Holstein Friesian Cow: 24 ಗಂಟೆಯಲ್ಲಿ 72 ಲೀಟರ್ ಹಾಲು ಕೊಟ್ಟು, ಮಾಲೀಕರಿಗೆ 2 ಟ್ರ್ಯಾಕ್ಟರ್ ಗೆದ್ದು ಕೊಡ್ತು ಈ ಹಸು! ಇದ್ರಿಂದ ನಿಮ್ಮ ಆದಾಯ ದುಪ್ಪಟ್ಟಾಗೋದು ಪಕ್ಕಾ!
Holstein Friesian Cow :ಪಶುಸಂಗೋಪನೆ ಅಥವಾ ಹೈನುಗಾರಿಕೆ( Dairy farming) ಎಂಬುದು ಕೃಷಿಗೆ ಪೂರಕವಾದುದು. ಇದರ ಮೂಲಕ ಅನೇಕ ರೈತಾಪಿ ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ. ರೈತರೆಂದ ಮೇಲೆ ದನ-ಕರುಳಿರುವುದು ಸಾಮಾನ್ಯ ಸಂಗತಿಯಲ್ಲವೆ? ಅಂದಹಾಗೆ ರೈತರು ಅಥವಾ ಕೇವಲ ಹೈನುಗಾರಿಕೆಯನ್ನೇ ನಂಬಿದವರು ಸಾಕುವ ಹಸುಗಳು ಒಂದು ದಿನಕ್ಕೆ ಎಷ್ಟು ಲೀಟರ್ ಹಾಲು ಕೊಡಬಹುದು ಹೇಳಿ. 10 ರಿಂದ 20 ಲೀಟರ್? ಹೋಗಲಿ 30 ಲೀಟರ್? ಹೆಚ್ಚೆಂದರೆ ಇಷ್ಟಿರಬಹುದಪ್ಪ. ಆದರೆ ಇಲ್ಲೊಂದು ಹಸು 24ಗಂಟೆಯಲ್ಲಿ, ಅಂದ್ರೆ ಒಂದು ದಿನದಲ್ಲಿ ಬರೋಬ್ಬರಿ 72 ಲೀಟರ್ ಹಾಲು ಕೊಡುತ್ತೆ!
ಹೌದು, ಹರಿಯಾಣ(Hariyana) ಡೈರಿ ಮತ್ತು ಅಗ್ರಿ ಎಕ್ಸ್‌ಪೋದಲ್ಲಿ(Dairy and Agri Expo) ‘ಹೋಲ್‌ಸ್ಟೈನ್ ಫ್ರೈಸಿಯನ್'(Holstein Friesian cow) ಎಂಬ ಹಸುವೊಂದು 24 ಗಂಟೆಗಳಲ್ಲಿ 72 ಲೀಟರ್‌ಗೂ ಹೆಚ್ಚು ಹಾಲು ನೀಡುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ನಂಬಿರುವ ಕುರುಕ್ಷೇತ್ರದ ಇಬ್ಬರು ರೈತರು ಈ ಹೋಲ್‌ಸ್ಟೈನ್ ಫ್ರೈಸಿಯನ್ ಎಂಬ ಹಸುವನ್ನು ಸಾಕಿ, ಸಲಹಿ ಅಧಿಕ ಲಾಭ ಗಳಿಸುತ್ತಿದ್ದಾರೆ.
ಅವರು ಹರಿಯಾಣದಲ್ಲಿ ನಡೆದ ಡೈರಿ ಮತ್ತು ಅಗ್ರಿ ಎಕ್ಸ್‌ಪೋಗೆ ತಮ್ಮ ಈ ಅಪರೂಪದ ಹುಸವನ್ನು ಕರೆದೊಯ್ದಿದ್ದು, ಅಲ್ಲಿ ಹಾಲು ಉತ್ಪಾದನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಈ ಹೋಲ್‌ಸ್ಟೈನ್ ಫ್ರೈಸಿಯನ್ ಹಸುವು ಯತೇಚ್ಛವಾಗಿ ಹಾಲು ನೀಡಿ, ಹಾಲಿನ ಹಳೆಯ ದಾಖಲೆಯನ್ನು ಮುರಿಯೋದ್ರೊಂದಿಗೆ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಈ ಹಸುವಿನ ಮಾಲೀಕರಾದ ಕುರುಕ್ಷೇತ್ರದ ಪೋರಸ್ ಮೆಹ್ಲಾ ಮತ್ತು ಸಾಮ್ರಾಟ್ ಸಿಂಗ್ ಅವರು ತಮ್ಮ ಹಸುವಿನ ಈ ದಾಖಲೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ‘ಕೇವಲ 7 ವರ್ಷ ವಯಸ್ಸಿನ ತಮ್ಮ ಹೋಲ್‌ಸ್ಟೈನ್ ಫ್ರೈಸಿಯನ್ ಹಸು 72.390 ಲೀಟರ್‌ಗಳಷ್ಟು ಹೆಚ್ಚಿನ ಹಾಲು ನೀಡಿದೆ. ನಮ್ಮ ಹಸು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಹಾಲು ಉತ್ಪಾದನೆಯಲ್ಲಿ ರಾಷ್ಟ್ರಮಟ್ಟದ ದಾಖಲೆ ನಿರ್ಮಿಸಿರುವುದು ನಮಗೆ ಅತೀವ ಸಂತಸ ತಂದಿದೆ’ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಅಂದಹಾಗೆ 2018 ರ ಹಿಂದೆ, ಹೋಲ್‌ಸ್ಟೈನ್ ಫ್ರೈಸಿಯನ್ ತಳಿಯ ಹಸು ಪಿಡಿಎ ಸ್ಪರ್ಧೆಯಲ್ಲಿ ದಿನಕ್ಕೆ 70,400 ಲೀಟರ್ ಹಾಲು ನೀಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿತ್ತು. ಇನ್ನು ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ 30 ಹೋಲ್‌ಸ್ಟೈನ್ ಫ್ರೈಸಿಯನ್ ಹಸುಗಳು ಭಾಗವಹಿಸಿದ್ದವು. ಆದರೆ ಕುರುಕ್ಷೇತ್ರ ಮೂಲದ ಈ ಹಸು ಗರಿಷ್ಠ ಹಾಲು ನೀಡುವ ಮೂಲಕ ಪ್ರಶಸ್ತಿಯನ್ನು ಗೆದ್ದಿದೆ.
ಇನ್ನೂ ಮುಖ್ಯವಾದ ಸಂಗತಿ ಎಂದರೆ ಹೊಸ ದಾಖಲೆ ಬರೆದ ಈ ಹಸುವಿನ ಇಬ್ಬರು ಮಾಲೀಕರಿಗೂ ಎರಡು ಟ್ರ್ಯಾಕ್ಟರ್‌ಗಳನ್ನು ಬಹುಮಾನವಾಗಿ ನೀಡಲಾಗುವುದು. ರಾಜ್ಯದಲ್ಲಿ ಹೈನುಗಾರಿಕೆ ಸಂಸ್ಕೃತಿಗೆ ಉತ್ತೇಜನ ನೀಡುತ್ತಿರುವ ಹರಿಯಾಣದ ಹೈನುಗಾರರ ಸಂಘ ಈ ಸಾಧನೆಗೆ ಹೈನುಗಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಸುವಿನ ಇಬ್ಬರು ಮಾಲೀಕರಲ್ಲಿ ಒಬ್ಬನಾದ ಪೋರಸ್ ಮೆಹ್ಲಾ ಅವರು ಎಂಬಿಎ ಪದವೀಧರರೆಂಬುದು ಇನ್ನೂ ವಿಶೇಷ. ಉನ್ನತ ಶಿಕ್ಷಣ ಪಡೆದ ಇವರು ಕೆಲವು ಸಮಯ ಕಂಪೆನಿಯಲ್ಲಿ ಉದ್ಯೋಗ ಮಾಡಿದರೂ, ಮನಸ್ಸು ಹೈನುಗಾರಿಕೆಯತ್ತ ಒಲವು ತೋರಿದೆ. ಅಂತೆಯೇ ತಮ್ಮ 40 ನೇ ವಯಸ್ಸಿನಲ್ಲಿ ಅಧಿಕೃತವಾಗಿ ಹೈನುಗಾರಿಕೆಗೆ ಪಾದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ; ಮೊದಲಿನಂತೆ ರಸಗೊಬ್ಬರ ಸಬ್ಸಿಡಿ ಸಿಗಲಿದೆ; ಸಂಪೂರ್ಣ ಯೋಜನೆಯನ್ನು ತಿಳಿದುಕೊಳ್ಳಿ