Heart Surgery: ಮತ್ತೊಂದು ಅಚ್ಚರಿಗೆ ಕಾರಣವಾದ ವೈದ್ಯಲೋಕ : ತಾಯಿಯ ಗರ್ಭದಲ್ಲಿದ್ದ ಮಗುವಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ಏಮ್ಸ್ ವೈದ್ಯರು
Heart surgery : ‘ವೈದ್ಯೋ ನಾರಾಯಣೋ ಹರಿಃ’ ಎಂದು ಹೇಳುತ್ತಾರೆ. ಇವರು ಎಂತಹ ಕಷ್ಟ ಸಂದರ್ಭದಲ್ಲಿಯೂ ಕೂಡ ಪ್ರಯತ್ನ ಮೀರಿ ಪ್ರಯತ್ನಿಸಿ ರೋಗಿಗಳ ಜೀವ ಉಳಿಸುವ ದೇವರುಗಳು. ಈ ವೈದ್ಯ ಲೋಕ ಹೊಸತನದ ಆವಿಷ್ಕಾರದೊಂದಿಗೆ, ಅಸಾಧ್ಯವನ್ನು ಸಾಧ್ಯವಾಗಿಸುವುದರ ಮೂಲಕ ಸದಾ ಅಚ್ಚರಿಗೆ ಕಾರಣವಾಗುತ್ತಾ ಶ್ಲಾಘನೆಗೆ ಪಾತ್ರವಾಗುತ್ತದೆ. ಅಂತೆಯೇ ಇದೀಗ ಇಂತದೇ ಪ್ರಕರಣ ಬೆಳಕಿಗೆ ಬಂದಿದ್ದು, ಮತ್ತೊಮ್ಮೆ ಎಲ್ಲರೂ ಹುಬ್ಬೇರಿಸುವಂತಹ ಕಾರ್ಯಕ್ಕೆ ನಮ್ಮ ವೈದ್ಯರು ಸಾಕ್ಷಿಯಾಗಿದ್ದಾರೆ.
ಹೌದು, ತಾಯಿ ಹೊಟ್ಟೆಯಲ್ಲಿದ್ದ ಮಗುವಿನ ಪುಟ್ಟ ಹೃದಯದ ಶಸ್ತ್ರಚಿಕಿತ್ಸೆಯನ್ನು (heart surgery )ಅತ್ಯಂತ ಯಶಸ್ವಿಯಾಗಿ ನಡೆಸಿದ ದೆಹಲಿಯ (Delhi) ಏಮ್ಸ್(Aiims) ವೈದ್ಯರು ಇದೀಗ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಅಲ್ಲದೆ ಕೇವಲ 90 ಸೆಕೆಂಡುಗಳಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಿದ್ದು, ತುಂಬಾ ಅಪರೂಪದ ಶಸ್ತ್ರ ಚಿಕಿತ್ಸೆ ಇದಾಗಿದೆ. ಶಸ್ತ್ರಚಿಕಿತ್ಸೆಯ (surgery )ನಂತರ ಗರ್ಭಿಣಿ ಮಹಿಳೆ ಮತ್ತು ಆಕೆಯ ಗರ್ಭದಲ್ಲಿರುವ ಮಗು ಆರೋಗ್ಯವಾಗಿದ್ದಾರೆ. ಬಲೂನ್ ಹಿಗ್ಗಿಸುವ ಪ್ರಕ್ರಿಯೆಯಿಂದ ಮಗುವಿನ ಜೀವ ಉಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಹಿಂದೆ ಮೂರು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದ 28 ವರ್ಷದ ಗರ್ಭಿಣಿಯೊಬ್ಬರು ಏಮ್ಸ್‌ಗೆ ದಾಖಲಾಗಿದ್ದರು. ಮಗುವಿನ ಹೃದಯ ಸ್ಥಿತಿ ಚೆನ್ನಾಗಿಲ್ಲವೆಂದೂ, ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಬಹುದೆಂದೂ ತಿಳಿಸಿದ್ದರು. ಮಗುವನ್ನು ಉಳಿಸಿಕೊಳ್ಳಲು ಮುಂದಾದ ದಂಪತಿ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು. ಏಮ್ಸ್‌ನ ಕಾರ್ಡಿಯೋಥೊರಾಸಿಕ್ ಸೈನ್ಸಸ್ ಸೆಂಟರ್‌ನ ತಜ್ಞರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು, ತಾಯಿ ಹಾಗೂ ಭ್ರೂಣದ ಆರೋಗ್ಯ ಸ್ಥಿರವಾಗಿದೆ. ತಜ್ಞರ ತಂಡವು ತಾಯಿಯ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಈ ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ವೈದ್ಯರು ‘ಈ ಪ್ರಕ್ರಿಯೆಯು ತುಂಬಾ ಸವಾಲಿನದ್ದಾಗಿತ್ತು, ಏಕೆಂದರೆ ಇದು ಭ್ರೂಣದ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಮೊದಲು ತಾಯಿಯ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಜಿಯನ್ನು ಸೇರಿಸಿಲಾಯಿತು. ನಂತರ, ಬಲೂನ್ ಕ್ಯಾತಿಟರ್ ಬಳಸಿ ಅಡಚಣೆಯಾದ ಕವಾಟವನ್ನು ತೆರೆಯಲಾಯಿತು, ಇದರಿಂದ ರಕ್ತದ ಹರಿವಿಗೆರಿ ಮಾಡಿಕೊಟ್ಟಂತಾಗಿದೆ. ಅಲ್ಲದೆ ಮಗುವಿನ ಹೃದಯವು ಉತ್ತಮವಾಗಿ ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ. ಇಂತಹ ಪ್ರಕ್ರಿಯೆಯು ಭ್ರೂಣದ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕು ಎಂದು ಹೇಳಿದರು.
ಇನ್ನು ‘ಮಗು ತಾಯಿಯ ಉದರದಲ್ಲಿರುವಾಗಲೇ ಉಂಟಾಗುವ ಕೆಲವು ತೀವ್ರತರದ ಹೃದಯ ಕಾಯಿಲೆಗಳನ್ನು ಶಮನ ಮಾಡಬಹುದು. ಹೊಟ್ಟೆಯಲ್ಲೇ ಅವುಗಳಿಗೆ ಚಿಕಿತ್ಸೆ ನೀಡುವುದರಿಂದ ಜನನದ ಬಳಿಕ ಮಗುವಿನ ಮೇಲ್ನೋಟವು ವೃದ್ಧಿಸುವುದಲ್ಲದೆ, ಸಾಮಾನ್ಯ ಮಗುವಿನಂತೆ ಬೆಳವಣಿಗೆ ಉಂಟಾಗುತ್ತದೆ‘ ಎಂದು ವೈದ್ಯರು ಹೇಳಿದ್ದಾರೆ.