No bill Hotel: ಬೆಂಗ್ಳೂರಿನ ಈ ಹೋಟೆಲ್ನಲ್ಲಿ ಬಿಲ್ ಕೊಡದೆ ಹೊಟ್ಟೆ ಬಿರಿಯ ತಿನ್ನಬಹುದು! ತಿಂದು ತೃಪ್ತಿ ಆದ್ರೆ ಹುಂಡಿಗೆ ಹಣ ಹಾಕ್ಬೋದು
No bill Hotel :ಇಂದು ಏನಾದರೂ ಕೊಳ್ಳಲು ಹೋದಾಗ ಆ ವಸ್ತುಗಳನ್ನು ಮುಟ್ಟಿದರೆ ಸಾಕು ಕೈ ಸುಡುವಂತೆ ಮಾಡುತ್ತದೆ ಅದರ ದುಬಾರಿ ಬೆಲೆಗಳು. ಎಲ್ಲವನ್ನೂ ಇಂದು ಹಣದಿಂದಲೇ ಅಳೆದು ತೂಗಲಾಗುತ್ತದೆ. ಅಂತೆಯೇ ಹೋಟೆಲ್ ಹಾಗೂ ಮೆಸ್ ಗಳಲ್ಲಿ ಸಿಗುವ ಊಟವೇನು ಇದಕ್ಕೆ ಹೊರತಾಗಿಲ್ಲ. ಎಲ್ಲೋ ಕೆಲವೆಡೆ ಅತೀ ಕಡಿಮೆ ಬೆಲೆಯ ಹೋಟೆಲ್ಗಳು ಇರೋದನ್ನ ನಾವು ನೋಡ್ತೇವೆ. ಆದರೆ ಇದರ ನಡುವೆ ಬೆಂಗಳೂರಿನಲ್ಲೊಂದು (Bengaluru) ನೋ ಬಿಲ್ (No Bill hotel) ಹೋಟೆಲ್ ಆರಂಭವಾಗಿದೆ. ಇದರ ವಿಶೇಷತೆ ಏನು ಗೊತ್ತಾ?
ಹೌದು, ಬೆಂಗಳೂರಿನ ನಾಗರಬಾವಿಯಲ್ಲಿ (Nagar Bavi) ವಿಶಿಷ್ಟ ಹೋಟೆಲ್ವೊಂದನ್ನು ತೆರೆಯಲಾಗಿದ್ದು, ಇಲ್ಲಿ ಹೊಟ್ಟೆತುಂಬೋ ಅಷ್ಟು ಎಷ್ಟುಬೇಕಾದರೂ ತಿನ್ನ ಬಹುದು. ಆದರೆ ವಿಶೇಷ ಎಂಬಂತೆ ನೀವು ಎಷ್ಟು ಊಟ ಮಾಡಿದರೂ ಇಲ್ಲಿ ಬಿಲ್ ಪಾವತಿಸುವ ಅಗತ್ಯವಿಲ್ಲ! ಅರೆ ಈಗಿನ ಕಾಲದಲ್ಲೂ ಇಂತ ಹೋಟೆಲ್ ಆರಂಭವಾಯ್ತಾ? ಅಂತ ನೀವು ಕೇಳ್ಬೋದು. ಹೌದು ಇದು ಸತ್ಯ.
ನಾಗರಬಾವಿಯ 11ನೇ ಬ್ಲಾಕ್, ಎರಡನೇ ಹಂತದಲ್ಲಿರುವ ‘ನಮ್ಮನೆ ಊಟ’ ಪಕ್ಕದಲ್ಲಿ ‘ಅನ್ನಪೂರ್ಣೇಶ್ವರಿ ಹೋಟೆಲ್’ (Annapoorneshwari Hotel) ತೆರೆಯಲಾಗಿದ್ದು, ಇಲ್ಲಿ ಉಚಿತವಾಗಿ ಊಟ ಸಿಗುತ್ತದೆ. ಅಂದಹಾಗೆ ನಾವಿಲ್ಲಿ ಎಷ್ಟು ಬೇಕೋ ಅಷ್ಟು ಹೊಟ್ಟೆ ತುಂಬಾ ತಿಂದು, ತೃಪ್ತಿಯಾಗಿದ್ದರೆ ಅಲ್ಲಿರುವ ಹುಂಡಿಯಲ್ಲಿ ನಮಗೆ ಸಾಧ್ಯವಾದಷ್ಟು ಹಣವನ್ನು ಹಾಕಬಹುದಾಗಿದೆ. ಹಣ ಹಾಕಲೇಬೇಕೆಂಬ ಷರತ್ತಿಲ್ಲ.
ಇಲ್ಲಿ ಪ್ರತಿನಿತ್ಯ ನಾಟಿ ಸ್ಟೈಲ್ ಮುದ್ದೆ, ವೆಜ್ ಊಟವನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಣಬಡಿಸಲಾಗುತ್ತದೆ. ನಾಟಿ ಸ್ಟೈಲ್ ಮುದ್ದೆ, ಚಪಾತಿ, ಪಲ್ಯ, ಸಾರು, ಅನ್ನ, ಸ್ವೀಟ್ ಈ ಹೋಟೆಲಿನ ಮೆನು. ಊಟದ ನಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರತಿದಿನ ನೂರಾರು ಕೂಲಿ ಕಾರ್ಮಿಕರು, ಬಡವರು ಊಟ ಮಾಡುತ್ತಿದ್ದಾರೆ. ಈ ರೀತಿಯ ಹೋಟೆಲ್ಗಳನ್ನು ನಾನಾ ಕಡೆ ತೆರೆಯುವ ಪ್ಲಾನ್ ಇದೆ ಎಂದು ಹೋಟೆಲ್ ಮಾಲಿಕ ಕಿರಣ್ ಗೌಡ ತಿಳಿಸಿದ್ದಾರೆ. ಇವರ ಈ ಉತ್ತಮ ಕಾರ್ಯಕ್ಕೆ ಅನೇಕ ಜನ ಸ್ವಯಂಪ್ರೇರಿತರಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ.
ಈ ಹೋಟೆಲ್ ಅನ್ನು ಬಿಗ್ ಬಾಸ್ (Bigg Boss) ಖ್ಯಾತಿಯ ಜಿಮ್ ರವಿ (Gym Ravi) ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಎಲ್ಲಾ ಸೆಲೆಬ್ರಿಟಿಗಳನ್ನು ಈ ಹೋಟೆಲ್ಗೆ ಕರೆಯುತ್ತೇವೆ ಎಂದರು.
ಡಿ.ಹೆಚ್.ಕಿರಣ್ ಗೌಡ (D.H.Kiran Gowda) ಹಾಗೂ ಸ್ನೇಹಿತರ ತಂಡ ಸೇರಿಕೊಂಡು ಈ ಹೋಟೆಲನ್ನು ಆರಂಭಿಸಿದ್ದಾರೆ. ಈ ಪರಿಕಲ್ಪನೆಯನ್ನು ಅವರು ಸಿಂಗಾಪುರದ (Singapore) ರೆಸ್ಟೋರೆಂಟ್ನಿಂದ ಅನುಕರಿಸಿದ್ದಾರೆ. ಇದರಿಂದಲೇ ಸ್ಪೂರ್ತಿಯನ್ನು ಪಡೆದು ಈ ಹೋಟೆಲನ್ನು ತೆರೆಯಲಾಗಿದೆ.