C T Ravi: ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಓಟುಗಳು ಬೇಕಿಲ್ಲ: ಸಿಟಿ ರವಿ! ರಾಜ್ಯಾದ್ಯಂತ ಬುಗಿಲೆದ್ದ ಲಿಂಗಾಯತರ ಆಕ್ರೋಶ! ರವಿ ಕರೆದು ಮಾತನಾಡುತ್ತೇನೆಂದ BSY
CT Ravi -BSY :ಚುನಾವಣೆ ರಂಗು ಕಾವೇರುತ್ತಿದ್ದಂತೆ ಇತ್ತ ಕೆಲವು ರಾಜಕೀಯ ನಾಯಕರುಗಳು ಮನ ಬಂದಂತೆ ಏನೇನೋ ಹೇಳಿಕೆ ನೀಡಿ, ತಮ್ಮ ಮೂಗಿನ ನೇರಕ್ಕೆ ಮಾತನಾಡಿ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಂತವರಲ್ಲಿ ಬಿಜೆಪಿ(BJP) ನಾಯಕ, ಶಾಸಕ ಸಿ ಟಿ ರವಿ(C T Ravi) ಅವರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಸದ್ಯ ಲಿಂಗಾಯತರ ಕುರಿತು ಹಾಗೂ ಯಡಿಯೂರಪ್ಪರ ಕುರಿತು ಹೇಳಿರುವ ಅವರ ಹೇಳಿಕೆಗಳು ಇದೀಗ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ಮತಗಳನ್ನು ಚದುರುವಂತೆ ಮಾಡಿ, ಲಿಂಗಾಯತರೆಲ್ಲರೂ ಬಿಜೆಪಿ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ.
ಮಾರ್ಚ್ 15ರಂದು ವಿಜಾಪುರ(Vijapura) ದಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡಿದ್ದ ಸಿ ಟಿ ರವಿ “ಟಿಕೆಟ್ ನೀಡುವ ಬಗ್ಗೆ ಕುಟುಂಬದಲ್ಲಿ ತೀರ್ಮಾನವಾಗುವುದಿಲ್ಲ, ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ನಮ್ಮ ಪಕ್ಷದಲ್ಲಿ ಕಿಚನ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲ್ಲ. ನಾಯಕರ ಮಕ್ಕಳೆಂದ ಕಾರಣಕ್ಕೆ ಅವರಿಗೆ ಟಿಕೆಟ್ ಸಿಕ್ಕಲ್ಲ. ಈಗ ವಿಜಯೇಂದ್ರ ಬಗ್ಗೆ ಕೇಳಿದ್ದೀರಿ. ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ಸಮೀಕ್ಷೆಯ ಆಧಾರದ ಮೇಲೆ ಗೆಲ್ಲುವ ಮಾನದಂಡದ ಆಧರಿಸಿ ಟಿಕೆಟ್ ನೀಡುವ ಕುರಿತು ನಿರ್ಧರಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಸಮೀಕ್ಷೆ ನಡೆಯುವುದಿಲ್ಲ ಎಂದಿದ್ದರು. ಇದಾದ ಬಳಿಕ ಲಿಂಗಾಯತರ (Lingayats) ವೋಟು ನಮಗೆ ಬೇಡ, ಅವರ ವೋಟುಗಳಿಲ್ಲದೆ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂಬ ಮಾತಿನ ಮೂಲಕ ವಿವಾದದ ಕಿಡಿಯನ್ನು ಹತ್ತಿಸಿದ್ಧರು.
ಸಿಟಿ ರವಿ ಈ ಹೇಳಿಕೆಗಳೀಗ ಪಕ್ಷದ ನಾಯಕರಿಗೆ ತೀವ್ರ ಇರುಸು ಮುರುಸು ಉಂಟು ಮಾಡಿದೆ. ಇದರೊಂದಿಗೆ ರಾಜ್ಯದ ಲಿಂಗಾಯತರೆಲ್ಲರೂ ಬಿಜೆಪಿ ವಿರುದ್ಧ ಸಿಡಿದೇಳುವಂತಾಗಿದೆ. ಇದರ ಮಧ್ಯೆ ಚಿಕ್ಕಮಗಳೂರಿನಲ್ಲಿ ವೀರಶೈವ ಲಿಂಗಾಯತರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi -BSY) ವಿರುದ್ಧ ಸಿಡಿದೆದ್ದಿದ್ದಾರೆ, ಇದರ ಬೆನ್ನಲ್ಲೇ ಇದೀಗ ರಾಜ್ಯ ವೀರಶೈವ ಲಿಂಗಾಯತ(veerashaiva lingayat) ಸಂಘಟನಾ ವೇದಿಕೆ, ಸಿಟಿ ರವಿ ವಿರುದ್ಧ ಆಕ್ರೋಶಗೊಂಡಿದೆ.
ಪದೇ ಪದೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa) ಮತ್ತು ಅವರ ಪುತ್ರ ವಿಜಯೇಂದ್ರ ಹೇಳಿಕೆಗಳಿಗೆ ಪರೋಕ್ಷವಾಗಿ ಟಾಂಗ್ ಕೊಡುತ್ತಿರುವುದಕ್ಕೆ ವೀರಶೈವ ಲಿಂಗಾಯತ ಸಂಘಟನೆ ಕೋಪಗೊಂಡಿದ್ದು, ಸಿ ಟಿ ರವಿ ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕಬೇಕು. ಕಿತ್ತೋದ ಸಿ.ಟಿ ರವಿ ಎಂದು ಘೋಷಣೆ ಕೂಗಬೇಕು ಪತ್ರಿಕಾ ಪ್ರಕಟಣೆ ಮೂಲಕ ಕರೆ ಕೊಟ್ಟಿದೆ. ಅಲ್ಲದೇ ಲಿಂಗಾಯತ ಸಮಾಜಕ್ಕೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಒಂದು ವಾರದಲ್ಲಿ ನಿಮ್ಮ ಮನೆಗೆ ಬಂದು ಹೋರಾಟ ಮಾಡುತ್ತೇವೆ ಎಂದು ಸಿಟಿ ರವಿಗೆ ಎಚ್ಚರಿಕೆ ನೀಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲಿಂಗಾಯತ ಸಮಾಜವು ‘ಕಳೆದ 50 ವರ್ಷಗಳಿಂದ ಸಿಟಿ ರವಿ ಅಂತಹವರು ತುಂಬಾ ಜನಗಳನ್ನು ವೀರಶೈವ ಲಿಂಗಾಯತ ಸಮಾಜ ನೋಡಿದೆ. ನಮ್ಮ ಸಮಾಜ ಎಷ್ಟೇ ಒಡೆದರು ಚುನಾವಣೆಯಲ್ಲಿ ಒಂದಾಗಿ ತಕ್ಕ ಪಾಠ ಕಲಿಸಿರುವುದು ನೆನಪಿಲ್ಲವೇ. ವೀರಶೈವ ಲಿಂಗಾಯತ ಸಮಾಜ ತುಂಬಾ ಸೂಕ್ಷ್ಮ ಸಮಾಜ. ಯಾರನ್ನು ಕೆಣಕಲು ಹೋಗಲ್ಲ. ಕಾಯಕವೇ ಕೈಲಾಸ ಎಂದು ತಿಳಿದಿದ್ದೇವೆ. ಸಮಾಜ ತಮ್ಮ ಜೀವನ ನಡೆಸುತ್ತಿದೆ. ನಿನ್ನ ತರಹ ಜೀವನ ಮಾಡಲು ನಮಗೆ ಬರುವುದಿಲ್ಲ. ಒಂದು ಸಲ ಸಿಡಿದರೆ ನಿನ್ನಂತಹ ಸಾವಿರಾರು ವ್ಯಕ್ತಿಗಳನ್ನು ಮುಗಿಸಿ ಹಾಕುವುದು ನಮಗೆ ಗೊತ್ತು.ಸಿ.ಟಿ ರವಿಯವರೇ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಮಾತನಾಡಿಲಿಕ್ಕೆ ನಿನಗೆ ಏನು ನೈತಿಕತೆ ಇದೆ. ಇಂತಹವರನ್ನು ಬಿಜೆಪಿ ಪಕ್ಷ ತಕ್ಷಣವೇ ಉಚ್ಚಾಟನೆ ಮಾಡಬೇಕು. ವೀರಶೈವ ಲಿಂಗಾಯತ ಸಮಾಜಕ್ಕೆ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಒಂದು ವಾರದಲ್ಲಿ ನಿಮ್ಮ ಮನೆಗೆ ಬಂದು ಹೋರಾಟ ಮಾಡುತ್ತೇವೆ . ಮಾನಸಿಕ ಅಸ್ವಸ್ತ ಸಿ.ಟಿ ರವಿಯವರಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಎಚ್ಚರಿಕೆ ನೀಡುತ್ತಿದೆ’ ಎಂದು ತಿಳಿಸಿದೆ.
ಅಲ್ಲದೆ ಇಂದು ಚಿಕ್ಕಮಗಳೂರಿ(Chikkamagalure)ಗೆ ಯಡಿಯೂರಪ್ಪನವರು ಭೇಟಿ ನೀಡಿದ್ದು, ಈ ವೇಳೆ ಮಾಧ್ಯಮದವರು ರವಿ ಹೇಳಿದ್ದನ್ನು ಯಡಿಯೂರಪ್ಪನವರ (BS Yediyurappa) ಗಮನಕ್ಕೆ ತಂದಿದ್ದಾರೆ. ಆಗ ಕೋಪವುಂಟಾದರೂ ಅದನ್ನು ತೋರ್ಪಡಿಸದೆ ಶಾಂತವಾದ ಸ್ವರದಲ್ಲಿ ಮಾತಾಡಿದ ಯಡಿಯೂರಪ್ಪನವರು, ಅವರು ಹಾಗೆ ಹೇಳಿದ್ದರೆ ಅದು ಬಹಳ ತಪ್ಪು, ಬಿಜೆಪಿಗೆ ಎಲ್ಲ ವರ್ಗದ ವೋಟುಗಳು ಬೇಕು, ಅವರನ್ನು ಕರೆಸಿ ತಾವು ಮಾತಾಡುವುದಾಗಿ ಹೇಳಿದರು.
ಇತ್ತೀಚೆಗೆ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ನಡೆಗೆ ಸಚಿವ ಸೋಮಣ್ಣ ಸಿಡಿದೆದ್ದಿದ್ದು, ಈ ಬಗ್ಗೆ ಹೈಕಮಾಂಡ್ಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಸಿಟಿ ರವಿ(ct ravi) ಸಹ ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಹೇಳಿಕೆಗಳಿಗೆ ಟಾಂಗ್ ಕೊಡುತ್ತಿದ್ದಾರೆ. ಶಿಕಾರಿಪುರ ವಿಧಾನಸಭಾ(Shikaripura) ಕ್ಷೇತ್ರವನ್ನು ತನ್ನ ಮಗನಿಗಾಗಿ ಬಿಟ್ಟು ಕೊಡುವುದಾಗಿ ಯಡಿಯೂರಪ್ಪ ಘೋಷಿಸಿದ್ದು, ಇದಕ್ಕೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಮನೆಯಲ್ಲಿ ನಿರ್ಧಾರವಾಗಲ್ಲ ಎಂದು ಪರೋಕ್ಷವಾಗಿ ಬಿಎಸ್ವೈಗೆ ಟಾಂಗ್ ಕೊಟ್ಟಿದ್ದರು. ಇದರಿಂದ ಕೋಪಗೊಂಡಿದ್ದ ವಿಜಯೇಂದ್ರ, ರಾಜ್ಯದಲ್ಲಿ ಬಿಜೆಪಿ ಕಟ್ಟಿದ್ದು ಬಿಎಸ್‌ವೈ ಎಂದು ಸಿ.ಟಿ.ರವಿಗೂ ಗೊತ್ತಿದೆ. ಈ ರೀತಿ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ತಿರುಗೇಟು ನೀಡಿದ್ದರು.