ಎಚ್3ಎನ್2 ವೈರಸ್ ಸೋಂಕು ಆರ್ಭಟ..! ಭಾರತದಲ್ಲೇ ಮೊದಲ ಬಾರಿಗೆ ಇಬ್ಬರು ಬಲಿ.!
H3N2 influenza virus :ಕಳೆದ ಕೆಲವು ತಿಂಗಳುಗಳಲ್ಲಿ, ದೇಶದ ಅನೇಕ ಭಾಗಗಳಲ್ಲಿ ಜ್ವರದ ಹಲವಾರು ಪ್ರಕರಣಗಳು ವರದಿಯಾಗ್ತಿದೆ. ಡೆಂಗ್ಯೂ ಜ್ವರ, ಇಲಿ ಜ್ವರ ಮತ್ತು ಕಾಲೋಚಿತ ವೈರಲ್ ಜ್ವರದ ಜೊತೆಗೆ, ಮಕ್ಕಳಲ್ಲಿ ಹರಡುವ ಅಡೆನೊವೈರಸ್, ಎಚ್ 1 ಎನ್ 1 ಮತ್ತು ಎಚ್ 3 ಎನ್ 2 ವೈರಸ್ ಸೋಂಕುಗಳು ಸಹ ವರದಿಯಾಗಿವೆ. ಈ ಬೆನ್ನಲ್ಲೆ ಇದೀಗ ದೇಶದಲ್ಲಿ ಮೊದಲ ಬಾರಿಗೆ, ಎಚ್ 3 ಎನ್ 2 ವೈರಸ್ ನಿಂದ ಸಾವು ಸಂಭವಿಸಿದ್ದು, ಎಚ್ 3 ಎನ್ 2 ಸೋಂಕಿನಿಂದ (H3N2 influenza virus) ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಮೂಲಗಳ ಪ್ರಕಾರ ತಿಳಿಯಲಾಗಿದೆ.
ಮೃತರಲ್ಲಿ ಒಬ್ಬರು ಹರಿಯಾಣ ಮೂಲದವರಾಗಿದ್ದು, ಒಬ್ಬರು ಕರ್ನಾಟಕದ ಹಾಸನ ಮೂಲದವರಾಗಿದ್ದಾರೆ. ಹಾಸನ ಮೂಲದ ಹಿರೇಗೌಡ (82) ಮಾರ್ಚ್ 1 ರಂದು ಮೃತಪಟ್ಟಿದ್ದಾರೆ. ನಂತರ ಅವರಿಗೆ ಎಚ್ 3 ಎನ್ 2 ವೈರಸ್ ಇರುವುದು ಪತ್ತೆಯಾಯಿತು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಫೆಬ್ರವರಿ 24 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಈ ಹಿಂದೆ ಅಸ್ತಮಾ ಮತ್ತು ಬಿಪಿಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರು.
ಹಿರೇಗೌಡರ ಸಾವು ಎಚ್ 3 ಎನ್ 2 ಸಾವು ಎಂದು ದೃಢಪಟ್ಟ ನಂತರ ಆರೋಗ್ಯ ಇಲಾಖೆ ಹಾಸನದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಿಸಲಾಗಿದೆ . ಹಿರೇ ಗೌಡರ ಕುಟುಂಬಸ್ಥರ ಮೇಲೆಯೂ ಹೆಚ್ಚಿನ ಕಣ್ಗಾವಲು ಇಡಲಾಗಿದೆ . ಆದಾಗ್ಯೂ, ಹರಿಯಾಣದಲ್ಲಿ ಸಾವನ್ನಪ್ಪಿದ ರೋಗಿಯ ವಿವರಗಳು ಲಭ್ಯವಿಲ್ಲ.
ದೇಶದಲ್ಲಿ ಈವರೆಗೆ ಸುಮಾರು 90 ಎಚ್ 3 ಎನ್ 2 ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಹೆಚ್ಚಿನವರು ದೆಹಲಿಯಲ್ಲಿದ್ದಾರೆ.
ಎಚ್3ಎನ್2 ವೈರಸ್ ಸೋಂಕು ಎಂದರೇನು?
ಎಚ್ 3 ಎನ್ 2 ವೈರಸ್ ಸೋಂಕು ಅಥವಾ ಹಾಂಗ್ ಕಾಂಗ್ ಫ್ಲೂ ಎಂದು ಕರೆಯಲ್ಪಡುವ ವೈರಲ್ ಸೋಂಕು ಹೆಚ್ಚಾಗಿ ಕೋವಿಡ್ -19 ಗೆ ಹೋಲುವ ರೋಗಲಕ್ಷಣಗಳನ್ನು ಸೂಚಿಸುತ್ತದೆ.
ಎಚ್3ಎನ್2 ವೈರಸ್ ಲಕ್ಷಣಗಳೇನು?
ನಿರಂತರ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆ ಮತ್ತು ಉಸಿರಾಡುವಾಗ ಸಣ್ಣ ಶಬ್ದವು ಎಚ್ 3 ಎನ್ 2 ನ ಮುಖ್ಯ ಲಕ್ಷಣಗಳಾಗಿವೆ.
ಕೆಲವು ಜನರು ವಾಕರಿಕೆ, ಗಂಟಲು ನೋವು, ದೇಹದ ನೋವು ಮತ್ತು ಅತಿಸಾರದಂತಹ ರೋಗಲಕ್ಷಣಗಳನ್ನು ಸಹ ಅನುಭವಿಸುತ್ತಾರೆ. ಈ ರೋಗಲಕ್ಷಣಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿಯಬಹುದು.
ಇದು ಒಬ್ಬ ರೋಗಿಯಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡಬಹುದಾದ್ದರಿಂದ ಬಹಳ ಜಾಗರೂಕರಾಗಿರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅನಗತ್ಯ ಜನಸಂದಣಿಯನ್ನು ತಪ್ಪಿಸುವುದು ಮತ್ತು ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು.
ಯಾರಿಗೆ ಹೆಚ್ಚಿನ ಅಪಾಯವಿದೆ?
ವೈದ್ಯರ ಪ್ರಕಾರ, ವಯಸ್ಸಾದವರಲ್ಲಿ ಎಚ್ 3 ಎನ್ 2 ವೈರಸ್ ಸೋಂಕು ಹೆಚ್ಚಾಗಿ ಅಪಾಯದಲ್ಲಿದೆ. ಹಾಸನದಲ್ಲಿ ಮೃತಪಟ್ಟ ಗೌಡರ ಪ್ರಕರಣದಂತೆ ಅಸ್ತಮಾ ಮತ್ತು ಬಿಪಿಯಂತಹ ವೈದ್ಯಕೀಯ ಸಮಸ್ಯೆ ಹೊಂದಿರುವವರು ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು, ಮಕ್ಕಳು ಮತ್ತು ಗರ್ಭಿಣಿಯರು ಸಹ ಜಾಗರೂಕರಾಗಿರಬೇಕು.
ನೀವು ಜ್ವರದಿಂದ ಆಸ್ಪತ್ರೆಗೆ ಬಂದಾಗ ವೈದ್ಯರು ಆಂಟಿ-ಬಯೋಟಿಕ್ಸ್ ಔಷಧಿಯನ್ನು ಸೇವಿಸೋದಕ್ಕೆ ಸೂಚಿಸಿದ್ದರೆ, ಈ ಹಂತದಲ್ಲಿ ನೀವು ಅವುಗಳನ್ನು ಅಡೆತಡೆಯಿಲ್ಲದೆ ತೆಗೆದುಕೊಳ್ಳಬೇಕು. ಇದಕ್ಕೆ ಹಿಂಜರಿಯಬೇಡಿ. ಆರೋಗ್ಯದ ಬಗ್ಗೆ ಹೆಚ್ಚಿ ನ ಕಾಳಜಿ ವಹಿಸುವುದು ಮುಖ್ಯವಾಗಿದೆ ಕೊಂಚ ನಿರ್ಲಕ್ಷ್ಯಿಸಿದರು ಅಪಾಯ ತಪ್ಪಿದಲ್ಲ.