ಮಹಿಳೆ ಆರ್ಥಿಕವಾಗಿ ಸದೃಢ ವಾಗಿರಬೇಕು ಅನ್ನೋದು ಯಾಕೆ ಗೊತ್ತಾ?

Women: ಹೆಣ್ಣು (women)ಎಂದರೆ ಸಾಕು ಆಕೆ ನಾಲ್ಕು ಗೋಡೆಗಳ ಒಳಗಷ್ಟೇ ಸೀಮಿತ ಎನ್ನುವ ಕಾಲ ಒಂದಿತ್ತು. ಆದರೆ, ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂದು ನಿರೂಪಿಸಿ ಉನ್ನತ ಮಟ್ಟಕ್ಕೆ ಏರಿದ ಮಹಿಳಾ ಮಣಿಗಳನ್ನು ನಾವಿಂದು ನೋಡುತ್ತಿದ್ದೇವೆ. ಸಮಾನತೆ, ಸ್ವಾತಂತ್ರ್ಯ ಎಂದು ಹೇಳಿದರು ಕೂಡ ಪುರುಷರ ಜೊತೆಗೆ ಮಹಿಳೆಯರ ನಡುವೆ ಅಸಮಾನತೆ ಇಂದಿಗೂ ನಡೆಯುತ್ತಿದೆ. ಅಷ್ಟೇ ಏಕೆ ಮಹಿಳೆಯ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ ಎಂಬುದಕ್ಕೆ ಜಗತ್ತನ್ನು ಬೆಚ್ಚಿ ಬೀಳಿಸಿದ್ದ ದೆಹಲಿ ಶ್ರದ್ಧಾ ಹತ್ಯೆಯೇ ಜೀವಂತ ನಿದರ್ಶನ.

ಇನ್ನೇನು ಕೆಲ ದಿನಗಳಲ್ಲೇ ಮಹಿಳಾ ದಿನಾಚರಣೆ ಎಂಬ ಬೋರ್ಡ್ ಅಡಿಯಲ್ಲಿ ಮಾರ್ಚ್ 8 ರಂದು ಒಂದು ದಿನದ ಮಟ್ಟಿಗೆ ಎಲ್ಲೆಡೆ ಮಹಿಳೆಯನ್ನು ಹೊಗಳಿ ಕೊಂಡಾಡಿ ಭಾಷಣ ಮಾಡುವ ಪ್ರಹಸನ ನಡೆದು ಮಹಿಳಾ ದಿನಾಚರಣೆ( women’s day)ಒಂದು ದಿನದ ಮಟ್ಟಿಗೆ ಸೀಮಿತವಾಗುತ್ತಿರುವುದಂತು ವಿಪರ್ಯಾಸ. ಹೆಣ್ಣಿನ ಬಗ್ಗೆ ಪ್ರವಚನ ಹೇಳೋ ಎಷ್ಟೋ ಮಂದಿ ಹೆಣ್ಣು ಮಗು ಹುಟ್ಟಿದರೆ ಹೊರೆ ಎಂಬಂತೆ ನೋಡುವುದು ಇದೆ. ಕಾಲ ಎಷ್ಟೇ ಬದಲಾದರೂ ಕೂಡ ಹೆಣ್ಣಿನ ಮೇಲಿನ ಶೋಷಣೆ ಕಡಿಮೆಯಾಗಿಲ್ಲ.

ಹೆಣ್ಣು ಹೆತ್ತವರು ಆಕೆಗೊಂದು ಒಳ್ಳೆಯ ಸಂಬಂಧ ಕೂಡಿ ಬಂದರೆ ಸಾಕು ಎಂದುಕೊಂಡು ಮದುವೆ ಮಾಡಿಸಿ ತಮ್ಮ ಜವಾಬ್ದಾರಿಯ ಹೊರೆಯನ್ನು ಇಳಿಸಿಕೊಳ್ಳುತ್ತಾರೆ. ಒಂದು ವೇಳೆ ಶಿಕ್ಷಣ ಮುಗಿಸಿ ಒಂದು ಒಳ್ಳೆಯ ನೌಕರಿಯಲ್ಲಿ ಯುವತಿ ಯಿದ್ದರೆ ಪರವಾಗಿಲ್ಲ ಆದರೆ, ಓದಿಗೆ ವಿರಾಮ ಹೇಳಿ ಬಾಲ್ಯ ವಿವಾಹವೆಲ್ಲ ಆದರೆ ಕಥೆ ಮುಗಿಯಿತು. ಆಕೆ ಮನೆ ಸಂಸಾರ ಎಂದುಕೊಂಡು ಯಂತ್ರದಂತೆ ಹಗಲಿರುಳು ದುಡಿಯಬೇಕಾಗುತ್ತದೆ. ಹೀಗಾಗಿ, ಮೊದಲು ನಿಮ್ಮ ಮಕ್ಕಳನ್ನು ಆರ್ಥಿಕವಾಗಿ ಸದೃಢರಾಗುವಂತೆ ಪ್ರೇರೇಪಿಸುವುದು ಉತ್ತಮ.

ಒಂದು ಹೆಣ್ಣು ಮದುವೆ ಎಂಬ ಬಂಧಕ್ಕೆ ಕಟ್ಟು ಬಿದ್ದ ಮೇಲೆ ಏನೇ ಸಮಸ್ಯೆ ಬಂದರೂ ತವರಿನವರಿಗೆ ತಿಳಿದರೆ ಬೇಸರವಾಗುತ್ತದೆ ಎಂದು ಆದಷ್ಟು ತನ್ನಲ್ಲೇ ನೋವನ್ನು ನುಂಗಿ ಜೀವನವೆಂಬ ಬಂಡಿಯನ್ನು ಸಂಭಾಲಿಸುತ್ತಾಳೆ. ಆದರೆ ಮದುವೆಯಾದ ಮೇಲೆ ಒಂದು ವೇಳೆ ಗಂಡನ ನಡುವೆ ಬಿರುಕು ಮೂಡಿ ವಿಚ್ಛೇಧನವಾದರೆ, ಆಗ ಆಕೆಯ ಜೀವನ ನಿಂತ ನೀರಿನಂತೆ ಆಗಿ ಬಿಡಬಹುದು. ಆಗ ಆಕೆ ಆರ್ಥಿಕವಾಗಿ ತನ್ನ ಕಾಲ ಮೇಲೆ ತಾನೇ ನಿಲ್ಲುವಂತೆ ಇದ್ದರೆ ಯಾರಿಗೋ ಅವಲಂಬಿತರಾಗಬೇಕಾಗಿಲ್ಲ. ಮೊದಲು ಆರ್ಥಿಕವಾಗಿ ಸದೃಢಳಾಗಬೇಕು, ಆಗ ಎಂಥದ್ದೇ ಸಮಸ್ಯೆಯಾದರೂ ಎದುರಿಸಲು ಸಾಧ್ಯವಾಗುತ್ತದೆ.

ನಾಳೆಯ ಪರಿಸ್ಥಿತಿ ಹೇಗಿರುತ್ತೆ ಎಂದು ಯಾರು ಕೂಡ ಊಹಿಸಲು ಸಾಧ್ಯವಿಲ್ಲ. ಇಂದು ಕೋಟ್ಯಾಧಿಪತಿ ಆಗಿದ್ದವನು ನಾಳೆ ಒಂದು ಹೊತ್ತು ಊಟಕ್ಕು ಪರದಾಡಬಹುದು.ಇಲ್ಲವೇ ಇಂದು ಸಾಮಾನ್ಯ ಕೆಲ್ಸ ಮಾಡುತ್ತಿದವನು ನಾಳೆ ಕೋಟಿಗಟ್ಟಲೆ ಹಣ ಮಾಡುವ ಬ್ಯುಸಿನೆಸ್ ಮಾಡಬಹುದು. ಒಂದು ವೇಳೆಯುವಕ ಒಳ್ಳೆ ನೌಕರಿಯಲ್ಲಿದ್ದಾನೆ ಎಂದು ಮನೆಯವರು ಹೆಣ್ಣಿಗೆ ಮದುವೆ ಮಾಡಿಸಿಬಿಡುತ್ತಾರೆ. ಮದುವೆಯಾದ ಮಹಿಳೆಗೆ ಎರಡು ಮಕ್ಕಳು ಕೂಡ ಆಗಿ ಅವರು ಓದು, ಶಾಲೆ ಎಂದು ನಿರತರಾಗಿದ್ದು ಒಮ್ಮೆ ಇದ್ದಕ್ಕಿಂದ್ದಂತೆ ಗಂಡ ಅಸುನೀಗಿದರೆ ಆಗ ಮಹಿಳೆ ಓದು ಬರಹ ಗೊತ್ತಿದ್ದರೆ ಏನೋ ಒಂದು ಕೆಲ್ಸ ಗಿಟ್ಟಿಸಿಕೊಳ್ಳಬಹುದು. ಇಲ್ಲದೇ ಹೋದರೆ ಮುಂದಿನ ಭವಿಷ್ಯದ ಯೋಚನೆಯಲ್ಲಿ ಅಳುತ್ತಾ ದಿನ ದೂಡುತ್ತ ಮಕ್ಕಳ ಓದಿಗೆ ವಿರಾಮ ಹೇಳಿ ಪೋಷಕರನ್ನೋ ಇಲ್ಲವೇ ಅತ್ತೆ ಮನೆಯವರಿಗೆ ಅವಲಂಬಿತರಾಗಿ ಅವಮಾನ, ಹೀಯಾಳಿಸುವ ಮಾತು ಕೇಳುತ್ತ ಇರಬೇಕಾಗುತ್ತದೆ.

ಹಾಗೆಂದು ಆಕೆಗೆ ಓದು ಬರಹ ಗೊತ್ತಿಲ್ಲ ಎಂದಾದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವೆ ಇಲ್ಲ ಎಂದಲ್ಲ. ಯಾವುದಾದರೂ ಸಣ್ಣ ಪುಟ್ಟ ನೌಕರಿಯಾದರು ಸಾಕು. ಆಕೆ ಯಾವುದರಲ್ಲಿ ನಿಷ್ಣಾತಳು ಎಂದು ನೋಡಿಕೊಂಡು ಆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದು. ಆದರೆ, ಮಹಿಳೆ ಸ್ವಾವಲಂಬಿಯಾಗಿ ಆರ್ಥಿಕವಾಗಿ ಸದೃಢರಾದರೆ ಅಂದರೆ ಅಡುಗೆ, ಕಸೂತಿ, ಇಲ್ಲವೇ ಮಹಿಳೆ ಶಿಕ್ಷಣ ಪಡೆದಿದ್ದರೆ ಕಂಪೆನಿ, ಇಲ್ಲವೇ ಯಾವುದಾದರೂ ನೌಕರಿ ಪಡೆಯುವ ಮೂಲಕ ಜೀವನವನ್ನು ರೂಪಿಸಿಕೊಳ್ಳಬಹುದು. ಅದಕ್ಕಾಗಿ ಪ್ರತಿ ಪೋಷಕರು ಬಾಲ್ಯದಿಂದಲೇ ಹೆಣ್ಣು ಮಕ್ಕಳು ಮತ್ತೊಬ್ಬರಿಗೆ ಅವಲಂಬಿತರಾಗದೆ ತಮ್ಮ ಕಾಲ ಮೇಲೆ ತಾವು ನಿಲ್ಲಲು ಬೆಂಬಲ ನೀಡಬೇಕು. ಒಂದು ವೇಳೆ, ಆಕೆ ಚೆನ್ನಾಗಿ ಅಡುಗೆ ಮಾಡಬಲ್ಲಳು ಎಂದಾದರೆ ಸಣ್ಣ ಹೋಟೆಲ್ ತೆರೆಯಬಹುದು. ಇಲ್ಲವೇ ಬೇರೆ ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳಬಹುದು. ಇಲ್ಲವೇ ಟೈಲರಿಂಗ್ ತರಬೇತಿ ಪಡೆದು ಟೈಲರಿಂಗ್ ವೃತ್ತಿ ಆರಂಭಿಸಬಹುದು. ಏನೇ ಆದರೂ ಮಾಡುವ ಮನ ಸಾಧಿಸುವ ಛಲ, ಹಂಬಲ ನಮ್ಮಲ್ಲಿರಬೇಕು. ಆಗ ಅಸಾಧ್ಯವು ಸಾಧ್ಯವಾಗುತ್ತದೆ. ಹೀಗಾಗಿ, ಮದುವೆಯ ಮೊದಲೇ ಹೆಣ್ಣಿಗೆ ಅರ್ಥಿಕವಾಗಿ ಯಾರನ್ನೋ ಆಶ್ರಯಿಸುವ ಬದಲಿಗೆ ತಮ್ಮ ಕಾಲ ಮೇಲೆ ನಿಲ್ಲಲು ಪ್ರೋತ್ಸಾಹ ನೀಡುವುದು ಉತ್ತಮ.

Leave A Reply

Your email address will not be published.