ದಕ್ಷಿಣ ಕನ್ನಡ : ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ ,ಸಾರ್ವಜನಿಕರಿಂದ ಆಕ್ರೋಶ ,ಕಾರ್ಯಾಚರಣೆಗೆ ತರಿಸಲಾಗಿದ್ದ 5 ಸಾಕಾನೆಗಳನ್ನು ಕಳುಹಿಸಿಕೊಟ್ಟ ಇಲಾಖೆ
Dakshina Kannada :ದಕ್ಷಿಣ ಕನ್ನಡ : ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಫೆ. 20ರಂದು ಕಾಡಾನೆ ಅಟ್ಟಹಾಸ ಮೆರೆದು ಎರಡು ಜೀವಗಳನ್ನು ಬಲಿ ಪಡೆದ ಬೆನ್ನಲ್ಲೇ ಕಾಡಾನೆಗಳನ್ನು ಸೆರೆ ಹಿಡಿಯಲು ಆರಂಭವಾಗಿದ್ದ ಕಾರ್ಯಾಚರಣೆ ಇದೀಗ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ( Dakshina Kannada)ದಲ್ಲಿ ಆನೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ರೆಂಜಿಲಾಡಿಯಲ್ಲಿ ನಡೆದ ಆನೆದಾಳಿಯ ಘಟನೆಯಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಕಾಡಾನೆಗಳ ಹಾವಳಿಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದ್ದರು,ಬಳಿಕ ಸಚಿವ ಎಸ್.ಅಂಗಾರ ಹಾಗೂ ಜಿಲ್ಲಾಧಿಕಾರಿ ರವಿ ಕುಮಾರ್ ಅವರು ಕಾಡಾನೆ ಸೆರೆ ಹಿಡಿಯುವ ಕುರಿತು ಭರವಸೆ ನೀಡಿದ್ದರು.
ಅದರಂತೆ ಕಾಡಾನೆ ಸೆರೆಗೆ 5 ಆನೆಗಳನ್ನು ಕರೆಸಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.
ಮೂರು ದಿನಗಳ ಕಾರ್ಯಾಚರಣೆ ನಡೆದು ಫೆ. 23ರಂದು ಮಂಡೆಕರ ಬಳಿಯ ಅರಣ್ಯದಲ್ಲಿ ಒಂದು ಕಾಡಾನೆಯನ್ನು ಸೆರೆ ಹಿಡಿದು ಎರಡು ಸಾಕಾನೆಗಳ ಜತೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಉಳಿದ 3 ಆನೆಗಳು ನೆಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಇದೀಗ ಉಳಿದ ಮೂರು ಆನೆಗಳನ್ನು ಫೆ.26ರ ರಾತ್ರಿ ಕೊಂಡೊಯ್ಯಲಾಗಿದೆ.ಇದರಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
“ಕಾಡಾನೆ ಸೆರೆ’ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಕ್ಕೆ ಸ್ಥಳೀಯ ಜನರು ಆಕ್ರೋಶ ,ಆತಂಕ ವ್ಯಕ್ತಪಡಿಸಿದ್ದಾರೆ.
ಆನೆಗಳು ನೂಜಿಬಾಳ್ತಿಲ, ರೆಂಜಿಲಾಡಿ, ಕೊಣಾಜೆ, ಕೊಂಬಾರು, ಸಿರಿಬಾಗಿಲು ಮುಂತಾದ ಪ್ರದೇಶದಲ್ಲಿ ರೈತರ ಜಮೀನುಗಳಿಗೆ ಬಂದು ಕೃಷಿ ನಾಶ ಮಾಡುತ್ತಲೇ ಇದೆ.
ನಾವು ಜೀವ ಭಯದಿಂದಲೇ ಬದುಕುವಂತಾಗಿದೆ. ನಮ್ಮ ಅಳಲನ್ನು ಕೇಳುವವರು ಯಾರೂ ಇಲ್ಲ. ಇಲಾಖೆಯವರು ನರಹಂತಕ ಎಂದು ಒಂದು ಆನೆಯನ್ನು ಹಿಡಿದು ಸಾಗಿಸಿದ್ದಾರೆ. ಉಳಿದ ಆನೆಗಳು ಜನವಸತಿ ಪ್ರದೇಶಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ. ಉಪಟಳ ನೀಡುವ ಆನೆಗಳನ್ನು ಹಿಡಿಯಲಾಗುವುದು ಎಂದು ಸ್ವತಃ ಜಿಲ್ಲಾಧಿಕಾರಿಗಳೇ ಹೇಳಿಕೆ ನೀಡಿದ್ದರು. ಆದರೆ ಇದೀಗ ಏಕಾಏಕಿ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಜನರು ಆಳಲು ತೋಡಿಕೊಳ್ಳುತ್ತಿದ್ದಾರೆ.
ಈ ಕುರಿತು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಮಾಹಿತಿ ನೀಡಿ, ಇಲಾಖಾ ಸಿಬಂದಿ ರಾತ್ರಿ ಹಗಲು ಗಸ್ತು ತಿರುಗುತ್ತಿದ್ದಾರೆ. ಕಾರ್ಯಾಚರಣೆಗಾಗಿ ತರಲಾಗಿದ್ದ ಸಾಕಾನೆಗಳನ್ನು ಕೊಡಗಿನಲ್ಲಿ ನಡೆಯುತ್ತಿರುವ ಆಪರೇಶನ್ ಟೈಗರ್ ಕಾರ್ಯಾಚರಣೆಯಲ್ಲಿ ಬಳಸುವುದಕ್ಕಾಗಿ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.