Dumbphone : 35 ಕೋಟಿಗೂ ಅಧಿಕ ಜನ ಈ ರೂ.1500 ಪೋನ್ ಖರೀದಿಸಲು ಕಾರಣವೇನು? ಇಲ್ಲಿದೆ ಉತ್ತರ

ಇಂದಿನ ಇಂಟರ್ನೆಟ್(internet) ಪ್ರಪಂಚದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ (mobile) ಎಂಬ ಮಾಯವಿ ಇದ್ದೇ ಇದೆ. ಅದರಲ್ಲೂ ಹೆಚ್ಚಾಗಿ ಸ್ಮಾರ್ಟ್’ಫೋನ್ ಬಳಕೆದಾರರು ಎಂದರೆ ತಪ್ಪಾಗಲಾರದು. ಸ್ಮಾರ್ಟ್’ಫೋನ್(smartphone) ಇಲ್ಲದೆ, ಯಾವುದೇ ಕೆಲಸವನ್ನು ಸಾಧಿಸಲು ಸವಾಲೇ ಸರಿ. ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಪರಿಣಾಮವಾಗಿ ಮಾನವ ಜೀವನವು ತೀವ್ರವಾಗಿ ಬದಲಾಗಿದೆ. ಆದರೆ ಮತ್ತೊಂದೆಡೆ ಗ್ರಾಹಕರು ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಿಂದ ದೂರ ಸರಿಯುತ್ತಿದ್ದಾರೆ ಮತ್ತು ಅದೇ ಹಳೆಯ ಡಂಬ್‌ಫೋನ್‌ಗಳತ್ತ ಸಾಗುತ್ತಿದ್ದಾರೆ.

 

ಇಂಟರ್ನೆಟ್, ಯಾವುದೇ ಫೀಚರ್‌ಗಳನ್ನು, ಅಪ್ಲಿಕೇಶನ್‌ಗಳನ್ನು ಸಹ ಹೊಂದಿಲ್ಲದ ಈ ಡಂಬ್ ಫೋನಿನಿಂದ ಕಾಲ್ ಮಾಡಬಹುದು, ಮೆಸೇಜ್ ಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಲು ಸಾಧ್ಯ. ಫೋಟೋಗ್ರಫಿಗಾಗಿ ಬೇಸಿಕ್ ಕ್ಯಾಮೆರಾವನ್ನು ಹೊಂದಿದೆ. ಇನ್ನು ಮನರಂಜನೆಯ ವಿಷಯಕ್ಕೆ ಬಂದರೆ, ಕೇವಲ ಇದರಲ್ಲಿ FM ರೇಡಿಯೊದಂತಹ ಫೀಚರ್‌ ಲಭ್ಯವಿದೆ. ಆಂಡ್ರಾಯ್ಡ್ ಅನ್ನು ಅಭಿವೃದ್ಧಿಪಡಿಸುವ ಮೊದಲು ಬಳಸುತ್ತಿದ್ದ ಈ ಬೇಸಿಕ್ ಸೆಟ್ ಫೋನ್ ಮತ್ತೆ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.

ಭಾರತದಲ್ಲಿ ಪ್ರತಿ ವರ್ಷ ಸರಿಸುಮಾರು 17 ಕೋಟಿ ಮೊಬೈಲ್ ಫೋನ್‌ಗಳು ಮಾರಾಟವಾಗುತ್ತವೆ. ದೇಶದ 350 ಮಿಲಿಯನ್ ಜನರು ಮೊಬೈಲ್ ಬಳಸುತ್ತಿದ್ದಾರೆ. ಅವರಲ್ಲಿ 120 ಕೋಟಿಗೂ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರಿದ್ದಾರೆ. ಹಾಗೂ ಸುಮಾರು 35 ಕೋಟಿ ಜನರು ಡಂಬ್‌ಫೋನ್‌ (Dumb phone) ಗಳನ್ನು ಬಳಸುತ್ತಾರೆ. ವಾಸ್ತವವಾಗಿ 2018 ಮತ್ತು 2021 ರ ನಡುವೆ Google ನಲ್ಲಿ ಶೇ.89 ಪ್ರತಿಶತಕ್ಕಿಂತ ಹೆಚ್ಚು ಜನ ಡಂಬ್‌ಫೋನ್ ಹುಡುಕಾಟಗಳನ್ನು ಮಾಡಿದ್ದಾರೆ. ಬ್ರಿಟನ್‌ನಲ್ಲಿ ಪ್ರತಿ 10 ಜನರಲ್ಲಿ ಒಬ್ಬರು ಡಂಬ್‌ಫೋನ್‌ಗಳನ್ನು ಬಳಸುತ್ತಾರೆ ಎಂದು ವರದಿಗಳು ತಿಳಿಸಿವೆ. ಅತ್ಯುತ್ತಮ ಫೀಚರ್‌ಗಳಿಂದ ಹೆಸರುವಾಸಿಯಾಗಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಟ್ಟು ಫೀಚರ್‌ಲೆಸ್ ಡಂಬ್‌ಫೋನ್‌ಗಳ ಕಡೆ ಜನರ ಮನಸ್ಸು ವಾಲಿತಾದರೂ ಯಾಕೆ ಗೊತ್ತಾ?

ಮುಖ್ಯವಾಗಿ ಡಂಬ್‌ಫೋನ್ ಬೆಲೆಯು ಅತ್ಯಂತ ಕಡಿಮೆಯಾಗಿದ್ದು ಇದರ ಬಳಕೆ ಹೆಚ್ಚಾಗುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಲಿರುವ ಇತರ ಫೋನ್‌ಗಳಿಗೆ ಹೋಲಿಸಿದರೆ ಇವುಗಳ ಬೆಲೆ ಅಗ್ಗವಾಗಿದೆ. ಭಾರತದಲ್ಲಿ ಡಂಬ್‌ಫೋನ್‌ನ ಬೆಲೆ ಸಾಮಾನ್ಯವಾಗಿ 1500 ರಿಂದ 3000 ರೂಪಾಯಿಗಳ ನಡುವೆ ಇರುತ್ತದೆ. ಇದರಲ್ಲಿ ಫೀಚರ್ ಇಲ್ಲದೆ ಇದ್ದರು, ಇದರ ಬಾಳಿಕೆ ಮಾತ್ರ ದೀರ್ಘಕಾಲವಿರುತ್ತದೆ.

ಈ ಡಂಬ್‌ಫೋನ್‌ಗಳು ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಪ್ರಬಲವಾಗಿವೆ ಹಾಗೂ ಇವು ಸುಲಭವಾಗಿ ತುಕ್ಕು ಹಿಡಿಯುವುದಿಲ್ಲ. ಅಷ್ಟೇ ಅಲ್ಲದೆ ಸ್ಮಾರ್ಟ್‌ಫೋನ್‌ನಂತೆ ಮತ್ತೆ ಮತ್ತೆ ಚಾರ್ಜ್ ಮಾಡುವ ಕಿರಿಕಿರಿಯಿಲ್ಲ. ಇದರ ಬ್ಯಾಟರಿ ಆಯುಷ್ಯವು ಹಲವಾರು ದಿನಗಳವರೆಗೆ ಬಾಳಿಕೆ ಬರುತ್ತದೆ. ಇದು ಫೋನ್ ಗೆ ಸಂಬಂಧಿಸಿದ ವಿಷಯವಾದರೆ, ಜಗತ್ತಿನಾದ್ಯಂತ ನಡೆದ ಹಲವು ಸಂಶೋಧನೆಗಳ ವರದಿ ಇನ್ನೊಂದು ಅಚ್ಚರಿ ವಿಷಯವನ್ನು ಹೇಳಿದೆ.

ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಜ್ಞಾಪಕ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ನಕಾರಾತ್ಮಕತೆ ಹೆಚ್ಚುತ್ತಿದೆ. ಅಷ್ಟೇ ಅಲ್ಲದೆ ವಂಚನೆ, ಸೈಬರ್ ಕ್ರೈಂ ಮತ್ತು ಸೆಲ್‌ಫೋನ್‌ಗಳಿಂದ ಡೇಟಾ ಕಳ್ಳತನದ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದೆ. ಸ್ಮಾರ್ಟ್ ಫೋನ್ ಗಳಿಂದ ಆಗುವ ದುಷ್ಪರಿಣಾಮಗಳ ಕಾರಣದಿಂದಾಗಿ ಈ ಡಂಬ್ ಫೋನ್ ಗಳನ್ನು ಮತ್ತೆ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.