Hassan Ticket Fight: ಹಾಸನ ಟಿಕೆಟ್ ವಿಚಾರದಲ್ಲಿ ಮತ್ತೊಂದು ತಿರುವು! ಮೀಟಿಂಗ್ ರದ್ದಾದ ಬೆನ್ನಲ್ಲೇ ಹೆಚ್​ಡಿಕೆಗೆ ದೊಡ್ಡಗೌಡ್ರಿಂದ ಖಡಕ್ ಸೂಚನೆ!

Hassan Ticket Fight: ಚುನಾವಣೆ (Assembly Election 2023) ಸಮೀಪಿಸುತ್ತಿದ್ದಂತೆ ಮತ್ತೆ ಹಾಸನದಲ್ಲಿ (Hassan Politics) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿದ್ದಾಜಿದ್ದಿಗಳ ನಡುವೆ ಯಾರಿಗೆ ಟಿಕೆಟ್ (Hassan Ticket Fight) ಸಿಗುತ್ತದೆ ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಅಣ್ಣ ಒಂದು ಲೆಕ್ಕಚಾರ ಹಾಕಿದ್ರೆ, ತಮ್ಮ ಮತ್ತೊಂದು ಲೆಕ್ಕಾಚಾರದಲ್ಲಿದ್ದಾರೆ. ಪ್ರತಿಷ್ಠೆಯ ಜಿದ್ದಾಜಿದ್ದಿಯಲ್ಲಿ ಸಹೋದರರ ಅಂತರಂಗ, ಬಹಿರಂಗ ಗುದ್ದಾಟದ ನಡುವೆ ದೊಡ್ಡಗೌಡ್ರು(HD Devegowda) ಪ್ರವೇಶಿಸಿದ್ದಾರೆ.

ಹೌದು, ಸದ್ಯ ಹಾಸನ ಜೆಡಿಎಸ್​(JDS) ಟಿಕೆಟ್​ ವಿಚಾರವಾಗಿ ದಳಪತಿಗಳ ಮನೆಯಲ್ಲಿ ಶುರುವಾದ ಫೈಟ್​ ತಾರಕಕ್ಕೇರಿದ್ದು, ದೇವೇಗೌಡ(Devegowda) ಮಧ್ಯೆ ಪ್ರವೇಶಿಸಿ ಖಡಕ್ ಸೂಚನೆ ಕೊಟ್ಟಿದ್ದಾರೆ. ಇದರಿಂದ ಹಾಸನ ಅಖಾಡದಲ್ಲಿ ಕ್ಷಣಕ್ಕೊಂದು ತಿರುವು, ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಹಾಸನ ಟಿಕೆಟ್​​ ಗೊಂದಲ ನಿವಾರಿಸಲು ಕುಮಾರಸ್ವಾಮಿ(Kumaraswamy) ಕರೆದ ಮೀಟಿಂಗ್ ನಡೆಸಲು ಸಕಲ ಸಿದ್ಧತೆ ನಡೆಸಿದ್ದರು. ಈ ಮೂಲಕ ಮನೆಯಲ್ಲೇ ದೊಡ್ಡ ಯುದ್ಧಕ್ಕೆ ಕಾರಣವಾಗಿರುವ ಹಾಸನ ಟಿಕೆಟ್ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿತ್ತು. ಆದ್ರೆ, ಇದರ ಮಧ್ಯೆ ದೇವೇಗೌಡರು ಅಖಾಡಕ್ಕೆ ಇಳಿದಿದ್ದು, ಟಿಕೆಟ್ ಗೊಂದಲ ನಿವಾರಣೆಗೆ ಹೆಚ್​ಡಿಕೆ ಆಯೋಜಿಸಿದ್ದ ಮೀಟಿಂಗ್​ಅನ್ನೇ ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಇದೀಗ ದೇವೇಗೌಡ ಮತ್ತೊಂದು ಹೆಜ್ಜೆ ಮುಂದಿಟ್ಟು ನನ್ನ ಗಮನಕ್ಕೆ ಬಾರದೇ ಯಾವುದೇ ನಿರ್ಧಾರ ಬೇಡ ಎಂದು ಕುಮಾರಸ್ವಾಮಿಗೆ ಖಡಕ್ ಸೂಚನೆ ನೀಡಿದ್ದಾರೆ. ಸಭೆ ರದ್ದಾದ ಬಗ್ಗೆ ಕುಮಾರಸ್ವಾಮಿಯವರ ಗಮನಕ್ಕೂ ತರದೇ ಆದೇಶ ಹೊರಡಿಸಲಾಗಿತ್ತು. ಬಳಿಕ ಕುಮಾರಸ್ವಾಮಿ ಜೊತೆ ಮಾತನಾಡಿರುವ ಗೌಡ್ರು, ಹಾಸನ ಟಿಕೆಟ್ ವಿಚಾರವಾಗಿ ನನ್ನ ಗಮನಕ್ಕೆ ಬಾರದೇ ಯಾವುದೇ‌ ನಿರ್ಧಾರ ಬೇಡ. ದಿಢೀರ್​ ನಿರ್ಧಾರದಿಂದ ಗೊಂದಲ ಸೃಷ್ಟಿಯಾಗುತ್ತದೆ. ಆ ಕಾರಣಕ್ಕೆ ಸದ್ಯ ಯಾವುದೇ ನಿರ್ಧಾರ ಬೇಡ. ಟಿಕೆಟ್ ವಿಚಾರಕ್ಕೆ ಸಮಯವಿದೆ. ಕೂತು ಒಮ್ಮತದ ನಿರ್ಧಾರಕ್ಕೆ ಬರುವಂತೆ ಸೂಚಿಸಿದ್ದಾರೆ.

ಈ ಬಾರಿ ಹಾಸನದ ಜೆಡಿಎಸ್ ಟಿಕೆಟ್ ಯಾರಿಗೆ? ತಾವೇ ಘೋಷಿಸಿಕೊಂಡಿರುವಂತೆ ಭವಾನಿ ರೇವಣ್ಣಗೆ ಟಿಕೆಟ್ ಸಿಗುತ್ತಾ? ಅಥವಾ ಬಿಜೆಪಿಯ ಪ್ರೀತಂ ಗೌಡ ಸವಾಲಿಗೆ ಸೆಡ್ಡು ಹೊಡೆದಿರುವ ರೇವಣ್ಣ ಹಾಸನದ ಅಖಾಡಕ್ಕೆ ಇಳಿಯುತ್ತಾರಾ? ಇಲ್ಲ ಹೆಚ್​.ಡಿ.ಕುಮಾರಸ್ವಾಮಿ ಶೋಧಿಸಿರುವ ಸ್ವರೂಪ್ ಗೌಡಗೆ ಟಿಕೆಟ್ ಸಿಗುತ್ತಾ? ಹೀಗೆ ಮೂರು ಪ್ರಶ್ನೆ, ಮೂರು ಆಯ್ಕೆ, ನೂರಾರು ತಂತ್ರ.ಒಟ್ಟಿನಲ್ಲಿ ಹಾಸನದಲ್ಲಿ ನಡೆಯುತ್ತಿರುವ ಹೈಡ್ರಾಮಾ ದಳಪತಿಗಳಿಗೆ ಕಬ್ಬಿಣದ ಕಡಲೆಯಂತಾಗಿದೆ.

ಇನ್ನು ಹಾಸನ ಟಿಕೆಟ್​ ನಿರ್ಧಾರದಿಂದ ಪಕ್ಷ ಮತ್ತು ಕುಟುಂಬಕ್ಕೆ ಹಿನ್ನೆಡೆಯಾಗದಂತೆ ಮುತುವರ್ಜಿ ವಹಿಸುವಂತೆ ಗೌಡರು, ಕುಮಾರಸ್ವಾಮಿಗೆ ಸಲಹೆ ಕೊಟ್ಟಿದ್ದು, ಈ ಹಿನ್ನಲೆಯಲ್ಲಿ ಹಾಸನ ಟಿಕೆಟ್​ ಫೈಟ್ ಇಲ್ಲಿಗೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಉತ್ತರ ಹುಡುಕುತ್ತಿರುವ ದಳಪತಿಗಳ ನಡೆಯಿಂದಲೇ ಟಿಕೆಟ್ ವಿಚಾರ ಮತ್ತಷ್ಟು ಕಗ್ಗಂಟ್ಟಾಗುತ್ತಿದೆ. ಬದಲಿಗೆ ಇನ್ನಷ್ಟು ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ.

Leave A Reply

Your email address will not be published.