Manipur: ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯ ನಿರಾಕರಿಸಿದ ಶಾಲಾ ಮಂಡಳಿ! ಶಾಲಾ ಕಟ್ಟಡವನ್ನೇ ಧ್ವಂಸಗೊಳಿಸಿದ ವಿದ್ಯಾರ್ಥಿಗಳು!

Manipur : ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ಬರೆಯುವ ವೇಳೆ ಸಮಯ ಮೀರಿದಾಗ ಎಲ್ಲರೂ ಕಡ್ಡಾಯವಾಗಿ ತಮ್ಮ ಉತ್ತರ ಪತ್ರಿಕೆಗಳನ್ನು ಕೊಠಡಿಯ ಪರೀಕ್ಷಾ ಮೇಲ್ವಿಚಾರಕರಿ(Exam Invigilater)ಗೆ ಕೊಡುವುದು ಸಾಮಾನ್ಯ. ಅದು ಎಂತಹ ಪರೀಕ್ಷೆ ಆಗಿರಲಿ ನಿಗದಿತ ಸಮಯ ಮುಗಿದ ಬಳಿಕ ಯಾರಿಗೂ ಉತ್ತರಿಸಲು ಹೆಚ್ಚು ಸಮಯ ನೀಡುವುದಿಲ್ಲ. ಆದರೆ ಇಲ್ಲೊಂದೆಡೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಸಮಯ ಸಾಲಲಿಲ್ಲ ಎಂದು ಹೆಚ್ಚಿನ ಸಮಯದ ಬೇಡಿಕೆ ಇಟ್ಟಿದ್ದಾರೆ. ಆದರೆ ಸಮಯ ಕೊಡಲಾಗದು ಎಂದಿದಕ್ಕೆ ಏನು ಮಾಡಿದ್ದಾರೆ ಗೊತ್ತಾ?

 

ಹೌದು, ಮಣಿಪುರದ (Manipur) ತೌಬಲ್ (Thoubal) ಜಿಲ್ಲೆಯ ಯೈರಿಪೋಕ್‌ನ ಎಸಿಎಂಇ ಹೈಯರ್ ಸೆಕೆಂಡರಿಬೋರ್ಡ್ ಪರೀಕ್ಷೆಗೆ (Exam) ಹಾಜರಾಗಿದ್ದ ವಿದ್ಯಾರ್ಥಿಗಳು (Students) ಪರೀಕ್ಷೆ ಬರೆಯುತ್ತಿದ್ದ ವೇಳೆ ಹೆಚ್ಚುವರಿ ಸಮಯ ಕೇಳಿದ್ದು, ಇದನ್ನು ನಿರಾಕರಿಸಿದ್ದಕ್ಕೆ ತಾವು ಪರೀಕ್ಷೆ ಬರೆಯುತ್ತಿದ್ದ ಶಾಲೆಯ (School) ಕಟ್ಟಡವನ್ನೇ ಧ್ವಂಸಗೊಳಿಸಿರುವ (Vandalise) ವಿಕೃತಿ ಮೆರಿದಿದ್ದಾರೆ.

ವರದಿಗಳ ಪ್ರಕಾರ, ಕೌನ್ಸಿಲ್ ಆಫ್ ಹೈಯರ್ ಸೆಕೆಂಡರಿ ಎಜುಕೇಶನ್ ಮಣಿಪುರ ನಡೆಸುತ್ತಿದ್ದ ಪರೀಕ್ಷೆ ವೇಳೆ 5 ನಿಮಿಷ ಬಾಕಿ ಉಳಿದಿದ್ದಾಗ ವಿದ್ಯಾರ್ಥಿಗಳು ಹೆಚ್ಚುವರಿ ಸಮಯ ನೀಡುವಂತೆ ಒತ್ತಾಯಿಸಿದ್ದಾರೆ. ಶಾಲೆಯ ಗಂಟೆ ಬಾರಿಸುತ್ತಿದ್ದಂತೆ ವಿದ್ಯಾರ್ಥಿಗಳು ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ಗಲಾಟೆ ಹಿಂಸಾಚಾರಕ್ಕೆ ತಿರುಗಿ, ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದಾರೆ. ಕಂಪ್ಯೂಟರ್, ಪೀಠೋಪಕರಣಗಳು ಸೇರಿದಂತೆ ಶಾಲೆ ಆಸ್ತಿಯನ್ನು ಧ್ವಂಸಗೊಳಿಸಿದ್ದಾರೆ.

ಈ ವೇಳೆ ಶಾಲೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಕಂಡು ಶಿಕ್ಷಕಿ ಸೇರಿದಂತೆ 15 ವಿದ್ಯಾರ್ಥಿಗಳು ಮೂರ್ಛೆ ಹೋಗಿದ್ದಾರೆ. ಅವರೆಲ್ಲರನ್ನೂ ಚಿಕಿತ್ಸೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದ 8 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.