West Bengal: ಎರಡು ಗರ್ಭಕೋಶ ಹೊಂದಿರುವ ಮಹಿಳೆಗೆ ಅವಳಿ ಮಕ್ಕಳು: ಅಪರೂಪ ಘಟನೆಗೆ ಸಾಕ್ಷಿಯಾದ ವೈದ್ಯ ಲೋಕ!
West Bengal : ಈ ಜಗತ್ತೇ ಒಂದು ಕೌತುಕ. ಅದರಲ್ಲಿ ಖಗೋಳ, ವಿಜ್ಞಾನ, ಪ್ರಕೃತಿ ಹೀಗೆ ಎಲ್ಲ ರೀತಿಯ ವಿಷಯಗಳಲ್ಲಿ ಕೂಡ ಒಂದೊಂದು ನಿಬ್ಬೆರಗಾಗುವಂತಹ ಘಟನೆಗಳು ನಡೆಯುತ್ತವೆ. ವೈದ್ಯಕೀಯ ಲೋಕ ಕೂಡ ಇದರಿಂದ ಹೊರತಾಗಿಲ್ಲ. ಕೆಲವೊಮ್ಮೆ ಇಲ್ಲೂ ಎಂದೂ ಕೇಳರಿಯದ ವಿಚಿತ್ರಗಳು ನಡೆಯುತ್ತವೆ. ಅಂಥದ್ದೇ ಒಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ಅಪರೂಪದಲ್ಲಿ ಅಪರೂಪ ಪ್ರಕರಣ ಇದಾಗಿದೆ.
ಈ ವಿಚಾರ ಕೇಳಿದ್ರೆ ನೀವೂ ಒಮ್ಮೆ ಮೂಕವಿಸ್ಮಿತರಾಗುತ್ತೀರಿ. ಹೌದು, ಪಶ್ಚಿಮ ಬಂಗಾಳದ(West Bengal) ನಾಡಿಯಾ(Naadiya) ದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬಳಿಗೆ ಎರಡು ಗರ್ಭಾಶಗಳಿರುವುದು ಪತ್ತೆಯಾಗಿದೆ! ಅದೂ ಕೂಡ ಆಕೆ ಎರಡೂ ಗರ್ಭಕೋಶಗಳಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ!
ನಾಡಿಯಾ ಜಿಲ್ಲೆಯ ಶಾಂತಿಪುರ(Shantipura) ಸರ್ಕಾರಿ ಆಸ್ಪತ್ರೆಯಲ್ಲಿ(Government Hospital)ಈ ಘಟನೆ ನಡೆದಿದೆ. ಅಪರೂಪದಲ್ಲಿ ಅಪರೂಪ ಪ್ರಕರಣ ಇದಾಗಿದ್ದು, ಮಹಿಳೆಯೊಬ್ಬಳು ಎರಡು ಗರ್ಭಕೋಶ ಹೊಂದಿರುವುದು ವೈದ್ಯ ಲೋಕಕ್ಕೆ ಸವಾಲು ಎನ್ನಲಾಗಿದೆ. ಆದರೂ ಕೂಡ ನಾಡಿಯ ಆಸ್ಪತ್ರೆಯ ವೈದ್ಯರು ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸ್ತ್ರೀ ರೋಗ ತಜ್ಞೆ ಡಾ ಪವಿತ್ರ ಬೆಪರಿ(Dr. Pavitra Bepari) ನೇತೃತ್ವದಲ್ಲಿ ಈ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ತಾಯಿ ಮತ್ತು ಅವಳಿ ಮಕ್ಕಳು ಕೂಡ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದುವರೆಗೂ ಈ ರೀತಿಯ 17 ಪ್ರಕರಣಗಳು ಜಗತ್ತಿನಲ್ಲಿ ಕಂಡು ಬಂದಿದೆ. ಇದರಲ್ಲಿ ಮೂರು ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ವಿಶೇಷ ಎಂದರೆ, ಎರಡು ಪ್ರಕರಣಗಳು ಪಶ್ಚಿಮ ಬಂಗಾಳದಲ್ಲೇ ವರದಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಎರಡು ಗರ್ಭಕೋಶವನ್ನು ಹೊಂದಿರುವ ಇಂತಹ ಪ್ರಕರಣಗಳು ವೈದ್ಯಕೀಯ ಲೋಕದ ವಿಸ್ಮಯವೇ ಸರಿ.