Baby Elephant: ಕಾಡಿಗೆ ಮೇಯಲು ಹೋದ ಹಸುಗಳೊಂದಿಗೆ ನಾಡಿಗೆ ಬಂತು ‘ಆನೆ ಮರಿ’! ಅಮ್ಮ ಅಮ್ಮ ಅನ್ನುತ್ತ ಸೀದಾ ಕೊಟ್ಟಿಗೆಗೇ ನುಗ್ಗಿಬಿಡ್ತು ಪುಟ್ಟ ಕಂದ!
Baby elephant :ಹಸು(Cow)ಗಳು ಎಂದಿನಂತೆ ತಮ್ಮ ದೈನಂದಿನ ಕಾರ್ಯದನುಸಾರ ಬೆಳಗ್ಗೆ ಕಾಡಿಗೆ ಮೇಯೋದಕ್ಕೆ ಹೋಗಿದ್ದವು. ನಂತರ ಸಂಜೆಯಾದೊಡನೆ ವಾಪಸ್ ತಮ್ಮ ಕೊಟ್ಟಿಗೆಗೆ ಬಂದಿವೆ. ಆದ್ರೆ ಈ ಬಾರಿ ಮಾತ್ರ ಈ ಹಸುಗಳು ತಮ್ಮೊಂದಿಗೆ ವಿಶೇಷ ಅತಿಥಿಯೊಬ್ಬರನ್ನು ಕರೆದಕೊಂಡು ಬಂದಿದ್ದಾವೆ. ಆ ಪುಟ್ಟ ಅತಿಥಿ ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದು ಹಸುಗಳನ್ನೇ ಅಮ್ಮ ಅದುಕೊಂಡು, ಅವುಗಳ ಜೊತೆಯೇ ಕೊಟ್ಟಿಗೆಗೆ ಬಂದಿದೆ! ಹಾಗಾದ್ರೆ ಆ ಹೊಸ ಅತಿಥಿಯಾರು? ಅದ್ಯಾಕೆ ಇವರೊಟ್ಟಿಗೆ ಬಂತು ಎಂಬುದಕ್ಕೆಲ್ಲ ಇಲ್ಲಿದೆ ನೋಡಿ ಉತ್ತರ.
ಹೌದು, ರಾಮನಗರ(Ramanagara) ಜಿಲ್ಲೆಯ ಕನಕಪುರ ತಾಲೂಕಿನ ಕೊಂಡನಗುಂದಿಗೆ ಗ್ರಾಮದಲ್ಲಿ ಆನೆ ಮರಿ(Baby elephant) ಯೊಂದು ಕಾಣಿಸಿಕೊಂಡಿದೆ. ಇದು ನಾಡಿಗೆ ಬಂದದ್ದೇ ಒಂದು ವಿಶೇಷ ಅನ್ಬೋದು. ತಾಯಿ ಅಗಲಿಕೆಯಿಂದ ಅನಾಥವಾಗಿದ್ದ ಆನೆ ಮರಿ, ಕಾಡಿಗೆ ಮೇಯಲು ಹೋಗಿದ್ದ ದನಗಳ ಹಿಂಡಿನೊಡನೆ ಸೇರಿಕೊಂಡು, ಬೆರೆತು, ಇವೇ ನನ್ನ ಪೋಷಕರೆಂದು ಬಗೆದು, ಅವುಗಳೊಂದಿಗೆ ನಾಡಿನತ್ತ ಬಂದಿದೆ. ಅಲ್ಲದೆ ಕೊಟ್ಟಿಗೆಯನ್ನೂ ಹೊಕ್ಕಿದೆ.
ಸುಮಾರು ಒಂದೂವರೆ ತಿಂಗಳ ಪ್ರಾಯದ ಮರಿ ಇದಾಗಿದೆ. ತಾಯಿ ಸಾವಿನಿಂದ ವಿಚಲಿತಗೊಂಡ ಮರಿಯು ಒಂದೆರಡು ದಿನ ಕಾಡಿನಲ್ಲೇ ಕಾಲ ಕಳೆದಿದೆ. ಕನಕಪುರ(Kanakapura) ತಾಲ್ಲೂಕಿನ ಸೋಲಿಗೆರೆ(Soligere), ಪೋಡನಗುಂದಿ(Podanagundi) ಭಾಗದ ಜನರು ಕಾಡಿಗೆ ದನಗಳನ್ನು ಮೇಯಲು ಬಿಟ್ಟಿದ್ದರು. ಈ ದನಗಳೆಲ್ಲ ಕಾಡಿಗೆ ಮೇಯಲು ಹೋದಾಗ ಈ ಆನೆಮರಿಯು ದನಗಳ ಜೊತೆ ಊರಿಗೆ ಬಂದಿದೆ.
ಕಾವೇರಿ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತೆ ಇರುವ ಕನಕಪುರ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಓಡಾಟ ಸಾಮಾನ್ಯವಾಗಿದೆ. ಹೀಗೆ ಗುಂಪಿನಲ್ಲಿ ಓಡಾಡಿಕೊಂಡಿದ್ದ ಆನೆಗಳ ಪೈಕಿ ಒಂದು ಹೆಣ್ಣಾನೆ ಈಚೆಗಷ್ಟೇ ಮರಿಯೊಂದಕ್ಕೆ ಜನ್ಮ ನೀಡಿತ್ತು. ನಂತರದಲ್ಲಿ ಆ ಆನೆಯು ಕುದುರೆ ದಾರಿ ಎಂಬಲ್ಲಿ ಕಂದಕಕ್ಕೆ ಬಿದ್ದು ಮೃತಪಟ್ಟಿತ್ತು. ಈ ಆನೆ ಹಾಕಿದ ಮರಿಯೇ ಇದೀಗ ನಾಡಿಗೆ ಬಂದಂತಹ ಆನೆ ಮರಿಯಾಗಿದೆ.
ಆನೆ ಮರಿಯನ್ನು ನೋಡಿದ ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ(Forrest Department) ಸಿಬ್ಬಂದಿಗೆ ಈ ವಿಷಯ ತಿಳಿಸಿದ್ದಾರೆ, ಅವರು ಬಂದು ಮರಿಯನ್ನು ರಕ್ಷಣೆ ಮಾಡಿದ್ದಾರೆ. ಬೇರೆ ಆನೆಗಳ ಗುಂಪಿನ ಜೊತೆ ಬಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇತರೆ ಆನೆಗಳು ಈ ಮರಿಯನ್ನು ಜೊತೆಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಸದ್ಯ ಇದನ್ನು ಭೂಹಳ್ಳಿ ಕ್ಯಾಂಪ್‌ನಲ್ಲಿ ತಾವೇ ಪಾಲನೆ ಮಾಡುತ್ತಿದ್ದಾರೆ. ಸದ್ಯ ಮರಿಯನ್ನು ಭೂಹಳ್ಳಿ ಪಶು ವೈದ್ಯಾಧಿಕಾರಿ ಗಿರೀಶ್ ನೇತೃತ್ವದಲ್ಲಿ ಪಾಲನೆ ಮಾಡಲಾಗುತ್ತಿದೆ. ಮರಿಯು ಹಾಲು ಕುಡಿಯುತ್ತಿದ್ದು, ಆರೋಗ್ಯದಿಂದ ಇದೆ. ಡಿಸಿಎಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದು ವಾರದಲ್ಲಿ ಇದನ್ನು ಮುತ್ತತ್ತಿ(Muttatti) ಬಳಿಯ ಭೀಮೇಶ್ವರಿ ಕ್ಯಾಂಪಿಗೆ ಬಿಡುತ್ತೇವೆ’ ಎಂದು ಕಾವೇರಿ ವನ್ಯಜೀವಿಧಾಮದ ಸಂಗಮ ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.