The mermaid: ಜಪಾನಲ್ಲಿ ಪತ್ತೆಯಾಯ್ತು 300 ವರ್ಷಗಳಷ್ಟು ಹಳೆಯ ಮತ್ಸ್ಯಕನ್ಯೆ! ಸಂಶೋಧನೆ ನಡೆಸಿದ ವಿಜ್ಞಾನಿಗಳು ತೆರೆದಿಟ್ಟರು, ಈ ಮೀನಿನ ಹೆಂಗಸ ರೋಚಕ ರಹಸ್ಯವನ್ನು!

The mermaid: ಪ್ರಕೃತಿಯ ಕೌತುಕಗಳನ್ನು ಬಲ್ಲವರು ಯಾರು ಹೇಳಿ? ದಿನವೊಂದಂತೆ ಒಂದೊಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಇಂತಹ ವಿಸ್ಮಯಗಳ ಪಟ್ಟಿಯಲ್ಲಿ ಕಾಲ್ಪನಿಕ ಎನಿಸಿರುವ ಮತ್ಸ್ಯ ಕನ್ಯೆಯೂ(The mermaid) ಒಬ್ಬಳೆನ್ನಬಹುದು. ಈ ಮತ್ಸ ಕನ್ಯೆಯನ್ನು ನಾವು ಹಾಲಿವುಡ್ ಸಿನಿಮಾ(Hollywood Movie) ಗಳಲ್ಲಿ ಅಥವಾ ಬೇರೆ ಬೇರೆ ವಿದೇಶಿಯ ಸಿನಿಮಾಗಳಲ್ಲಿ ನೋಡಿರುತ್ತೇವೆ. ನಿಜವಾಗಿಯೂ ಈತರದ ಮೀನಿನ ಹೆಂಗಸೊಬ್ಬಳು ಇದ್ದಾಳಾ? ಎನ್ನುವ ಪ್ರಶ್ನೆ ಇಂತಹ ಸಿನಿಮಾಗಳನ್ನು ನೋಡಿದಾಗಲೆಲ್ಲ ನಮ್ಮ ಮನದಲ್ಲಿ ಸುಳಿಯದೆ ಇರದು. ಆದರೀಗ ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ.

 

ಹೌದು, ಜಪಾನ್​ ವಿಜ್ಞಾನಿ(Japan scientist)ಗಳಿಗೆ 300 ವರ್ಷ ಹಳೆಯ ಮತ್ಸ್ಯಕನ್ಯೆ ರೂಪದಲ್ಲಿರುವ ಮಮ್ಮಿಯೊಂದು ದೊರಕಿದ್ದು ಅದರ ಕುರಿತು, ಅಧ್ಯಯನ ನಡೆಸಿದ್ದಾರೆ. ಅಲ್ಲದೆ ಈ ಮತ್ಸ್ಯಕನ್ಯೆ ಆಕಾರದಲ್ಲಿರುವ ಮಮ್ಮಿಯನ್ನು ಕಂಡು ವಿಜ್ಞಾನಿಗಳೇ ದಿಗ್ಭ್ರಮೆಗೊಂಡಿದ್ದಾರೆ. 12 ಇಂಚಿನ ಈ ನಿಗೂಢ ಜೀವಿಯ ಮಮ್ಮಿಯು 1736 ಮತ್ತು 1741 ರ ನಡುವೆ ಜಪಾನಿನ ಶಿಕೋಕು(Shikoku) ದ್ವೀಪದ ಪೆಸಿಫಿಕ್ ಮಹಾಸಾಗರದಲ್ಲಿ ಸಿಕ್ಕಿಬಿದ್ದಿದೆ ಎಂದು ಹೇಳಲಾಗಿದೆ. ಆದರೆ ಈಗ ಅದು ಜಪಾನ್​ನ ಅಸಾಕುಚಿ(Asakuchi) ನಗರದ ದೇವಾಲಯದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಈ ವಿಚಿತ್ರ ಆಕೃತಿಯ ಜೀವಿಯ ಮಮ್ಮಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಜಗತ್ತಿನಾದ್ಯಂತ ವೈರಲ್​ ಆಗಿದೆ. ಇದೆಂತಹ ಜೀವಿ ಎಂದು ನೆಟ್ಟಿಗರು ಕೂಡ ಅಚ್ಚರಿಪಟ್ಟಿದ್ದಾರೆ.

ಈ ಮತ್ಸ್ಯಕನ್ಯೆಯ ಒಟ್ಟು ಎತ್ತರವು 30 ಸೆಂ.ಮೀ ಇದೆ. ಇದಕ್ಕೆ ಎರಡು ಕೈಗಳಿವೆ. ಅಳುವ, ಹೆದರಿದ ಮುಖದಿಂದ ಕೂಡಿದೆ. ಈ ಮತ್ಸ್ಯಕನ್ಯೆ ತನ್ನ ತಲೆಯ ಮೇಲೆ ಕೂದಲನ್ನು ಹೊಂದಿದೆ. ಚೂಪಾದ ಹಲ್ಲುಗಳನ್ನು ಸಹ ಹೊಂದಿದೆ. ಅರ್ಧಭಾಗದಲ್ಲಿ ಮಾನವನ ದೇಹದಂತೆ ಕಂಡುಬರುತ್ತದೆ . ಆದರೆ ಕೆಳಗಿನ ಅರ್ಧಭಾಗದಲ್ಲಿ ಮೀನಿನ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಅದನ್ನು ಮತ್ಸ್ಯಕನ್ಯೆ ಇರಬಹುದು ಎಂದು ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ನಂತರ ಸಂಶೋಧನೆಗೂ ಒಳಪಡಿಸಿದ್ದರು.

ಜಪಾನ್‌ನ ಅಸಾಹಿ ಶಿಂಬುನ್ ಪತ್ರಿಕೆಯ ವರದಿಯ ಪ್ರಕಾರ, ಪೆಸಿಫಿಕ್ ಮಹಾಸಾಗರದಲ್ಲಿ ಮೀನುಗಾರಿಕಾ ಬಲೆಯಲ್ಲಿ ಸಿಕ್ಕಿಬಿದ್ದಿದೆ ಎಂದು ಹೇಳುವ ಪತ್ರದೊಂದಿಗೆ ಮಮ್ಮಿಯನ್ನು ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಒಣಗಿದ ಮತ್ಸ್ಯಕನ್ಯೆಯನ್ನು ಈ ಹಿಂದೆ ಜಪಾನ್​ನ ಒಂದು ಕುಟುಂಬವು ಇಟ್ಟುಕೊಂಡಿತ್ತು. ಹಲವು ವರ್ಷಗಳ ನಂತರ ಅದನ್ನು ಅಸಕುಚಿ ನಗರದ ಎಂಜುಯಿನ್ ದೇವಸ್ಥಾನ ಸ್ವಾಧೀನಪಡಿಸಿಕೊಂಡಿತು. ಅಲ್ಲದೆ ಇದನ್ನು 40 ವರ್ಷಗಳ ಹಿಂದೆ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುತ್ತಿತ್ತಂತೆ. ಬಳಿಕ ಅದನ್ನು ನಿಲ್ಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ದೇವಾಲಯದ ಪ್ರಧಾನ ಅರ್ಚಕ ಕೊಗೆನ್ ಕುಯಿಡಾ ‘ನಾವು ಅದನ್ನು ಪೂಜಿಸುತ್ತಿದ್ದು, ಇದು ಕರೋನಾ ವೈರಸ್ ಅನ್ನು ಓಡಿಸುತ್ತದೆಂದು ನಂಬಿದದೇವೆ’ ಎಂದು ಹೇಳಿದ್ದಾರೆ.

ಸದ್ಯ ಮಮ್ಮಿಯನ್ನು ಕುರಾಶಿಕಿ ವಿಜ್ಞಾನ ಮತ್ತು ಕಲಾ ವಿಶ್ವವಿದ್ಯಾಲಯವು ಸಿಟಿ ಸ್ಕ್ಯಾನಿಂಗ್‌ ಮೂಲಕ ಅಧ್ಯಯನ ನಡೆಸುತ್ತಿದೆ. ಸತತ ಒಂದು ವರ್ಷದಿಂದ, ಸಂಶೋಧಕರು ಈ ಮಮ್ಮಿಯ ಮೇಲೆ ವಿವಿಧ ಪರೀಕ್ಷೆಗಳನ್ನು ಮಾಡಿದ್ದಾರೆ. ಸಿಟಿ ಸ್ಕ್ಯಾನ್ ಮಾಡಿ ಹಲವಾರು ರೀತಿಯಲ್ಲಿ ಸಂಶೋಧನೆ ನಡೆಸಿದ್ದಾರೆ. ಇದೀಗ ಈ ಅಧ್ಯಯನದ ರೋಚಕ ಸತ್ಯ ಹೊರಬಿದ್ದಿದ್ದು, ಇದು ನಿಜವಾದ ಮತ್ಸ್ಯಕನ್ಯೆಯಲ್ಲ, ಅದು ಸಂಪೂರ್ಣವಾಗಿ ಕೃತಕವಾಗಿದೆ. ಅದರ ಹೊಟ್ಟೆಯಲ್ಲಿ ಮೂಳೆಗಳಿರಲಿಲ್ಲ. ಬರೀ ಪೇಪರ್, ಬಟ್ಟೆ, ಹತ್ತಿಯಿಂದ ಕೂಡಿತ್ತು. ಹೀಗಾಗಿ ಇದನ್ನು 1800ರಲ್ಲಿ ಯಾರೋ ಮಾಡಿರಬಹುದು ಎಂದು ಅಂದಾಜಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದರ ಕುರಿತು ಮಾಹಿತಿ ನೀಡಿದ ಸಂಶೋಧಕರು, ಅದರ ಸೊಂಟದಲ್ಲಿ ಬಾಲದಂತಹ ಭಾಗವನ್ನು ಜೋಡಿಸಲಾಗಿದ್ದು, ಅದು ಮೀನಿನ ಬಾಲದಿಂದ ಮಾಡಿದಂತಿದೆ. ಮತ್ತು ಮುಖದ ದವಡೆ ಮತ್ತು ಹಲ್ಲುಗಳನ್ನೂ ಕೂಡ ಬೇರಾವುದೋ ಮೀನಿನಿಂದ ಸಂಗ್ರಹಿಸಿ ಜೋಡಿಸಲಾಗಿದೆಯಂತೆ. ಒಟ್ಟಿನಲ್ಲಿ ಸಿಕ್ಕಾಪಟ್ಟೆ ಪ್ರಚಾರ ಗಿಟ್ಟಿಸಿಕೊಂಡ ಈ ಮತ್ಸ್ಯಕನ್ಯೆ ನಿಜವಾಗಿ ಮತ್ಸ್ಯಕನ್ಯೆಯಲ್ಲ ಎಂಬುದು ಬಹಿರಂಗವಾಗಿ ಸತ್ಯ ವಿಚಾರ ಏನೆಂದು ಜನರಿಗೆ ಗೊತ್ತಾಗಿದೆ.

Leave A Reply

Your email address will not be published.