Cryptocurrency: ಅಕ್ರಮ ಹಣ ವರ್ಗಾವಣೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ! ಇನ್ನು ಕ್ರಿಪ್ಟೋ ವ್ಯವಹಾರಗಳ ಮೇಲೆ ನಿಗಾವಹಿಸಲಿದೆ ಕೇಂದ್ರ!

Cryptocurrency :ಭಾರತದ ಆರ್ಥಿಕ ವಿಚಾರದಲ್ಲಿ ಕ್ರಿಪ್ಟೋ ಕರೆನ್ಸಿ(Cryptocurrency) ಗಳ ವಿಚಾರ ಆಗಾಗ ಚರ್ಚೆಗೆ ಬರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೂಡ ಮೊದಲಿಂದಲೂ ಇದರ ಬಳಕೆಯನ್ನು ವಿರೋಧಿಸುತ್ತಾ ಬಂದಿದ್ದು, ಈ ಕ್ರಿಪ್ಟೋ ಕರೆನ್ಸಿಯನ್ನು ಜೂಜಿಗೆ ಸಮ ಎಂದು ಹೇಳಿತ್ತು. ಆದರೀಗ ಕೇಂದ್ರ ಸರ್ಕಾರ(Centrel Government)ವು ಕೂಡ ಈ ಕುರಿತು ಮಹತ್ವದ ನಿರ್ಧಾರ ತೆಳೆದಿದ್ದು, ಕ್ರಿಪ್ಟೋ ಕರೆನ್ಸಿ ಹಾಗೂ ವರ್ಚುವಲ್‌ ಆಸ್ತಿಯ ವ್ಯವಹಾರಗಳನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವ್ಯಾಪ್ತಿಗೆ ತಂದಿದೆ.

ಈ ಸಂಬಂಧ ಕೇಂದ್ರ ವಿತ್ತ ಸಚಿವಾಲಯ ಬುಧವಾರ ಅಧಿಸೂಚನೆ ಪ್ರಕಟಿಸಿದೆ. ಇದರೊಂದಿಗೆ ದೇಶ-ವಿದೇಶಗಳ ಡಿಜಿಟಲ್‌ ಆಸ್ತಿಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸುವಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ. ಅಧಿಸೂಚನೆಯಲ್ಲಿ, ‘ವರ್ಚುವಲ್‌ ಡಿಜಿಟಲ್‌ ಸ್ವತ್ತುಗಳನ್ನು ಒಳಗೊಂಡ ವಹಿವಾಟುಗಳಲ್ಲಿ ಪಾಲ್ಗೊಳ್ಳುವಿಕೆಯು ಮನಿ ಲಾಂಡರಿಂಗ್‌ ತಡೆ ಕಾಯ್ದೆ (Prevention of Money Laundering Act) (ಪಿಎಂಎಲ್‌ಎ) (PMLA) ಅಧೀನಕ್ಕೆ ಒಳಪಟ್ಟಿರುತ್ತದೆ.

ಇನ್ನು ಈ ಅಧಿಸೂಚನೆಯಲ್ಲಿ ‘ಡಿಜಿಟಲ್‌ ಕರೆನ್ಸಿ (Digital Currency) ಬಿಡುಗಡೆ ಮಾಡುವವರ ಆಫರ್‌ಗಳು ಮತ್ತು ವರ್ಚುವಲ್ ಡಿಜಿಟಲ್‌ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ ಹಣಕಾಸು ಸೇವೆಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ವರ್ಚುವಲ್‌ ಡಿಜಿಟಲ್‌ ಆಸ್ತಿಗಳ ವಿನಿಮಯ ಹಾಗೂ ವರ್ಗಾವಣೆ ಕೂಡ ಪಿಎಂಎಲ್‌ಎ ಕಾಯ್ದೆಯಡಿ ಬರುತ್ತದೆ’ ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನು ಕ್ರಿಪ್ಟೋಕರೆನ್ಸಿಗಳ (Cryptocurrency) ಕಾನೂನು ಮತ್ತು ನಿಬಂಧನೆಗಳನ್ನು ಭಾರತವು (India) ಇನ್ನೂ ಅಂತಿಮಗೊಳಿಸಿಲ್ಲ, ಆದರೆ ರಿಸರ್ವ್‌ ಬ್ಯಾಂಕ್‌ (Reserve Bank) , ಅವುಗಳ ಬಳಕೆಯ ವಿರುದ್ಧ ಹಲವು ಬಾರಿ ಎಚ್ಚರಿಕೆ ನೀಡಿದೆ. ಕ್ರಿಪ್ಟೋಕರೆನ್ಸಿಗಳು ನಕಲಿ ಯೋಜನೆಗೆ ಹೋಲುವುದರಿಂದ ಅವುಗಳನ್ನು ನಿಷೇಧಿಸಬೇಕು ಎಂದು ರಿಸರ್ವ್‌ ಬ್ಯಾಂಕ್‌ ಹಲವು ಬಾರಿ ಒತ್ತಾಯಿಸಿದೆ. ಅದರ ನಡುವೆಯೇ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕ್ರಿಪ್ಟೋವನ್ನು ತರಲಾಗಿದೆ.

ಕ್ರಿಪ್ಟೋ ಕರೆನ್ಸಿ ಎಂದರೇನು?
ಕ್ರಿಪ್ಟೊಕರೆನ್ಸಿ ಎಂದರೆ ಕಲ್ಪಿತ (Virtual) ಜಗತ್ತಿನಲ್ಲಿ ರೂಪುಗೊಂಡು ಎಲೆಕ್ಟ್ರಾನಿಕ್ ರೂಪದಲ್ಲಿ ನಿರ್ವಹಿಸಲಾಗುವ ನಗದು (ಕರೆನ್ಸಿ) ರೂಪ. ಬಿಟ್‌ಕಾಯಿನ್‌ ಎನ್ನುವುದು ಇಲ್ಲಿಯವರೆಗೆ ಜಗತ್ತಿಗೆ ಅತಿ ಹೆಚ್ಚು ಪರಿಚಿತವಾಗಿರುವ ಕ್ರಿಪ್ಟೋಕರೆನ್ಸಿಯಾಗಿದ್ದು ಇದಕ್ಕಾಗಿ ಬ್ಲಾಕ್‌ಚೈನ್‌ (blockchain) ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಕ್ರಿಪ್ಟೋಕರೆನ್ಸಿ ವ್ಯವಹಾರಗಳನ್ನು ಆಯಾ ಕರೆನ್ಸಿಗೆ ಸಂಬಂಧಿಸಿದ ಬ್ಲಾಕ್‌ಚೈನ್‌ ಲೆಡ್ಜರ್‌ಗಳಲ್ಲಿ (ಕಂಪ್ಯೂಟರ್ ದಾಖಲಾತಿಯ ವಿಶಿಷ್ಟ ಕ್ರಮ) ದಾಖಲಿಸಲಾಗುತ್ತದೆ. ಈ ಬ್ಲಾಕ್‌ಚೈನ್‌ ತಂತ್ರಜ್ಞಾನದಲ್ಲಿ ಒಂದು ನಿರ್ದಿಷ್ಟ ಕೇಂದ್ರ ಅಥವಾ ಅನುಮತಿ ನೀಡಬಲ್ಲ ಆಧಿಕಾರಿಕ ಸಂಸ್ಥೆಯ ನಿಯಂತ್ರಣ ಕೇಂದ್ರದ ಅವಶ್ಯಕತೆಯಿರುವುದಿಲ್ಲ.

ಬಿಟ್‌ಕಾಯಿನ್‌ ಎನ್ನುವುದು ಗೂಢಲಿಪಿ (ಕ್ರಿಪ್ಟೋಗ್ರಫಿ) ತಂತ್ರಜ್ಞಾನವನ್ನು ಉಪಯೋಗಿಸುವ ಒಂದು ಡಿಜಿಟಲ್‌ ನಗದು ವ್ಯವಸ್ಥೆಯಾಗಿದೆ. ಹೆಸರೇ ಸೂಚಿಸುವಂತೆ ಇದೊಂದು ಗೂಢ ವ್ಯವಸ್ಥೆಯಾಗಿದ್ದು ಸರಳ ಮಾಹಿತಿಗಳನ್ನು ಸಂಕೀರ್ಣ ಮಾಹಿತಿಯನ್ನಾಗಿ ಪರಿವರ್ತಿಸಿ ಉದ್ದೇಶಿತ ವ್ಯಕ್ತಿಗೆ ಮಾತ್ರ ಇದರ ಅರ್ಥ ತಿಳಿಯುವಂತೆ ಪರಿವರ್ತಿಸಲಾಗಿರುತ್ತದೆ. ಈ ಕ್ರಿಪ್ಟೋಕರೆನ್ಸಿ ವ್ಯವಸ್ಥೆಯು ಸಾಮಾನ್ಯ ಆರ್ಥಿಕ ಹಾಗೂ ವ್ಯಾವಹಾರಿಕ ಪ್ರಪಂಚಕ್ಕೆ ಸಂಭವನೀಯ ಸಮಾನಾಂತರ ಆರ್ಥಿಕತೆಯ ಸವಾಲನ್ನು ಒಡ್ಡಿರುವುದರ ಜೊತೆಗೆ ಕೆಲವು ಸರ್ಕಾರಗಳಿಗೆ ಇವುಗಳನ್ನು ನಿಯಂತ್ರಿಸುವ ತಲೆನೋವನ್ನೂ ತಂದಿಟ್ಟಿದೆ.

ಸುಮಾರು 80 ಲಕ್ಷ ಭಾರತೀಯ ಕ್ರಿಪ್ಟೊಕರೆನ್ಸಿಗಳಲ್ಲಿ 140 ಕೋಟಿ (1.4 ಬಿಲಿಯನ್‌) ಅಮೆರಿಕನ್‌ ಡಾಲರ್‌ಗಳಷ್ಟು ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಕೆಲವು ದೇಶಗಳು ಕ್ರಿಪ್ಟೊಕರೆನ್ಸಿಗೆ ಶಾಸನಬದ್ಧ ಅಂಗೀಕಾರ ನೀಡಿದ್ದರೂ ಭಾರತ ದೇಶವು ಕ್ರಿಪ್ಟೊಕರೆನ್ಸಿಗೆ ಮಾನ್ಯತೆ ನೀಡಿಲ್ಲ. ಎಲ್‌-ಸಾಲ್ವಡೊರ್ ದೇಶವು ಕ್ರಿಪ್ಟೋಕರೆನ್ಸಿಗಳಿಗೆ ಅಧಿಕೃತವಾಗಿ ಶಾಸನಬದ್ಧ ನಾಣ್ಯಗಳೆಂದು ಮಾನ್ಯತೆ ನೀಡಿದ ಪ್ರಥಮ ಹಾಗೂ ಏಕಮಾತ್ರ ದೇಶವಾಗಿದೆ.

Leave A Reply

Your email address will not be published.