Smartphone Charging: ಇನ್ನು ಮಾನವನ ಮೂತ್ರದಿಂದಲೂ ಚಾರ್ಜ್ ಆಗುತ್ತೆ ಸ್ಮಾರ್ಟ್ಫೋನ್! ಹೊಸ ಆವಿಷ್ಕಾರದತ್ತ ಬ್ರಿಟನ್ ವಿಜ್ಞಾನಿಗಳ ಚಿತ್ತ!

Smartphone Charging: ಇದು ಸ್ಮಾರ್ಟ್‌ಫೋನ್ ಯುಗ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿ ಸ್ಮಾರ್ಟ್‌ಫೋನ್ (Smartphone) ಇದ್ದೇ ಇರುತ್ತದೆ. ಅಲ್ಲದೆ ಇಂದು ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೆ ಪ್ರತಿ ಮೊಬೈಲಿನಲ್ಲಿ ಬರುವ ಸಮಸ್ಯೆಯೆಂದರೆ ಬ್ಯಾಟರಿ. ಇನ್ನು ಕೆಲವು ಮೊಬೈಲ್ ಗಳಲ್ಲಿ ಫುಲ್ ಚಾರ್ಜ್ ಹಾಕಿದರೂ ಒಂದು ಗಂಟೆಯೊಳಗೆ ಖಾಲಿಯಾಗುತ್ತದೆ. ಮತ್ತೆ, ಅದನ್ನು ಚಾರ್ಜ್(Smartphone Charging) ಮಾಡಿ ಮಾಡಿ ಆ ಫೋನ್ ಬಳಸುವವರಿಗೆ ಬೇಸರವಾಗುತ್ತದೆ. ಮನೆಯಲ್ಲಿದ್ದರೇನೋ ಮತ್ತೆ ಚಾರ್ಜ್ ಮಾಡಬಹುದು. ಆದರೆ ದೂರದ ಊರಿಗೆ ಹೋದಾಗ ಈ ಸಮಸ್ಯೆ ಎದುರಾದರೆ? ಇಷ್ಟು ದಿನ ಪವರ್ ಬ್ಯಾಂಕ್ ಮೊರೆ ಹೋಗ್ತಿದ್ದೆವು. ಆದರೆ ಇನ್ನು ಮಾನವರ ಮೂತ್ರದ ಮೂಲಕವೇ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದು! ಅರೇ ಇದು ಸಾಧ್ಯವೇ ಅನ್ಕೊಳ್ತಿದ್ದೀರಾ?

ಹೌದು, ನಮ್ಮ ದೇಹದಿಂದ ಹೊರಬರುವ ಮೂತ್ರದಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್ ನಿಂದ ಮೊಬೈಲ್ ಅಥವಾ ಲ್ಯಾಪ್ ಟಾಪ್ ಚಾರ್ಜ್ ಮಾಡಬಹುದು. ಹಾಗಾಗಿ ಇನ್ಮುಂದೆ ಎಲ್ಲಾದರೂ ಹೋದಾಗ ಮೊಬೈಲ್​ ಚಾರ್ಜ್ ಮುಗಿದರೆ ಪವರ್​​ ಬ್ಯಾಂಕ್​ ಅಥವಾ ಚಾರ್ಜರ್​ನ ಅಗತ್ಯವಿಲ್ಲ. ಬದಲಾಗಿ ಮಾನವರ ಮೂತ್ರದ ಮೂಲಕ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದು. ಇದನ್ನು ಸಾಧ್ಯವಾಗಿಸಲು ಬ್ರಿಟನ್ ವಿಜ್ಞಾನಿಗಳಿಂದ ನಿರಂತರವಾಗಿ ಸಂಶೋಧನೆಗಳು, ಪ್ರಯೋಗಗಳು ನಡೆಯುತ್ತಿವೆ. ಬ್ರಿಟಿಷ್ ಮಾಧ್ಯಮದ ವರದಿಗಳ ಪ್ರಕಾರ, ವಿಜ್ಞಾನಿಗಳು ಈ ಕೆಲಸದಲ್ಲಿ ಇದೀಗ ಸ್ವಲ್ಪ ಯಶಸ್ಸನ್ನು ಸಾಧಿಸಿದ್ದಾರಂತೆ.

ಗೋವಿನ ಸಗಣಿ ಮತ್ತು ಮೂತ್ರದಿಂದ ಇಂಧನವನ್ನು ಪಡೆಯುವುದು ನಮಗೆಲ್ಲರಿಗೂ ತಿಳಿದಿದೆ. ಮಾನವನ ಮಲಮೂತ್ರ ಸಹ ಈಗ ಈ ಸಾಲಿಗೆ ಸೇರ್ಪಡೆಯಾಗಲಿದೆ. ಮಾನವ ಮೂತ್ರದಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದಿಸುವುದರಿಂದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಇದು ಸಹಾಯ ಮಾಡುತ್ತದೆ. ಏಕೆಂದರೆ, ಪ್ರಸ್ತುತ ವಿದ್ಯುತ್ ಅಗತ್ಯವನ್ನು ನೋಡಿದರೆ, ವಿದ್ಯುತ್ ಉತ್ಪಾದನಾ ವಲಯದ ಮೇಲೆ ಭಾರೀ ಒತ್ತಡವಿದೆ. ಈ ಒತ್ತಡವನ್ನು ಕಡಿಮೆ ಮಾಡಲು, ವಿಜ್ಞಾನಿಗಳು ವಿದ್ಯುತ್ ಉತ್ಪಾದನೆಯ ಹೊಸ ಮೂಲಗಳನ್ನು ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸಿದರೆ, ಅದು ಭವಿಷ್ಯಕ್ಕೆ ಹೆಚ್ಚು ಪ್ರಯೋಜನಕಾರಿ ವಿಷಯವಾಗಿದೆ. ಏಕೆಂದರೆ ಮಾನವ ಮಲವಿಸರ್ಜನೆಯು ನವೀಕರಿಸಬಹುದಾದ ಒಂದು ಸಂಪನ್ಮೂಲವಾಗಿದೆ. ಮೂತ್ರದಿಂದ ಉತ್ಪತ್ತಿಯಾಗುವ ವಿದ್ಯುತ್ ಮೂಲಕ ಚಿಕ್ಕ ಮೊಬೈಲ್ ಅನ್ನು ಚಾರ್ಜ್ ಮಾಡಬಹುದು ಎಂದು ಪ್ರಯೋಗಗಳು ಸಾಬೀತುಪಡಿಸಿವೆ. ಈ ರೀತಿಯ ವಿದ್ಯುತ್ ಉತ್ಪಾದನಾ ಪ್ರಕ್ರಿಯೆಯನ್ನು ಕೈಗೊಳ್ಳಲು ‘ಮೈಕ್ರೊಬಿಯಲ್ ಫ್ಯೂಯಲ್ ಸೆಲ್’ (microbial fuel cell)ಅನ್ನು ಬಳಸಲಾಗುತ್ತದೆ. ಇದು ಶಕ್ತಿಯನ್ನು ಪರಿವರ್ತನೆ ಮಾಡುತ್ತದೆ. ಇದಕ್ಕಾಗಿ ಮೂತ್ರದಲ್ಲಿ ಕೆಲವು ಬ್ಯಾಕ್ಟೀರಿಯಾಗಳೂ ಬೆರೆತಿರುತ್ತವೆ.

ಬ್ರಿಸ್ಟಲ್ ರೋಬೋಟಿಕ್ಸ್ ಪ್ರಯೋಗಾಲಯದಲ್ಲಿ ಮೂತ್ರದಿಂದ ತಯಾರಿಸಿದ ಈ ವಿದ್ಯುತ್ ಉಚಿತವಾಗಿರುತ್ತದೆ. ವಿಜ್ಞಾನಿಗಳ ಪ್ರಕಾರ, ಈ ತಂತ್ರಜ್ಞಾನ ಯಶಸ್ವಿಯಾದರೆ, ಇದನ್ನು ಸ್ನಾನಗೃಹಗಳಲ್ಲಿ ಬಳಸಬಹುದು. ಈ ವಿದ್ಯುತ್ ಶವರ್, ಲೈಟಿಂಗ್, ರೇಜರ್‌ಗಳು ಮತ್ತು ಸ್ಮಾರ್ಟ್‌ಹೋಮ್‌ ಡಿವೈಸ್​ಗಳನ್ನು(smart home device) ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಪ್ರಯೋಗ ಇದೇ ಮೊದಲು ನಡೆಯುತ್ತಿರುವುದಾಗಿದ್ದು, ಇದುವರೆಗೆ ಕೇವಲ ಪ್ರಾಣಿಗಳ ಮೂತ್ರಗಳಿಂದ ವಿದ್ಯುತ್ ಅನ್ನು ಉತ್ಪಾದಿಸುವ ಸಂಶೋಧನೆಯನ್ನು ಮಾಡಿದ್ದರು. ಆದರೆ ಈಗ ಮಾನವರ ಮೂತ್ರದಿಂದಲೂ ವಿದ್ಯುತ್​ ಉತ್ಪಾದಿಸಬಹುದೆಂದು ಸಾಬೀತಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇದು ಪೂರ್ಣ ಕಾರ್ಯವೈಖರಿ ಅಭಿವೃದ್ಧಿಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Leave A Reply

Your email address will not be published.