Crime News : ಮದುವೆ ನಿರಾಕರಣೆ, ನಡುರಸ್ತೆಯಲ್ಲೇ ಯುವತಿಯ ಕೂದಲೆಳೆದು ಚಾಕು ಇರಿದ ವ್ಯಕ್ತಿ !
Crime News Raipur : ಮದುವೆ ಎಂಬ ಬಂಧಕ್ಕೆ ಹುಡುಗ ಹುಡುಗಿಯ ಸಮ್ಮತಿ ಅವಶ್ಯಕವಾಗಿದ್ದು, ಒಪ್ಪಿಗೆ ಇಲ್ಲದ ಬಾಂಧವ್ಯ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳು ಬೀದಿ ನಾಟಕವಾಗಿ ಮಾರ್ಪಾಡಾಗಿ ಹಲ್ಲೆ ಕೊಲೆ ಮೂಲಕ ಅಂತ್ಯ ಕಂಡದ್ದು ಕೂಡ ಇದೆ. ಇದೇ ರೀತಿ, ಅಪ್ರಾಪ್ತ ಬಾಲಕಿಯೊಬ್ಬಳು ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕ ಮಾಡಿದ್ದೇನು ಗೊತ್ತೇ?
ಛತ್ತೀಸ್ಗಢದ ರಾಯ್ಪುರದಲ್ಲಿ (Raipur) ಅಪ್ರಾಪ್ತ ಯುವತಿಯೊಬ್ಬಳು ಮದುವೆಯಾಗಲು ನಿರಾಕರಿಸಿದ್ದ ಹಿನ್ನೆಲೆ ಹಾಡ ಹಗಲೇ ನಡು ರಸ್ತೆಯಲ್ಲಿ ಆಕೆಯ ತಲೆ ಕೂದಲನ್ನು ಭೂಪನೊಬ್ಬ ಹಿಡಿದೆಳೆದು ಆಕೆಗೆ ಚಾಕುವಿನಿಂದ ಇರಿದ (Crime News Raipur) ಆಘಾತಕಾರಿ ಘಟನೆ ಮುನ್ನಲೆಗೆ ಬಂದಿದೆ. ರಾಯ್ಪುರ ನಗರದ ಗುಧಿಯಾರಿ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಆರೋಪಿ ಓಂಕಾರ್ ತಿವಾರಿ ಅಲಿಯಾಸ್ ಮನೋಜ್ (47) ಎಂದು ಗುರುತಿಸಲಾಗಿದ್ದು, ಅಪ್ರಾಪ್ತ ಬಾಲಕಿಯನ್ನು(16) ಮದುವೆಯಾಗುವಂತೆ ಬೆದರಿಸಿ ಹಾಡಹಗಲೇ (Threat) ಆಕೆಯ ಕೂದಲಲ್ಲಿ ಹಿಡಿದೆಳೆದುಕೊಂಡು ಹೋಗಿರುವ ವಿಕೃತ ಘಟನೆ ವರದಿಯಾಗಿದೆ.
ಶನಿವಾರ ಸಂಜೆ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಆರೋಪಿಯು ಬಾಲಕಿಗೆ ಸಾರ್ವಜನಿಕ ಸ್ಥಳದಲ್ಲೇ ಕಿರುಕುಳ ನೀಡುತ್ತಿದ್ದರು ಕೂಡ ಅಲ್ಲಿ ನೆರೆದಿದ್ದ ಜನರು ಅಲ್ಲಿ ನಡೆಯುತ್ತಿದ್ದ ನಾಟಕ ಪ್ರಹಸನ ನೋಡುವುದರಲ್ಲೇ ತಲ್ಲೀನರಾಗಿದ್ದು, ಅದರಲ್ಲಿ ಕೆಲವರು ಈ ಘಟನೆಯ ದೃಶ್ಯಾವಳಿಗಳನ್ನು ಸೆರೆಹಿಡಿದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಆರೋಪಿ ಎಡಗೈಯಲ್ಲಿ ಬಾಲಕಿಯ ತಲೆಗೂದಲನ್ನು ಹಿಡಿದುಕೊಂಡು ಹಿಂಸೆ ನೀಡಿ ಅಮಾನುಷವಾಗಿ ಹಿಡಿದೆಳೆದುಕೊಂಡು ಹೋಗಿದ್ದು ಕಂಡುಬರುತ್ತದೆ. ಅಷ್ಟೇ ಅಲ್ಲದೆ, ಆಕೆಗೆ ಹರಿತವಾದ ಆಯುಧದಿಂದ ಇರಿದು ಹಲ್ಲೆ ನಡೆಸುತ್ತಾ ಬೆದರಿಕೆ ಹಾಕುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹೀಗೆ ವೀಡಿಯೋ ವೈರಲ್ ಆಗಿದ್ದು, ಇದನ್ನು ಗಮನಿಸಿದ ಖಾಕಿ ಪಡೆ ಕೂಡಲೇ ಕಾರ್ಯ ಪ್ರವೃತ್ತರಾಗಿದ್ದು ಓಂಕಾರ್ ತಿವಾರಿ ಅಲಿಯಾಸ್ ಮನೋಜ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣದ ಕುರಿತಂತೆ ರಾಯ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಪ್ರಶಾಂತ್ ಅಗರವಾಲ್ ಅವರು ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ತ ಬಾಲಕಿ ಈ ಹಿಂದೆ ಆರೋಪಿ ಓಂಕಾರ್ ತಿವಾರಿ ಅಲಿಯಾಸ್ ಮನೋಜ್ ಎಂಬಾತನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದ್ದು, ಈ ವೇಳೆ, ಆರೋಪಿ ಬಾಲಕಿಗೆ ಆತನನ್ನು ಮದುವೆಯಾಗುವಂತೆ ಒತ್ತಾಯ ಮಾಡಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದಲ್ಲದೆ, ಬಾಲಕಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಲು ಹವಣಿಸುತ್ತಿದ್ದ ಯತ್ನಿಸುತ್ತಿದ್ದ ಎನ್ನಲಾಗಿದ್ದು, ಹೀಗಾಗಿ, ಮನನೊಂದ ಬಾಲಕಿ ಆತನ ಅಂಗಡಿಯಿಂದ ಕೆಲಸ ಬಿಡುವ ಪ್ರಸ್ತಾಪ ಎತ್ತಿದ್ದು, ಇದರಿಂದ ಆಕೆ ದೂರ ಸರಿಯುತ್ತಾಳೆ ಎಂಬ ವಿಚಾರ ಮನದಟ್ಟಾಗಿ ಆರೋಪಿಯು ಸಂತ್ರಸ್ತ ಬಾಲಕಿಯ ವಿರುದ್ಧ ತಿರುಗಿಬಿದ್ದು ಆಕೆಗೆ ಹಿಂಸೆ ನೀಡಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ವರಿಸಲು ಅಪ್ರಾಪ್ತ ಬಾಲಕಿಗೆ ಇಷ್ಟವಿರಲಿಲ್ಲ ಜೊತೆಗೆ ಆಕೆಯ ತಾಯಿಗೂ ಈ ಸಂಬಂಧ ಇಷ್ಟವಿರದ ಹಿನ್ನೆಲೆ ಆರೋಪಿ ಬಾಲಕಿಗೆ ಬೆದರಿಸಿ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿಯು ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದ
ಈ ನಡುವೆ ಆರೋಪಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ಬಾಲಕಿಯನ್ನು ತಕ್ಷಣವೇ ಅಲ್ಲಿ ನೆರೆದಿದ್ದ ಯಾರೋ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆ, ವೈದ್ಯರು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯರು ಆಕೆಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.