ISRO: ಇಂದು ಫೆಸಿಫಿಕ್ ಸಾಗರದಲ್ಲಾಗಲಿದೆ ಸ್ಯಾಟಲೈಟ್ ಪತನ! ಉಪಗ್ರಹ ಬೀಳಿಸೋ ಭಾರೀ ಸಾಹಸಕ್ಕೆ ಮುಂದಾದ ಇಸ್ರೋ!
ISRO :ಇಂದು ಪೆಸಿಫಿಕ್ ಮಹಾಸಾಗರ(Pacific Ocean)ದಲ್ಲಿ ಅತ್ಯಂತ ಸವಾಲಿನ ಪ್ರಯೋಗವನ್ನೊಂದು ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ- ISRO) ಮುಂದಾಗಿದ್ದು ಭಾರತೀಯರಲ್ಲದೆ, ಇಡೀ ವಿಶ್ವವೇ ಕುತೂಹಲದಿಂದ ಈ ಮಹಾನ್ ಕಾರ್ಯದ ಯಶಸ್ಸನ್ನು ನೋಡಲು ಕಾತರದಿಂದ ಕಾದಿದೆ. ಹಾಗಾದ್ರೆ ಇಸ್ರೋ ಕೈಗೊಂಡ ಆ ಸಾಹಸದ ಕೆಲಸವಾದರೂ ಏನು ಗೊತ್ತಾ?
ಹೌದು, ಅಂತರಿಕ್ಷದಲ್ಲಿ ನಿರುಪಯುಕ್ತವಾಗಿರುವ ಉಪಗ್ರಹ(Satellite)ವೊಂದನ್ನು ಮರಳಿ ಭೂ ವಾತಾವರಣಕ್ಕೆ ತಂದು ಸಾಗರದಲ್ಲಿ ಬೀಳಿಸುವ ಮಹಾನ್ ಸಾಹಸ ಕಾರ್ಯಕ್ಕೆ ಇಸ್ರೋ ಸಾಕ್ಷಿಯಾಗಲಿದೆ. ಇಂದು (ಮಂಗಳವಾರ) ಸಂಜೆ 4.30ರಿಂದ ರಾತ್ರಿ 7.30ರವರೆಗೆ ಈ ಕಾರ್ಯಾಚರಣೆಯನ್ನು ನಡೆಸಲು ಇಸ್ರೋ ಉದ್ದೇಶಿಸಿದ್ದು, ಇಡೀ ವಿಶ್ವದ ಗಮನ ಇಸ್ರೋ ಹಾಗೂ ಫೆಸಿಫಿಕ್ ಸಾಗರದತ್ತ ನಟ್ಟಿದೆ.
2011ರ ಅಕ್ಟೋಬರ್ 12ರಂದು ಫ್ರಾನ್ಸ್ನ ಬಾಹ್ಯಾಕಾಶ ಸಂಸ್ಥೆ ಸಿಎನ್ಇಎಸ್ (CNES) ಜತೆಗೂಡಿ ಇಸ್ರೋ (ISRO) ಮೇಘ ಟ್ರಾಪಿಕ್ಸ್-1 (Megha-Tropiques-1) (MT1) ಎಂಬ ಕೆಳ ಭೂಕಕ್ಷೆ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಇದು ಉಷ್ಣ ವಲಯದ ವಾತಾವರಣ ಹಾಗೂ ಹವಾಮಾನ ಅಧ್ಯಯನ ನಡೆಸಲು ನೆರವಾಗುತಲಿತ್ತು. ಆಗ ಅದರ ಜೀವಿತಾವಧಿ ಕೇವಲ ಮೂರು ವರ್ಷಗಳಾಗಿತ್ತು. ಆದರೆ ಈ ಉಪಗ್ರಹ (Satellite) ಒಂದು ದಶಕ ಸೇವೆ ಸಲ್ಲಿಸಿದೆ. ಸದ್ಯ ನಿರುಪಯುಕ್ತವಾಗಿರುವ ಈ 1 ಟನ್ ತೂಕದ ಉಪಗ್ರಹವನ್ನು ಮರಳಿ ಭೂಮಿಗೆ ತರಲು ಇಸ್ರೋ ತಯಾರಾಗಿದೆ.
ಇನ್ನು ಈ ಉಪಗ್ರಹದಲ್ಲಿ 125 ಕೆಜಿ ಇಂಧನವಿದೆ. ಉಪಗ್ರಹ ಮರಳಿ ಭೂಮಿಗೆ ಬರುವಾಗ ಏನಾದರೂ ಹೆಚ್ಚು ಕಡಿಮೆಯಾದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಪೆಸಿಫಿಕ್ ಸಾಗರದಲ್ಲಿ (Pacific Ocean) ಜನವಸತಿ ಇಲ್ಲದ ಕಡೆ ಈ ಉಪಗ್ರಹವನ್ನು ಬೀಳಿಸಲು ಇಸ್ರೋ ಸಕಲ ಸಿದ್ಧತೆಗಳನ್ನೂ ಕೈಗೊಂಡಿದೆ. ಉಪಗ್ರಹದಲ್ಲಿರುವ ಇಂಧನವು ಅದನ್ನು ಭೂ ವಾತಾವರಣಕ್ಕೆ ಮರುಪ್ರವೇಶ ಮಾಡಿಸಿ, ನಿಯಂತ್ರಿತ ರೀತಿಯಲ್ಲಿ ಉದ್ದೇಶಿತ ಸ್ಥಳದಲ್ಲಿ ಬೀಳಿಸಲು ಸಹಕಾರಿಯಾಗಲಿದೆ ಎಂದು ಮಾಹಿತಿ ಲಭ್ಯವಿದೆ.