರೆ ತಾನೊಬ್ಬನೇ ಹೆಣ್ಣು ಜನಾಂಗಕ್ಕೆ ದಿಕ್ಕು ಎಂದು ಬೇಕಾ ಬಿಟ್ಟಿ ತಮಗೆ ತೋಚಿದಂತೆ ಮಾತನಾಡಿದ್ದಾರೆ.

ವರ್ಮಾರ ಭಾಷಣದ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗ್ತಿದೆ. ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಯಾರಾದರೂ ವಿದ್ಯಾರ್ಥಿಗಳಿಗೆ ಇಂತಹ ಮಾತುಗಳನ್ನು ಹೇಳುತ್ತಾರಾ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಉದ್ಯೋಗಿಗಳು ಆರ್‌ಜಿವಿಗೆ ಕೌಂಟರ್ ನೀಡುತ್ತಿದ್ದಾರೆ. ನೆಟ್ಟಿಗರು ಕೂಡ ವಿಷಾದದ ರೀತಿಯಲ್ಲಿ ಕಮೆಂಟಿಸುತ್ತಿದ್ದು, ಅಂತಹ ವಿಷಯಗಳನ್ನು ಹೇಳಲು ಅವರನ್ನು ಕರೆದಿದ್ದಾರೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಇನ್ನು ಇಂತಹ ವ್ಯಕ್ತಿಗಳು ಸಮಾಜದಲ್ಲಿ ಈ ಮೊದಲು ಹೇಗೆ ಗುರುತಿಸಿಕೊಂಡಿರುತ್ತಾರೆ ಎಂದು ಎಲ್ಲರಿಗೂ ತಿಳಿದಿರುತ್ತದೆ. ವಿಶ್ವವಿದ್ಯಾಲಯಕ್ಕೂ ಇದು ತಿಳಿಯದಿರುವ ವಿಷಯವೇನಲ್ಲ. ಗೊತ್ತಿದ್ದರೂ ಇಂತವರನ್ನು ವಿವಿಗಳು ತಮ್ಮ ಕಾರ್ಯಕ್ರಮಕ್ಕೆ ಕರೆಸುತ್ತಾರೆನ್ನುವುದು ವಿಷಾದನೀಯ .

Leave A Reply

Your email address will not be published.