PFI Level 2 : ಹೊಸ ಹೆಸರೊಂದಿಗೆ ಮತ್ತೆ ಮುನ್ನಲೆಗೆ ಬರಲು ಸಿದ್ಧವಾಗಿದ್ದಾರೆ PFI ನ 2ನೇ ಹಂತದ ನಾಯಕರು! ಸ್ಪೋಟಕ ಮಾಹಿತಿ ತೆರಿದಿಟ್ಟ ಕೇಂದ್ರ ಗುಪ್ತಚರ ಇಲಾಖೆ!

PFI Level 2 : ಆರೇಳು ತಿಂಗಳ ಹಿಂದಷ್ಟೇ ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯನ್ನು ಮುಂದಿನ 5 ವರ್ಷಗಳ ಕಾಲ ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿತ್ತು. ಆದರೀಗ ಇದರ ಎರಡನೇ ಹಂತ(PFI Level 2)ದ ನಾಯಕರು ಈಗಲೂ ಸಕ್ರಿಯವಾಗಿದ್ದು, ಹೊಸ ಮಾದರಿ ಅಥವಾ ಹೊಸ ಸಂಘಟನೆ ಹೆಸರಿನಲ್ಲಿ ಮತ್ತೆ ಮುಖ್ಯವಾಹಿನಿಗೆ ಬರಲು ಸಿದ್ಧತೆ ನಡೆಸುತ್ತಿದ್ದಾರೆಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಕೇಂದ್ರವು ಸಂಘಟನೆ ನಿಷೇಧದ ಘೋಷಣೆ ಮಾಡುತ್ತಿದ್ದಂತೆ ಎರಡನೇ ಹಂತದ ನಾಯಕರನ್ನು ಉದ್ದೇಶಪೂರ್ವಕವಾಗಿ ಭೂಗತಗೊಳಿಸಲಾಗಿತ್ತು. ಅಂತಹ ನಾಯಕರು, ಈಗಲೂ ತಮ್ಮ ಸಂಘಟನ ಕಾರ್ಯ ಮುಂದುವರಿಸುತ್ತಿದ್ದಾರೆ. ಹೊಸ ಹೆಸರಿನ ಪಕ್ಷದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆ(Assembly Election)ಹಾಗೂ ಮುಂದಿನ ವರ್ಷ ಬರುವ ಲೋಕಸಭೆ ಚುನಾವಣೆಯ(Parliment Election)ಕಾರ್ಯತಂತ್ರ ರೂಪಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಕೇಂದ್ರ ಗುಪ್ತಚರ ಹಾಗೂ ಇತರ ತನಿಖಾ ಸಂಸ್ಥೆಗಳು ಎಲ್ಲ ರಾಜ್ಯ ಗುಪ್ತಚರ ವಿಭಾಗಗಳಿಗೆ ಅಂತಹ ವ್ಯಕ್ತಿಗಳ ಮೇಲೆ ನಿಗಾ ಇರಿಸುವಂತೆ ಸೂಚಿಸಿದೆ.

ತಮ ಸಂಘಟನೆಯು ನಿಷೇಧಗೊಳ್ಳುತ್ತದೆ, ಸರ್ಕಾರವು ಈ ನಿಟ್ಟಿನಲ್ಲಿ ಆಲೋಚನೆ ನಡೆಸುತ್ತಿದೆ ಎಂಬ ನಿರೀಕ್ಷೆ ಹೊಂದಿದ್ದ PFI ಸಂಘಟನೆಯ ಮುಖ್ಯಸ್ಥರು, ಆಗಲೇ 2ನೇ ಹಂತದ ನಾಯಕರನ್ನು ಸಂಘಟನೆಯಿಂದ ಉಚ್ಛಾಟಿಸುವ ನಾಟಕವಾಡಿ ಭೂಗತಗೊಳಿಸಿದ್ದರು. ಇದೀಗ ವಿಷಯ ತಣ್ಣಗಾದಮೇಲೆ ತಲೆಮರೆಸಿಕೊಂಡಿದ್ದ ಈ ನಾಯಕರೇ ಮತ್ತೂಮ್ಮೆ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಮತ್ತೂಂದು ಸಂಘಟನೆ ಸ್ಥಾಪಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಸಂಘಟನೆ ನಿಷೇಧದಿಂದಾಗಿ ಅತೃಪ್ತಿ ಗೊಂಡಿರುವ ಕಾರ್ಯಕರ್ತರು ಮುಂಬರುವ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆ ಕೋಮು ಸಂಘರ್ಷಕ್ಕೆ ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಾರ ಕಣ್ಣಿಗೂ ಗೋಚರಿಸದ ಈ ನಾಯಕರು, ಅಧಿಕೃತವಾಗಿ ಪಿಎಫ್ಐ ಸಂಘಟನೆ ಎಂದು ಹೇಳಿಕೊಳ್ಳದಿದ್ದರೂ ಅದರ ಸಿದ್ಧಾಂತಗಳನ್ನು ಅನುಸರಿಸುವ, ಪ್ರಚಾರ ಮಾಡುವ ಕಾರ್ಯಕರ್ತರನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಸಮುದಾಯದ ಯುವಕರನ್ನು ತೀವ್ರಗಾಮಿಗಳಂತೆ ಪರಿವರ್ತಿಸುತ್ತಿದ್ದಾರೆ. ಜತೆಗೆ ಸಂಘಟನೆ ಅಂಗ ಸಂಸ್ಥೆಗಳ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಹೊಸ ಸಂಘಟನೆ ಸ್ಥಾಪಿಸುವ ಚರ್ಚೆ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ನಿಷೇಧಿತ ಉಗ್ರ ಸಂಘಟನೆ ಕಾರ್ಯಕರ್ತರ ಜತೆ ಸಂಪರ್ಕ ಹಾಗೂ ವಿದೇಶಿ ದೇಣಿಗೆ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಂತಹ ಕಾರ್ಯಕರ್ತರು ಅಥವಾ ನಾಯಕರನ್ನು ಪತ್ತೆ ಹಚ್ಚುವುದು ಸವಾಲಾಗಿದೆ. ಅದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯ ಸಂಗ್ರಹಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.

ನಿಷೇಧಿತ ಪಿಎಫ್ಐ ಸಂಘಟನೆಯ ಒಂದು ಹಂತದ ಮುಖಂಡರನ್ನು ಬಂಧಿಸಲಾಗಿದೆ. ಆದರೆ ಅದರ ಅಂಗಸಂಸ್ಥೆಗಳ ಕಾರ್ಯಕರ್ತರು ಹಾಗೂ ಎರಡನೇ ಹಂತದ ನಾಯಕರ ಪತ್ತೆ ಕಾರ್ಯ ಈಗಲೂ ನಡೆಯುತ್ತಿದೆ. ಸ್ಥಳೀಯ ಪೊಲೀಸರು, ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಕೇಂದ್ರದ ತನಿಖಾ ಸಂಸ್ಥೆಗಳು ನಿರಂತರ ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ಮಾಹಿತಿ ಲಭ್ಯವಾಗಿದೆ.

Leave A Reply

Your email address will not be published.