Putturu: ಸವಣೂರು ಕೆರೆಯ ಸುತ್ತಲಿನ ಸರಕಾರಿ ಜಾಗ ಒತ್ತುವರಿ ವಿಚಾರ : ಕಂದಾಯ ಇಲಾಖೆ ಸ್ಪಂದಿಸದಿದ್ದರೆ ಸದಸ್ಯರ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ

Putturu: ಪುತ್ತೂರು : ಸವಣೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಕಂಚಿಕಾರ ಕೆರೆಯ ಸುತ್ತಲಿನ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಕೆರೆ ಸುತ್ತಲಿನ ಜಾಗದ ಅತಿಕ್ರಮಣದ ಬಗ್ಗೆ ಗ್ರಾಪಂ ನಿರ್ಣಯ ಕೈಗೊಂಡು ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಫೆ.20ರಂದು ದೋಳ್ಪಾಡಿಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮವಿದೆ.

ಅದಕ್ಕೆ ಮೊದಲು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್‌ನ ಎಲ್ಲಾ 21 ಸದಸ್ಯರೂ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಸವಣೂರು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಎಚ್ಚರಿಸಿದ್ದಾರೆ.

ಪುತ್ತೂರಿನ(Putturu) ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸವಣೂರು ಗ್ರಾಪಂ ಅಧ್ಯಕ್ಷೆ ರಾಜೀವಿ ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ಅವರು ಕಂಚಿಕಾರ ಕೆರೆಯು ಬ್ರಿಟೀಷರ ಕಾಲದಲ್ಲಿಯೇ ಅಭಿವೃದ್ಧಿ ಪಡಿಸಲಾಗಿರುವ ಐತಿಹಾಸಿಕ ಕೆರೆ ಇದಾಗಿದೆ. ಸುಮಾರು 3 ಎಕ್ರೆಗೂ ಮಿಕ್ಕಿ ವಿಸ್ತ್ರತವಾಗಿದ್ದ ಈ ಕೆರೆಯಲ್ಲಿ ಈಗಾಗಲೇ 1.30 ಎಕ್ರೆ ವ್ಯಾಪ್ತಿಯ ಕೆರೆಯನ್ನು ಪಂಚಾಯಿತಿಗೆ ಹಸ್ತಾಂತರಿಸಲಾಗಿದ್ದು, ಉಳಿದ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ಇದನ್ನು ತೆರವು ಮಾಡುವಂತೆ ಪಂಚಾಯಿತಿ ವತಿಯಿಂದ ಕಳೆದ 3 ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿಲ್ಲ. ಈ ಬಗ್ಗೆ ಪಂಚಾಯಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತ ಅಧಿಕಾರಿಗಳಿಗೂ ದೂರು ನೀಡಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು. ಆದರೆ ಈ ನಡುವೆ ಅತಿಕ್ರಮಣ ಮಾಡಿರುವ ವ್ಯಕ್ತಿಯೋರ್ವರು ನ್ಯಾಯಾಲಯದಲ್ಲಿ ತಡೆ ತಂದಿರುವ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿಲ್ಲ ಎಂದು ತಿಳಿದು ಬಂದಿತ್ತು.

ಇದೀಗ ಜಿಲ್ಲಾಧಿಕಾರಿಗಳು ಕೆರೆ ಜಾಗವನ್ನು ತೆರವುಗೊಳಿಸಿ ಪೂರ್ಣ ಪ್ರಮಾಣದ ಜಾಗವನ್ನು ಪಂಚಾಯತ್ ಸುಪರ್ದಿಗೆ ನೀಡಬೇಕು. ಅಲ್ಲದೆ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸದಸ್ಯರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಸದಸ್ಯರಾದ ಭರತ್ ರೈ,ಬಾಬು ಎನ್, ಎಂ.ಎ.ರಫೀಕ್, ಗಿರಿಶಂಕರ ಸುಲಾಯ, ಅಬ್ದುಲ್ ರಝಾಕ್, ಸುಂದರಿ ಬಂಬಿಲ, ಚಂದ್ರಾವತಿ ಸುಣ್ಣಾಜೆ , ಸತೀಶ್ ಅಂಗಡಿಮೂಲೆ, ತೀರ್ಥರಾಮ ಕೆಡೆಂಜಿ, ತಾರಾನಾಥ ಬೊಳಿಯಾಲ ಉಪಸ್ಥಿತರಿದ್ದರು.

Leave A Reply

Your email address will not be published.