Japan: ಜಪಾನ್ ಕಡಲ ತೀರಕ್ಕೆ ತೇಲಿ ಬಂತೊಂದು ನಿಗೂಢ ಲೋಹದ ಚೆಂಡು! ಜನರನ್ನು ಬೆಚ್ಚಿಬೀಳಿಸಿದ ಈ ಭಾರೀಗಾತ್ರದ ಚೆಂಡು ಬಂದಿದ್ದೆಲ್ಲಿಂದ ಗೊತ್ತೇ?
Mysterious metal ball: ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಕೆಲವು ಅಪರಿಚಿತ ವಸ್ತುಗಳು ಪತ್ತೆಯಾಗಿ ಜನರನ್ನು ದಿಗಿಲುಗೊಳಿಸುತ್ತವೆ. ಅದರಲ್ಲೂ ಕೂಡ ದೇಶದ ಭದ್ರತೆಯ ವಿಚಾರವಾಗಿ ಇಂತಹ ವಸ್ತುಗಳು ಸಾಕಷ್ಟು ಆತಂಕ ಸೃಷ್ಟಿಮಾಡುತ್ತವೆ. ಇತ್ತೀಚೆಗಷ್ಟೇ ಅಮೆರಿಕಾದ ಆಕಾಶದಲ್ಲಿ ದೊಡ್ಡ ಗಾತ್ರದ ನಿಗೂಢ ಬಲೂನ್(Balloon) ಗಳು ಪತ್ತೆಯಾಗಿದ್ದು, ಅಲ್ಲಿನ ರಕ್ಷಣಾ ಪಡೆ ಹೊಡೆದುರುಳಿಸಿದ ಘಟನೆ ನಡೆದಿತ್ತು. ಎರಡು ಮೂರು ಭಾರಿ ಈ ಅಪರಿಚಿತ ಬಲೂನ್ ಗಳು ಕಾಣಿಸಿಕೊಂಡು ಸ್ವಲ್ಪ ಆತಂಕಕ್ಕೆ ಎಡೆಮಾಡಿತ್ತು. ಸದ್ಯ ಈ ಘಟನೆ ಮಾಸುವ ಮೊದಲೇ ಈಗ ಜಪಾನ್(Japan)ನ ಕಡಲ ತೀರದಲ್ಲಿ ನಿಗೂಢವಾದ ಬೃಹದಾಕಾರದ ಲೋಹದ ಚೆಂಡೊಂದು (Mysterious metal ball) ಸಮುದ್ರ ತೀರಕ್ಕೆ ತೇಲಿ ಬಂದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಸುಮಾರು 1.5 ಮೀಟರ್ ವ್ಯಾಸವನ್ನು ಹೊಂದಿರುವ ಈ ಚೆಂಡು ಜಪಾನ್ ಕರಾವಳಿಯ ಹಮಾಮಟ್ಸು (Hamamatsu) ನಗರದ ಎನ್ಶು ಕಡಲತೀರದಲ್ಲಿ (Enshu beach) ಕಾಣಿಸಿಕೊಂಡಿದೆ. ಕಳೆದ ವಾರ ಜಪಾನ್ ಕಡಲ ತೀರದಲ್ಲಿ ಮಹಿಳೆಯೊಬ್ಬರು ವಾಕ್ ಮಾಡುತ್ತಾ ವಿಶ್ರಾಂತಿ ಮಾಡಲು ಬಂದಾಗ ಬೃಹತ್ತಾದ ಕಬ್ಬಿಣದ ಚೆಂಡೊಂದು ಅವರ ಕಣ್ಣಿಗೆ ಬಿದ್ದಿತ್ತು. ತೀರದಿಂದ ಸ್ವಲ್ಪವೇ ದೂರದಲ್ಲಿ ನೀರಿನಲ್ಲಿ ಕಿತ್ತಲೆ ಕಂದು ಬಣ್ಣದ, ಅಲ್ಲಲ್ಲಿ ತುಕ್ಕು ಹಿಡಿದಿದ್ದ ಕಲೆಗಳನ್ನು ಹೊಂದಿತ್ತು. ಈ ವಿಚಾರ ಅಲ್ಲಿನ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಇದರ ಬಗ್ಗೆ ಹೆಚ್ಚಿನ ತನಿಖೆಗಾಗಿ ಇದರ ಫೋಟೋಗಳನ್ನು ಜಪಾನ್‌ನ ಕೋಸ್ಟ್ ಗಾರ್ಡ್‌ಗೆ (coast guard) ಕಳುಹಿಸಲಾಗಿದೆ.
ಸುಮಾರು 1.5 ಮೀಟರ್ ಅಗಲದ ಈ ನಿಗೂಢ ಲೋಹದ ಚೆಂಡಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರವಾದ ಊಹಾಪೋಹ ಹಬ್ಬಲು ಕಾರಣವಾಗಿದೆ. ಇದರ ಒಳಗೆ ಏನಿದೆ ಎಂದು ತಿಳಿಯಲು ಅಲ್ಲಿನ ತಜ್ಞರು ಎಕ್ಸರೇ ನಡೆಸಿದಾಗ ಅದರ ಒಳಭಾಗ ಟೊಳ್ಳಾಗಿದೆ ಎಂಬುದು ಗೊತ್ತಾಗಿದೆ. ಆದರೆ ಇದೇನಾದರೂ ನೆರೆಯ ದೇಶಗಳಾದ ಉತ್ತರ ಕೊರಿಯಾ (North Korea) ಅಥವಾ ಚೀನಾದ (China) ಬೇಹುಗಾರಿಕೆಯ (espionage) ಸಾಧನವೇ ಎಂಬ ಅನುಮಾನ ಬಂದಿದ್ದು, ಅದಕ್ಕೆ ಯಾವುದೇ ಸೂಚನೆಗಳು ಕಂಡುಬಂದಿಲ್ಲ. ಅಲ್ಲದೆ ಇದು ಯಾವುದೇ ರೀತಿ ಸ್ಫೋಟಗೊಳ್ಳುವ ವಸ್ತುವಂತು ಅಲ್ಲ ಎಂಬುದನ್ನು ತಜ್ಞರು ಖಚಿತಪಡಿಸಿಕೊಂಡಿಸಿದ್ದಾರೆ.
ಇನ್ನು ಇದರ ಮೇಲ್ಮೈಯಲ್ಲಿ ಎರಡು ಹಿಡಿಕೆಗಳಿದ್ದು, ಇದು ಬಹುಶಃ ಬೇರೆ ಯಾವುದಾದರೂ ವಸ್ತುವಿನ ಕೊಂಡಿಯಾಗಿರಬಹುದೇ ಎಂಬ ಶಂಕೆಯೂ ಮೂಡಿದೆ. ಅಥವಾ ಇದು ಒಂದು ಮೂರಿಂಗ್ ಬೋಯ್ ಆಗಿರಬಹುದು ಎಂದು ಶಂಕಿಸಲಾಗಿದೆ. ಮೂರಿಂಗ್ ಬೋಯ್ ಎಂದರೆ ತೇಲುವ ನೀರಿನಲ್ಲಿ ಹಡಗು ದೋಣಿಗಳು ಲಂಗರು ಹಾಕಲು ಅಥವ ಆಳವಾದ ನೀರಿನಲ್ಲಿ ದೋಣಿಗಳನ್ನು ಲಂಗರು ಹಾಕಿಸಲು ಬಳಸುವ ಸಾಧನ.
ಇನ್ನು ಈ ಚೆಂಡು ಪತ್ತೆಯಾದ ಕಡಲತೀರದಲ್ಲಿ ದಿನವೂ ವಾಕ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ‘ಈ ಕಬ್ಬಿಣದ ಚೆಂಡು ಇದ್ದಕ್ಕಿದಂತೆ ಇಲ್ಲಿ ಹೇಗೆ ಪ್ರತ್ಯಕ್ಷವಾಯ್ತು ಎಂಬುದು ತಿಳಿಯುತ್ತಿಲ್ಲ. ಒಂದು ತಿಂಗಳಿನಿಂದ ನಾನು ದಿನವೂ ಅಲ್ಲಿ ವಾಕ್ ಮಾಡುತ್ತಿದೆ. ನಾನು ಅದನ್ನು ತಳ್ಳಲು ಯತ್ನಿಸಿದೆ ಆದರೆ ಅದು ಮಿಸುಕಾಡಲಿಲ್ಲ’ ಎಂದು ಅವರು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.