7th Pay Commission: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ಶೇ.17ರಷ್ಟು ವೇತನ ಹೆಚ್ಚಳಕ್ಕೆ ಮುಂದಾದ ಸಿಎಂ ಬೊಮ್ಮಾಯಿ! ಸರ್ಕಾರದಿಂದ ಮಧ್ಯಂತರ ಘೋಷಣೆ
7th pay Commission: 7ನೇ ವೇತನ ಆಯೋಗದ(7th pay Commission) ಜಾರಿ ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಸರ್ಕಾರಿ ನೌಕರರು ಇಂದು ಮುಷ್ಕರ ನಡೆಸಿ ಸರ್ಕಾರಕ್ಕೆ ಬಿಸಿಮುಟ್ಟಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ನಿರ್ಧಾರವನ್ನು ತೆಗೆದುಕೊಂಡಿದ್ದು, ಸರ್ಕಾರಿ ನೌಕರರಿಗೆ ಶೇ. 17 ರಷ್ಟು ವೇತನ ಹೆಚ್ಚಿಸಲು ನಿರ್ಧಾರ ಮಾಡಿದೆ. ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ( CM Bommai) ಅವರು ಭರವಸೆ ನೀಡಿದ್ದಾರೆ. ಆದರೆ ಸರ್ಕಾರ ಭರವಸೆ ನೀಡಿದರೂ ನೌಕರರ ಸಂಘ ಇನ್ನೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ.
ಹೌದು, ಸರ್ಕಾರಿ ನೌಕರರಿಗೆ ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ. 7 ನೇ ವೇತನ ಆಯೋಗ ರಚನೆಗೆ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರ ಈ ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿಯವರು, ಮಧ್ಯಂತರ ಪರಿಹಾರ ವೇತನ ಘೋಷಣೆ ಮಾಡಿದ್ದೇವೆ. ವರದಿ ಬಂದ ತಕ್ಷಣ ಏಳನೇ ವೇತನ ಆಯೋಗದ ವೇತನ ಜಾರಿ ಮಾಡಲಿದ್ದೇವೆ. ಇದರಿಂದ ನೌಕರರು ಮುಷ್ಕರ ಕೈಬಿಡುವ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇನ್ನು NPS ಬಗ್ಗೆ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಏನ್ ಆಗಿದೆ ಎಂದು ವರದಿ ತರೆಸಿಕೊಳ್ಳುತ್ತೇವೆ. ACS ನೇತೃತ್ವದಲ್ಲಿ ಸಮಿತಿ ಮಾಡಿ ಎರಡು ತಿಂಗಳಲ್ಲಿ ವರದಿ ತರೆಸಿಕೊಳ್ಳುತ್ತೇವೆ. ಈಗ ಶೇ. 17ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಘೋಷಣೆ ಮಾಡಿದರು.
ಇನ್ನು ಈ ಬಗ್ಗೆ ರಾಜ್ಯ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಈ ಹಿಂದೆಯೂ ಕೂಡ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದರು. ಅಧಿಕೃತ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಇನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಸಭೆಗೆ ಕರೆದಿದ್ದು, ಸಭೆ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.