City Name Change: ಔರಂಗಾಬಾದ್ ಮತ್ತು ಒಸ್ಮಾನಾಬಾದ್‌ ನಗರಗಳ ಮರುನಾಮಕರಣ ಮಾಡಿದ ಕೇಂದ್ರ! ಅಹ್ಮದ್ ನಗರದ ಹೆಸರಿನ ಬದಲಾವಣೆಗೂ ಹೆಚ್ಚಿದ ಬೇಡಿಕೆ!

Aurangabad : ಔರಂಗಾಬಾದ್ (Aurangabad) ಮತ್ತು ಒಸ್ಮಾನಾಬಾದ್‌ (Osmanabad) ನಗರಗಳ ಹೆಸರನ್ನು ಮರು ನಾಮಕರಣ ಮಾಡಿ ಕೇಂದ್ರವು ಆದೇಶ ಹೊರಡಿಸಿದೆ. ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿ ನಗರ (Chhatrapati Sambhaji Nagar) ಎಂದೂ, ಒಸ್ಮಾನಾಬಾದ್‌ ನಗರವನ್ನು ಧರಾಶಿವ್ ನಗರ (Dharashiv) ಎಂದು ಮರು ನಾಮಕರಣ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಮತ್ತು ವ್ಯವಹಾರಗಳ ಸಚಿವಾಲಯವು ಅನುಮೋದನೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಆಡಳಿತ ರೂಢವಾಗಿರುವ ಏಕನಾಥ್ ಶಿಂಧೆ(Yekanath Shinde) ಬಣದ ಶಿವಸೇನೆ ಹಾಗೂ ಬಿಜೆಪಿ(BJP) ಮೈತ್ರಿ ಸರ್ಕಾರವು ಈ ಎರಡು ನಗರಗಳ ಹೆಸರನ್ನು ಬದಲಾಯಿಸುವ ಕುರಿತು ಕೇಂದ್ರಕ್ಕೆ ತನ್ನ ಪ್ರಸ್ತಾವವನ್ನು ಸಲ್ಲಿಸಿತ್ತು. ಇದೀಗ ಮಹಾರಾಷ್ಟ್ರ ಸರ್ಕಾರ ತನ್ನ ಎರಡು ನಗರಗಳ ಹೆಸರನ್ನು ಮರು ನಾಮಕರಣ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅನುಮೋದನೆ ಮಾಡಿರುವ ಕೇಂದ್ರ ಗೃಹ ಮತ್ತು ವ್ಯವಹಾರಗಳ ಸಚಿವಾಲಯವು ನಗರಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ(Centrel Government)ದ ಆಕ್ಷೇಪ ಇಲ್ಲ, ಸೂಚಿಸಿದ ಹೆಸರನ್ನು ನಾಮಕರಣ ಮಾಡಬಹುದು ಎಂದು ಹೇಳಿದೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ಅಸ್ತತ್ವಲ್ಲಿದ್ದಂತಹ ಉದ್ಧವ್ ಠಾಕ್ರೆ(Udhav Thakre) ನಾಯಕತ್ವದ ಶಿವಸೇನೆ ಹಾಗೂ ಕಾಂಗ್ರೆಸ್ ಮೈತ್ರಿಯ ಮಹಾ ವಿಕಾಸ್ ಅಘಾಡಿ ಸರ್ಕಾರವು 2022 ರಲ್ಲಿ ತನ್ನ ಕೊನೆಯ ಕ್ಯಾಬಿನೆಟ್(Cabinet) ಸಭೆಯಲ್ಲಿ, ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನು ಅನುಮೋದಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಮತ್ತು ಅಂದಿನ ಸರ್ಕಾರದ ಸಚಿವ ಅಸ್ಲಾಂ ಶೇಖ್((Aslam Shek) ಈ ನಿರ್ಧಾರವನ್ನು ಪ್ರಶ್ನಿಸಿ, ಪ್ರತಿಭಟಿಸಿ ಅಧಿವೇಶನದಿಂದ ಹೊರನಡೆದಿದ್ದರು. ನಂತರ, ಈ ನಿರ್ಧಾರದಿಂದಾಗಿ ಕಾಂಗ್ರೆಸ್ ಮತ್ತು ಠಾಕ್ರೆ ನಡುವಿನ ಭಿನ್ನಾಭಿಪ್ರಾಯವೂ ವಿಸ್ತಾರವಾಯಿತು.

ಇದಾದ ನಂತರ, ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಅಸ್ತಿತ್ವಕ್ಕೆ ಬಂದು, ಹಿಂದಿನ ಸರ್ಕಾರದ ಎಲ್ಲಾ ನಿರ್ಧಾರಗಳಿಗೆ ತಡೆ ನೀಡಿತು. ಆದರೆ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಅನ್ನು ಮರುನಾಮಕರಣ ಮಾಡುವ ನಿರ್ಧಾರವನ್ನು ಅಂಗೀಕರಿಸಿತು. ಅಂತೆಯೇ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ ಇದೀಗ ಅನುಮೋದನೆ ಪಡೆದುಕೊಂಡಿದೆ.

ನಗರಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಕೇಂದ್ರದ ಈ ನಿರ್ಧಾರವನ್ನು ಸ್ವಾಗತ ಮಾಡಿ ಟ್ವೀಟ್ ಮಾಡಿರುವ ಮಹಾರಾಷ್ಟ್ರ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ(Deputy Chief Minister)
ದೇವೇಂದ್ರ ಫಡ್ನವೀಸ್(Devendra Padnavis) ಅವರು, ನಮ್ಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರದ ನಾಯಕತ್ವ ಈಗ ಜನರಿಗೆ ತಲುಪುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೆಸರನ್ನು ಮರು ನಾಮಕರಣ ಮಾಡುವುದಕ್ಕೆ ಅನುಮೋದನೆ ನೀಡಿರುವ ಕೇಂದ್ರದ ಪತ್ರವನ್ನು ಲಗತ್ತಿಸಿ, ‘ಔರಂಗಾಬಾದ್‌’ ಅನ್ನು ‘ಛತ್ರಪತಿ ಸಂಭಾಜಿನಗರ’ ಎಂದು, ಉಸ್ಮಾನಾಬಾದ್‌ ನಗರವನ್ನು ‘ಧಾರಾಶಿವ್’ ಎಂದು ಮರು ನಾಮಕರಣ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Sha) ಅವರಿಗೆ ಧನ್ಯವಾದಗಳು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ನಿಮ್ಮ ನಿರ್ಧಾರ ತಲುಪಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಅನ್ನು ಅಧಿಕೃತವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧರಾಶಿವ್ ಎಂದು ಮರುನಾಮಕರಣ ಮಾಡಿದ ನಂತರ ಅಹ್ಮದ್‌ನಗರ(Ahammed Nagar) ನಗರದ ಹೆಸರನ್ನು ಬದಲಾಯಿಸುವ ಬೇಡಿಕೆಯು ಬಲಗೊಳ್ಳುತ್ತಿದೆ. ಬಿಜೆಪಿ ಎಂಎಲ್‌ಸಿ ಗೋಪಿಚಂದ್ ಪಾದಲ್ಕರ್(Gopichand Padalkar) ಅವರು ಮುಖ್ಯಮಂತ್ರಿ ಮತ್ತು ಅವರ ಉಪನಾಯಕರಿಗೆ ಟ್ವೀಟ್ ಮಾಡಿ, ನಗರಗಳ ಹೆಸರನ್ನು ಬದಲಾಯಿಸಲು ಮುಂದಾಗಿರುವುದಕ್ಕೆ ಧನ್ಯವಾದ ಅರ್ಪಿಸಿ, ಅಹ್ಮದ್‌ನಗರದ ಹೆಸರನ್ನು ಕೂಡ ಬದಲಾಯಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಹೌದು, ಈ ಕುರಿತು ಟ್ವೀಟ್ ಮಾಡಿದ ಅವರು ‘ಔರಂಗಾಬಾದ್ ಅನ್ನು ಸಂಭಾಜಿನಗರ ಮತ್ತು ಉಸ್ಮಾನಾಬಾದ್ ಅನ್ನು ಧಾರಶಿವ್ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಶಿಂದೆ-ಫಡ್ನವಿಸ್ ಸರ್ಕಾರಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು. ಅಂತೆಯೇ, ಪುಣ್ಯಶ್ಲೋಕ ಅಹಲ್ಯಾ ದೇವಿಯ(Ahalyadevi) ಜನ್ಮಸ್ಥಳವಾದ ಅಹ್ಮದ್‌ನಗರವನ್ನು ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ‘ಅಹಲ್ಯಾನಗರ'(Ahalya Nagar) ಎಂದು ಮರುನಾಮಕರಣ ಮಾಡಬೇಕು’ ಎಂದು ಪದಾಲ್ಕರ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸದ್ಯ ಪಾದಲ್ಕರ್ ಅವರ ಟ್ವೀಟ್ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಇದೀಗ ಹೊಸ ಸಂಚಲನವನ್ನು ಸೃಷ್ಟಿಸಿದ್ದು, ಅದಕ್ಕೆ ಭಾರೀ ಬೆಂಬಲವೂ ವ್ಯಕ್ತವಾಗುತ್ತಿದೆ. ಬಹು ದಿನಗಳ ಕೂಗು ಮತ್ತೆ ಮುನ್ನಲೆಗೆ ಬಂದಂತಾಗಿದೆ. ಈ ಬೇಡಿಕೆಯನ್ನು ಸರ್ಕಾರವೇನಾದರೂ ಮನ್ನಿಸಿ, ಮುಂದಿನ ಕ್ರಮ ಕೈಗೊಂಡು ಅನುಷ್ಠಾನಕ್ಕೆ ಬಂದರೆ ಅದು ಅವರಿಗೆ ನಿಜವಾದ ಗೌರವವಾಗುತ್ತದೆ.

Leave A Reply

Your email address will not be published.