Lottery ticket: 75 ಲಕ್ಷ ರೂಪಾಯಿ ಲಾಟರಿ ಗೆದ್ದ ಸುದ್ದಿ ತಿಳಿದ ತಕ್ಷಣ ನೇರವಾಗಿ ಪೊಲೀಸ್ ಠಾಣೆಗೆ ಓಟ ಕಿತ್ತ ವ್ಯಕ್ತಿ !
Lottery ticket : ಕಷ್ಟ ಬಂದಾಗ, ನೋವಿನಲ್ಲಿ ಇರುವಾಗ ಮತ್ತು ಯಾರೋ ಕೊಟ್ಟ ನೋವು ತಿನ್ನುವಾಗ, ರಕ್ಷಣೆಗಾಗಿ ಮಾತ್ರ ನಮಗೆ ಪೊಲೀಸರೆಂಬ ಆಪದ್ಭಾ೦ಧವರು ನೆನಪಾಗುವುದಲ್ಲ. ಬದಲಿಗೆ ಅತ್ಯಂತ ಖುಷಿಯ ಕ್ಷಣಗಳಲ್ಲಿ ಕೂಡಾ ಪೊಲೀಸರು ನೆನಪಾಗುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೇರಳದ ( Kerala) ಅತಿಥಿ ಕಾರ್ಮಿಕರೊಬ್ಬರು 75 ಲಕ್ಷ ರೂಪಾಯಿಗಳ ಲಾಟರಿ(lottery ticket) ಗೆದ್ದಿದ್ದಾರೆ. ಆಗ ಖುಷಿಯ ಜತೆ ಭಯಭೀತನಾದ ಆತ ಸೀದಾ ಎದ್ದು ಬಿದ್ದು ಪೊಲೀಸ್ ಸ್ಟೇಷನ್ ಗೆ ಓಡಿ ಹೋಗಿದ್ದಾನೆ.
ಪಶ್ಚಿಮ ಬಂಗಾಳ (west Bengal) ಮೂಲದ ಎಸ್.ಕೆ.ಬದೇಶ್ ಎಂಬಾತ ಕೇರಳ ಸರ್ಕಾರದ ಸ್ತ್ರೀ ಶಕ್ತಿ ಲಾಟರಿ ಕೊಂಡಿದ್ದ. ಆತ ಕೊಂಡ ಲಾಟರಿಯಲ್ಲಿ ಆತನಿಗೆ 75 ಲಕ್ಷ ರೂಪಾಯಿಯ (75 lakh) ಭಾರೀ ಮೊತ್ತವು ಸಿಕ್ಕಿದ ಸುದ್ದಿ ತಲುಪುತ್ತದೆ. ಮಂಗಳವಾರ ರಾತ್ರಿ ಲಾಟರಿಯಲ್ಲಿ ಹಣ ಗೆದ್ದಿದ್ದೇನೆ ಎಂದು ಅರಿವಾದ ಕ್ಷಣದಲ್ಲಿ ಆತ ಕೇರಳದ ಮುವಾಟ್ಟುಪುಳ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾನೆ.
ತನಗೆ ಲಾಟರಿ ದೊರೆತಿದ್ದು ಇದು ನನ್ನ ಜೀವನದ ಬಹುದೊಡ್ಡ ದುಡ್ಡು. ತನಗೆ ಈಗ ಭಯವಾಗುತ್ತಿದೆ. ಲಾಟರಿ ಟಿಕೆಟ್ ಅನ್ನು ತನ್ನಿಂದ ಯಾರಾದರೂ ಕಸಿದುಕೊಳ್ಳಬಹುದು ಎಂದು ಭಯಗೊಂಡು ಮತ್ತು ಲಾಟರಿಯ ಹಣ ಪಡೆಯುವ ಬಗ್ಗೆ ಮಾಹಿತಿ ಮತ್ತು ಇತರ ಔಪಚಾರಿಕತೆಯ ಬಗ್ಗೆ ತಿಳಿದಿಲ್ಲದ ಕಾರಣ ಆತ ಪೊಲೀಸರಿಂದ ರಕ್ಷಣೆ ಕೋರಿದ್ದ.
ಎಸ್.ಕೆ.ಬಾದೇಶ್ ಈ ಹಿಂದೆಯೂ ಹಲವು ವರ್ಷಗಳಿಂದ ಲಾಟರಿ ಮೂಲಕ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದರು, ಆದರೆ ಯಾವತ್ತೂ ಅದೃಷ್ಟಲಕ್ಷ್ಮಿ ಆತನಿಗೆ ಒಲಿದಿರಲಿಲ್ಲ. ಆದರೂ ಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ಫಲಿತಾಂಶವನ್ನು ಪರಿಶೀಲಿಸಲು ಕುಳಿತಾಗ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದರು.
ಎಸ್.ಕೆ.ಬಾದೇಶ್ ಎರ್ನಾಕುಲಂನ ಚೊಟ್ಟಾನಿಕರದಲ್ಲಿ ರಸ್ತೆ ನಿರ್ಮಾಣ ಕಾರ್ಯದ ಕೂಲಿ ಕಾರ್ಮಿಕ. ಅಲ್ಲಿ ಕೂಲಿ ಮಾಡುತ್ತಿರುವಾಗ ಆತ ಟಿಕೆಟ್ ಖರೀದಿಸಿದ್ದ. ಎಸ್.ಕೆ.ಬದೇಶ್ ಕೇರಳಕ್ಕೆ ಇತ್ತೀಚೆಗಷ್ಟೇ ತೆರಳಿದ್ದ, ಅಲ್ಲದೆ ಮಲೆಯಾಳಂ ಭಾಷೆಯ ಅರಿವು ಕೂಡಾ ಆತನಿಗೆ ಇಲ್ಲ. ಲಾಟರಿ ಸಿಕ್ಕಾಗ ತನ್ನ ಗೆಳೆಯನಿಗೆ ವಿಷಯ ತಿಳಿಸಿ, ನಂತರ ಖುಷಿಯ ಜತೆ ಭಯ ಉಂಟಾಗಿ ಆತ ಪೊಲೀಸ್ ಸ್ಟೇಷನ್ ಕಡೆಗೆ ಓಟ ಕಿತ್ತಿದ್ದಾನೆ.
ಲಾಟರಿಯಲ್ಲಿ ಸಿಕ್ಕ ಹಣ ಪಡೆದ ನಂತರ ಬಂಗಾಳದಲ್ಲಿರುವ ತಮ್ಮ ಮನೆಗೆ ಮರಳಲು ನಿರ್ಧರಿಸಿದ್ದು, ಮತ್ತು ಕೇರಳ ಲಾಟರಿ ತನಗೆ ತಂದ ಅದೃಷ್ಟದಿಂದ ಕೃಷಿ ಮಾಡಲು ನಿರ್ಧರಿಸಿದ್ದಾನೆ. ಜತೆಗೆ ಹಳೆಯ ತನ್ನ ಮನೆಯನ್ನು ನವೀಕರಿಸಲು ಇಚ್ಚಿಸುವುದಾಗಿ ಹೇಳಿಕೊಂಡಿದ್ದಾನೆ.