Rajasthan : ರಕ್ತ ವಾಂತಿಯಾಗಿ ಆಸ್ಪತ್ರೆ ಸೇರಿದ ಯುವಕ! ಆಪರೇಷನ್ ಮಾಡಿ ಹೊಟ್ಟೆಯಿಂದ 56 ಬ್ಲೇಡ್‌ಗಳನ್ನು ತೆಗೆದ ವೈದ್ಯರು!
Rajasthan : ಕೆಲ ದಿನಗಳ ಹಿಂದಷ್ಟೇ ಅನ್ನ ನುಂಗಲು ಹೆಣಗಾಡುತ್ತಿದ್ದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದಾಗ ಆತನ ಅನ್ನನಾಳದಲ್ಲಿ ನೂರು ರೂಗಳ 2 ನೋಟು ಪತ್ತೆಯಾಗಿತ್ತು. ಅಲ್ಲದೆ ಇನ್ನೊಬ್ಬ ವ್ಯಕ್ತಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ ಆತನಿಗೂ ಆಪರೇಷನ್ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ವೊಡ್ಕಾ ಬಾಟಲ್ ಒಂದು ಪತ್ತೆಯಾಗಿ ವೈದ್ಯರದನ್ನು ಹೊರತೆಗೆದ ಘಟನೆ ನಡೆದಿತ್ತು. ಈ ಎರಡು ಘಟನೆಗಳು ಮಾಸುವ ಮುನ್ನವೇ ವೈದ್ಯರು ಇದೀಗ ಯುವಕನ ಹೊಟ್ಟೆಯಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 56 ಬ್ಲೇಡ್(Blades) ಗಳ್ನು ಹೊರತೆಗೆದಿದ್ದಾರೆ!
ಹೌದು, ರಾಜಸ್ಥಾನ(Rajasthan) ದ ಜಲೋರ್(Jalore) ಜಿಲ್ಲೆಯ ದತ್ತ ಗ್ರಾಮದ ಯಶಪಾಲ್ ಸಿಂಗ್(Yashpal Sing) ಎಂಬ ಯುವಕನೊಬ್ಬನ ಹೊಟ್ಟೆಯಲ್ಲಿ 56 ಬ್ಲೇಡ್‌ಗಳು ಪತ್ತೆಯಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಜೀವ ಉಳಿಸಿದ್ದಾರೆ. ಆದರೆ, ಇಷ್ಟೊಂದು ಸಂಖ್ಯೆಯ ಬ್ಲೇಡ್‌ಗಳನ್ನು ಈ ಯುವಕ ಯಾಕೆ ನುಂಗಿದ್ದ ಎಂಬುದು ಇನ್ನೂ ಗೊತ್ತಾಗಿಲ್ಲ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
ಈ ವಿಚಿತ್ರ ಪ್ರಕರಣವನ್ನು ಭೇಧಿಸಿ ನೋಡಿದಾಗ ಸುಮಾರು 25 ವರ್ಷದ ಯಶಪಾಲ್ ಅಕೌಂಟೆಂಟ್(Accountant) ಆಗಿ ಕೆಲಸ ಮಾಡುತ್ತ, ನಾಲ್ವರು ಸ್ನೇಹಿತರೊಂದಿಗೆ ವಾಸವಾಗಿದ್ದ. ಈತ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಮಾರು 56 ಬ್ಲೇಡ್‌ಗಳನ್ನು ನುಂಗಿ ನೀರು ಕುಡಿದಿದ್ದಾನೆ. ಇದಾದ ಬಳಿಕ ಈತನಿಗೆ ರಕ್ತವಾಂತಿಯಾಗಲು ಶುರುವಾಗಿದ್ದು, ಕೂಡಲೇ ಗೆಳೆಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಆತನನ್ನು ತಪಾಸಣೆ ಮಾಡಿದ ವೈದ್ಯರಿಗೆ ಶಾಕ್ ಕಾದಿತ್ತು. ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರು ಆತನ ಹೊಟ್ಟೆಯಿಂದ 56 ಬ್ಲೇಡ್‌ಗಳ ತುಂಡುಗಳನ್ನು ಹೊರತೆಗೆದಿದ್ದಾರೆ.
ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಿಸಿದಾಗ ರಕ್ತ ವಾಂತಿ ಮಾಡುತ್ತಿದ್ದ ಸಿಂಗ್ನ ಹೊಟ್ಟೆ, ತಲೆ ಮತ್ತು ಕುತ್ತಿಗೆ ಊದಿಕೊಂಡಿತ್ತು. ಅಲ್ಲದೆ ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗ ಆಮ್ಲಜನಕದ ಮಟ್ಟ 80 ಆಗಿತ್ತು. ಹೀಗಾಗಿ ಪರಿಸ್ಥಿತಿ ಅರಿತ ಅಲ್ಲಿನ ವೈದ್ಯ, ಡಾ ನರಸಿ ರಾಮ್ ದೇವಸಿ (Narsi Ram Devasi) ಅವರು ಕೂಡಲೇ ಎಕ್ಸ್-ರೇ ಮಾಡಿದ್ದಾರೆ. ಈ ವೇಳೆ ದೇಹದಲ್ಲಿ ಲೋಹದ ತುಣುಕುಗಳಿರುವುದು ಕಂಡು ಬಂದಿದೆ. ನಂತರ ಏನಿರಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ವೈದ್ಯರು ಕೂಡಲೇ ಸೋನೋಗ್ರಫಿ (sonography) ಮತ್ತು ಎಂಡೋಸ್ಕೋಪಿ (endoscopy) ನಡೆಸಿದರು. ಈ ವೇಳೆ ಅವರ ದೇಹದಲ್ಲಿ ಇರುವುದು ಬ್ಲೇಡ್‌ಗಳು ಎಂಬುದು ವೈದ್ಯರಿಗೆ ಸ್ಪಷ್ಟವಾಗಿತ್ತು. ಶೀಘ್ರದಲ್ಲೇ ಯುವಕನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ 56 ಬ್ಲೇಡ್‌ಗಳನ್ನು ಹೊರತೆಗೆದರು.
ಇನ್ನು ಈ ಕುರಿತು ಮಾತನಾಡಿದ ವೈದ್ಯರು ‘ಈ ಯುವಕ ಮೂರು ಪ್ಯಾಕೆಟ್ ಬ್ಲೇಡ್‌ಗಳನ್ನು ನುಂಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕವರ್‌ಗಳು ಸಮೇತವಾಗಿ ಇವುಗಳನ್ನು ನುಂಗಿದ್ದಾನೆ. ಈ ಕವರ್‌ಗಳು ಹೊಟ್ಟೆಯೊಳಗೆ ಕರಗಿವೆ. ಪರಿಣಾಮ ಬ್ಲೇಡ್‌ಗಳು ಯುವಕನ ಕರುಳು ಮತ್ತು ಹೊಟ್ಟೆಯ ಒಳಪದರಗಳಿಗೆ ಗಾಯಗೊಳಿಸಿವೆ. ಸದ್ಯ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.
ವ್ಯಕ್ತಿಯ ಸಂಬಂಧಿಕರನ್ನು ಈ ಬಗ್ಗೆ ಕೇಳಿದಾಗ ಆತ ಮಾನಸಿಕವಾಗಿ ಸ್ಥಿರವಾಗಿದ್ದು (Mental stable), ಇದರ ಹಿಂದಿನ ಕಾರಣ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಯುವಕನು ಕೂಡ ಬ್ಲೇಡ್ ತಿಂದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾನೆ.