Single Eye Cobra : ಅಪರೂಪದ ದೃಶ್ಯ, ಓಕ್ಕಣ್ಣಿನ ನಾಗರಹಾವು ಪ್ರತ್ಯಕ್ಷ ! ಹಾವಿಗೆ ಒಂದೇ ಕಣ್ಣು ಇರಲು ಕಾರಣವೇನು ಗೊತ್ತೇ?
Single Eye Cobra : ನಾಗರಹಾವು ಸಾಮಾನ್ಯವಾಗಿ ಜನರ ಕಣ್ಣಿಗೆ ಕಾಣಿಸುವುದು ತುಂಬಾನೇ ಕಡಿಮೆ. ಹಿಂದೂ ಧರ್ಮದಲ್ಲಿ ನಾಗರ ಹಾವನ್ನು ದೇವರು ಎಂದು ಪೂಜಿಸುತ್ತಾರೆ. ಈ ಹಾವನ್ನು ಕಂಡರೆ ಭಕ್ತಿಯಿಂದ ಕೈಮುಗಿಯುತ್ತಾರೆ. ಕೆಲವರು ಹಾವಿನ ಜೊತೆ ಮಾತು ಕೂಡ ಆಡುತ್ತಾರೆ. ಸದ್ಯ ಕಾರವಾರ ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎಂಬವರ ಮನೆಯ ಬಳಿ ನಾಗರಹಾವೊಂದು ಕಾಣಿಸಿಕೊಂಡಿದ್ದು, ಈ ಹಾವು ಒಕ್ಕಣ್ಣಿನ (ಒಂದೇ ಕಣ್ಣು) ಹಾವಾಗಿತ್ತು (Single Eye Cobra). ಈ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.
ಒಕ್ಕಣ್ಣಿನ ಹಾವು ಕಾಣಸಿಗೋದು ತುಂಬಾನೇ ವಿರಳ. ಆದರೆ, ಆಕಾಶ ಎನ್.ಚೌಗ್ಲೆ ಎಂಬವರ ಮನೆಯ ಬಳಿ ಒಂದೇ ಕಣ್ಣಿನ ನಾಗರಹಾವು ಕಂಡುಬಂದಿದ್ದು, ಇದು ಸುಮಾರು 4.5 ಅಡಿಯ ಉದ್ದವಾಗಿತ್ತು ಎನ್ನಲಾಗಿದೆ. ಕೂಡಲೇ ಸ್ಥಳೀಯರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಬಿಲಾಲ್ ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣನಕರ್ ಅವರ ಮಾರ್ಗದರ್ಶನದಲ್ಲಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಈ ಹಾವನ್ನು ನಾಗಿಣಿ ಅಂದ್ರೆ ಹೆಣ್ಣು ಹಾವು ಎಂದು ಗುರುತಿಸಿದ್ದು, ಇದು ಒಂದು ಕಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡಿತ್ತು. ಬರೀ ಒಂದು ಕಣ್ಣಿನಿಂದ ಪ್ರಪಂಚ ನೋಡುತ್ತಿತ್ತು. ಇಂತಹ ಒಕ್ಕಣ್ಣಿನ ಹಾವು ಕಾಣಸಿಗೋದು ತುಂಬಾನೇ ವಿರಳ. ಈ ನಾಗರ ಹಾವಿಗೆ ಕಣ್ಣಿನ ಗುಳಿ ಮಾತ್ರವಿದ್ದು, ಕಣ್ಣುಗುಡ್ಡೆ ಇಲ್ಲ. ಕೆಲವೊಮ್ಮೆ ಹಾವುಗಳು ಮುಂಗುಸಿ ಜೊತೆ ಕಾದಾಡುವಾಗ ಕಣ್ಣನ್ನು ಕಳೆದುಕೊಳ್ಳವ ಸಾಧ್ಯತೆ ಇರುತ್ತದೆ. ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ಹೇಳಿದರು.
ಅಲ್ಲದೆ, ಅನುವಂಶೀಯವಾಗಿ ಹಠಾತ್ ಬದಲಾವಣೆಯಿಂದನೂ ಹೀಗೆ ಆಗುವುದುಂಟು . ಆದರೆ ಇದು ತುಂಬಾ ವಿರಳ. ಹಾಗೆಯೇ ಒಂದು ಕಣ್ಣಿನ ದೃಷ್ಠಿ ಕುಂಠಿತಗೊಂಡರೆ ಹಾವುಗಳ ಜೀವನಕ್ರಮದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅವುಗಳು ನಿಸರ್ಗದಲ್ಲಿ ಸಹಜ ಜೀವನವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು.