Men Commission: ಈ ಹೆಂಡತಿಯರ ಕಾಟ ತಡೆಯಲಾಗದು ದೇವ್ರೇ! ಆದಷ್ಟೂ ಬೇಗ ರಾಷ್ಟ್ರೀಯ ಪುರುಷರ ಆಯೋಗ ರಚಿಸಿರೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ
Men Commission :ಇಂದು ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ದಿನಬೆಳಗಾದರೆ ಸಾಕು ಇಂತಹ ಅನೇಕ ಘಟನೆಗಳು ನಮ್ಮ ಕಣ್ಣಿಗೆ ರಾಚುತ್ತವೆ. ಅದರಲ್ಲೂ ಗಂಡನಿಂದ ಹೆಂಡತಿ ಮೇಲಾಗುವ ಹಿಂಸಾಚಾಯರದ ಪ್ರಕರಣಗಳೇ ಹೆಚ್ಚೆನ್ನಬಹುದು. ಹೀಗಾಗಿ ಮಹಿಳೆಯರ ಹಿತರಕ್ಷಣೆಗಾಗಿ ರಾಜ್ಯಾದ್ಯಂತ, ದೇಶಾದ್ಯಂತ ಅನೇಕ ಆಯೋಗಗಳು, ಸಂಘ- ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಈ ದೌರ್ಜನ್ಯಗಳು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರ ಮೇಲೂ ನಡೆಯುತ್ತಿದೆ. ಅದರಲ್ಲೂ ಗಂಡಂದಿರ ಮೇಲೆ! ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪುರುಷರ ಆಯೋಗ(Men Commission) ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್(Supreme Court) ಗೆ ಅರ್ಜಿಯೂ ಸಲ್ಲಿಕೆಯಾಗಿದೆ.
ಹೌದು, ಮನೆಯಲ್ಲಿ ಪತ್ನಿಯಿಂದ ಅತಿಯಾದ ಹಿಂಸೆ ಆಗುತ್ತಿದೆ. ಕೌಟುಂಬಿಕ ದೌರ್ಜನ್ಯದಿಂದಾಗಿ ವಿವಾಹಿತ ಪುರುಷರ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಈ ರೀತಿಯ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಪುರುಷ ಆಯೋಗವನ್ನು ರಚನೆ ಮಾಡುವಂತೆ ಪತ್ನಿ ಪೀಡಿತರಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ವಕೀಲ ಮಹೇಶ್ ಕುಮಾರ್(Mahesh Kumar) ತಿವಾರಿ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ವಕೀಲ ಮಹೇಶ್ ಕುಮಾರ್ ತಿವಾರಿ ಅವರು ತಾವು ಸಲ್ಲಿಸಿರುವ ಅರ್ಜಿಯಲ್ಲಿ 2021ರಲ್ಲಿ ಆಕಸ್ಮಿಕ ಸಾವುಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಪ್ರಕಟಿಸಿದ ವರದಿ ಉಲ್ಲೇಖಿಸಿದ್ದಾರೆ. ಆ ವರ್ಷದಲ್ಲಿ ದೇಶಾದ್ಯಂತ 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 81,063 ಜನರು ವಿವಾಹಿತ ಪುರುಷರು. 28,680 ಮಂದಿ ಮಾತ್ರ ವಿವಾಹಿತ ಮಹಿಳೆಯರು ಎಂದು ಅವರು ತಮ್ಮ ಅರ್ಜಿಯಲ್ಲಿ ಅಂಕಿ–ಅಂಶ ಉಲ್ಲೇಖಿಸಿ ವಾದಿಸಿದ್ದಾರೆ. 2021ರಲ್ಲಿ ಕೌಟುಂಬಿಕ ಸಮಸ್ಯೆಗಳಿಂದಾಗಿ ಶೇ 33.2ರಷ್ಟು ಮತ್ತು ಮದುವೆ ಸಂಬಂಧಿತ ಸಮಸ್ಯೆಗಳಿಂದಾಗಿ ಶೇ 4.8ರಷ್ಟು ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಒಟ್ಟು 1,18,979 ಪುರುಷರು (ಶೇ 72) ಮತ್ತು 45,026 ಮಹಿಳೆಯರು (ಶೇ 27) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಎನ್‌ಸಿಆರ್‌ಬಿಯ ಅಂಕಿಅಂಶವನ್ನು ಪ್ರಸ್ತಾಪಿಸಿದ್ದಾರೆ.
ವಿವಾಹಿತ ಪುರುಷರ ಆತ್ಮಹತ್ಯೆಯ ಸಮಸ್ಯೆಯನ್ನು ನಿಭಾಯಿಸಲು ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಪುರುಷರ ದೂರುಗಳನ್ನು ಸ್ವೀಕರಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನವನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರ ದೂರನ್ನು ಸ್ವೀಕರಿಸಲು/ ಸ್ವೀಕರಿಸಲು ಪ್ರತಿ ಪೊಲೀಸ್ ಠಾಣೆಯ ಪೊಲೀಸ್ ಪ್ರಾಧಿಕಾರಕ್ಕೆ/ ಸ್ಟೇಷನ್ ಹೌಸ್ ಆಫೀಸರ್‌ಗೆ ಗೃಹ ಸಚಿವಾಲಯದ ಮೂಲಕ ಸರಿಯಾದ ಮಾರ್ಗಸೂಚಿಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಕೌಟುಂಬಿಕ ಸಮಸ್ಯೆಗಳು ಮತ್ತು ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಒತ್ತಡದಲ್ಲಿರುವ ಪುರುಷರ ಹಿತರಕ್ಷಣೆಗೆ ಭಾರತ ಸರ್ಕಾರದಿಂದ ಸರಿಯಾದ ಕಾನೂನು ಜಾರಿಗೆ ಬರುವವರೆಗೆ ಅದನ್ನು ಸರಿಯಾದ ವಿಲೇವಾರಿಗಾಗಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಈ ಜವಾಬ್ದಾರಿಯನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.
ಈ ಎಲ್ಲಾ ಕಾರಣಗಳಿಂದ ರಾಷ್ಟ್ರೀಯ ಪುರುಷರ ಆಯೋಗ ರಚನೆಗೆ ಅಗತ್ಯ ವರದಿ ನೀಡಲು, ಕೌಟುಂಬಿಕ ಹಿಂಸಾಚಾರ ಅಥವಾ ಕೌಟುಂಬಿಕ ಸಮಸ್ಯೆ ಹಾಗೂ ವಿವಾಹ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆ ಕುರಿತು ಸಂಶೋಧನೆ ನಡೆಸಲು ಕೇಂದ್ರ ಕಾನೂನು ಆಯೋಗಕ್ಕೆ ಶಿಫಾರಸು ಮಾಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ : 7th Pay Commission : ಸರ್ಕಾರಿ ನೌಕರರಿಗೆ ಸಿಹಿಸುದ್ದಿ! ತುಟ್ಟಿಭತ್ಯೆ ಕುರಿತು ದೊಡ್ಡ ಘೋಷಣೆ ಸಾಧ್ಯತೆ!